● ರಿಸ್ಟ್ ವಾಚ್ ಮಾರಿ ಗೆಳೆಯ ಕೊಟ್ಟ ಹಣದಲ್ಲೇ ಸುಂದರ ಬದುಕು ಕಟ್ಟಿಕೊಂಡ ಚರಣ ರಾಜ! ●
     ■ ಪ್ರಾಮಿಸ್ ಮಾಡಿರುವಂತೆ ಮತ್ತೊಂದು ಹೊಸ ಪುಸ್ತಕ 'ಸಾಂಪ್ರತಾ' ಹೆಚ್ಚು-ಕಮ್ಮಿ ರೆಡಿಯಾಗಿದೆ. ಪತ್ರ ರೂಪದ ಅದರ ಒಂದು ಝಲಕ್ ಇಲ್ಲಿದೆ :

     ಆತ್ಮೀಯ ಚರಣರಾಜ್, ಏನು ಹೇಳಲಿ? ಏನನ್ನ ಬರೆಯಲಿ? ಕೆಲವೊಮ್ಮೆ ಚೆಂದದ ಸಬ್ಜೆಕ್ಟ್ ಇರುತ್ತದೆ, ಬರೆಯುವುದು ಕಷ್ಟವಾಗುತ್ತದೆ. ಮತ್ತೆ ಕೆಲವೊಮ್ಮೆ ಸಬ್ಜೆಕ್ಟ್ ಇರುವುದಿಲ್ಲ, ಸರಾಗ ಬರೆದು ಬಿಡುತ್ತೇನೆ. ಇದರಲ್ಲಿ ಮೊದಲ ಬೇನೆ ನನ್ನದು. ಅದ್ಭುತವಾದ ಸಬ್ಜೆಕ್ಟ್ ಕೊಟ್ಟಿದ್ದು ನೀವೇ. ಆದರೆ ಅದನ್ನು ಅಕ್ಷರ ರೂಪಕ್ಕಿಳಿಸಲು ಒದ್ದಾಡುತ್ತಿದ್ದೇನೆ! 
     ಇರಲಿ ಗೆಳೆಯರೇ, ಯಾವುದಕ್ಕೂ ಬರೆಯಲು ಹೊರಟಿದ್ದೇನೆ, ಬರೆಯಲೇ ಬೇಕು. ಹೇಗಿದ್ದೀರಿ? ಚೆನ್ನೈನಲ್ಲಿದ್ದೀರಿ ಅಲ್ವಾ? ಹೈದರಾಬಾದಿನಂತೆ ಚೆನ್ನೈ ಕೂಡಾ ನಿಮ್ಮ ಕರ್ಮಭೂಮಿಯಲ್ಲವೇ? ಪತ್ರ ಆರಂಭಿಸುವ ಮೊದಲು ಅದರ ಪ್ರಾರಂಭಿಕ ಹಂತದ ಸಂಪ್ರದಾಯವನ್ನು ಮುರಿಯೋದುಂಟಾ ಮಿತ್ರರೇ? ಹಾಗಾಗಿ ಹೀಗೆ ಆರಂಭಿಸುತ್ತಿದ್ದೇನೆ : ನಾವು ಕ್ಷೇಮ, ನಿಮ್ಮ ಕ್ಷೇಮ ಸಮಾಚಾರವನ್ನು ಆಗಾಗ ತಿಳಿಸುತ್ತಾ ಇರಿ. ಸಾಂಪ್ರತಾ ತಿಳಿಸುವುದೇನೆಂದರೆ :
     ಇಂದಿಗೆ ಬರೋಬ್ಬರಿ 40 ವರ್ಷಗಳ ಹಿಂದೆ ನೀವು ಗಾಂಧಿನಗರದ 'ಮೋತಿಮಹಲ್' ಹೋಟೆಲಿನ ಮೆಟ್ಟಿಲ ಬಳಿ ಅಸಹಾಯಕರಾಗಿ ನಿಂತಿದ್ದೀರಿ. ಮುಂದೇನು ಎನ್ನುವ ಯೋಚನೆ ತಲೆ ತಿನ್ನುತ್ತಿತ್ತು. ಅಸಾಧ್ಯ ಹಸಿವು. ಜೇಬಲ್ಲಿ ಕಾಸಿಲ್ಲ. ಏನು ಮಾಡುವುದೆಂದು ಯೋಚಿಸುತ್ತಾ ನಿಂತಿದ್ದಾಗ ನಿಮ್ಮ ಹತ್ತಿರ ಬಂದವನೇ ಈ ಬಿ.ಎಸ್.ರಾವ್ ಎಂಬ ವ್ಯಕ್ತಿ! ಆತ ಬೀಡ ಹಾಕಲು ಬಂದಿದ್ದ. ನಿಮ್ಮ ಅಸಹಾಯಕ ಸ್ಥಿತಿಯನ್ನು ಕಂಡು ಅವನಿಗೆ ಏನನ್ನಿಸಿತೋ ಏನೋ? ಹತ್ತಿರ ಬಂದು ನಿಮ್ಮಲ್ಲಿ ಕೇಳಿದ : 'ಚಾ ಕುಡಿಯೋಣವಾ?'. ನೀವು ಹೇಳಿದ್ರಿ : 'ಜೇಬಲ್ಲಿ ನಯಾಪೈಸೆ ಇಲ್ಲ. ಚಾ ಕುಡಿಸೋದಿದ್ರೆ ಬರ್ತೇನೆ...' - ಅಷ್ಟೇ. 
     ಇದು ನಿಮ್ಮ ಬೇರೊಂದು ಬದುಕಿನ ಆರಂಭದ ಪೀಠಿಕೆ! ಅಲ್ಲಿಂದ ಶುರುವಾದ ಸ್ನೇಹ ಅಲ್ಲಿಗೇ ಮುಗಿಯಲಿಲ್ಲ. ಅದು ಮುಂದುವರಿಯಿತು. ಆತ ಗ್ಯಾಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಸಂಬಳ ಸಾಕಾಗುತ್ತಿರಲಿಲ್ಲವೋ ಏನೋ, ಇದ್ದಬದ್ದ ದುಡ್ಡನ್ನೆಲ್ಲಾ ಕುದುರೆ ಬಾಲಕ್ಕೆ ಕಟ್ಟುತ್ತಿದ್ದ! ಆತ ಭಯಂಕರ ಅದೃಷ್ಟವಂತ ಅಂತ ನೀವೇ ಹೇಳಿದ ನೆನಪು. ಹೀಗಾಗಿ ಆತ ಕುದುರೆ ರೇಸ್'ನಲ್ಲಿ ಕಳಕೊಂಡದ್ದಕ್ಕಿಂತಲೂ ಪಡಕೊಂಡದ್ದೇ ಹೆಚ್ಚು. ದುಡ್ಡು ಬಂದಾಗಲೆಲ್ಲಾ ಆತ ನಿಮ್ಮನ್ನು ಕರ್ಕೊಂಡು ಯಾವುದೋ ಬಾರ್'ಗೆ ಹೋಗಿ ಬೀರ್ ಕೊಡಿಸುತ್ತಿದ್ದ. ಹೊಟ್ಟೆ ತುಂಬಾ ಊಟ ಹಾಕಿಸುತ್ತಿದ್ದ...ಇದನ್ನೆಲ್ಲಾ ನೀವು ಹೇಳಿದ್ದರಿಂದ ನನಗೆ ಗೊತ್ತಾಯಿತು!
     ಮುಂದಿನ ಕಥೆಯನ್ನು ನಿಮ್ಮದೇ ಮಾತಿನಲ್ಲಿ ಮುಂದುವರಿಸುತ್ತೇನೆ ಆಗದೇ ಗೆಳೆಯರೇ? 
     'ಗಣೇಶ್'ಜೀ, ಒಂದು ದಿನ ಏನಾಯಿತು ಗೊತ್ತಾ? ಅದೃಷ್ಟ ನನ್ನನ್ನು ಹುಡುಕಿಕೊಂಡು ಬಂತು! ಹಿರಿಯ ನಿರ್ದೇಶಕರಾದ ಸಿದ್ಧಲಿಂಗಯ್ಯನವರು ಹೊಸದೊಂದು ಸಿನಿಮಾವನ್ನು ಆರಂಭಿಸುವವರಿದ್ದರು. ಅದರ ಹೆಸರು : 'ಪರಾಜಿತ'. ಈ ಸಿನಿಮಾದಲ್ಲಿ ನನಗೊಂದು ಪಾತ್ರವಿತ್ತು. ಹೀಗಾಗಿ ಸ್ವಲ್ಪ ಅಡ್ವಾನ್ಸ್ ಕೊಟ್ಟಿದ್ದರು. ಚಿಕ್ಕಮಗಳೂರಿನಲ್ಲಿ ಶೂಟಿಂಗ್. ಅಡ್ವಾನ್ಸ್ ಹಣದಲ್ಲಿ ಅಪ್ಪನಿಗೊಂದು ಪಂಚೆ-ಶರ್ಟ್, ಅಮ್ಮನಿಗೆ ಸೀರೆ-ರವಿಕೆ ಕಣ ತಗೊಂಡು ಬಿಟ್ಟಿದ್ದೆ. ಕೈಲಿ ಚಿಕ್ಕಾಸಿರಲಿಲ್ಲ. ಏನು ಮಾಡುವುದೆಂದು ದಿಕ್ಕು ತೋಚದೇ ನಿಂತಿದ್ದಾಗ ದೇವರಂತೆ ಬಿ.ಎಸ್.ರಾವ್ ಬಂದ. ಬಂದವನೇ ಬಲಗೈ ತೋರಿಸಿದ. ಮಿಣಮಿಣ ಮಿಂಚುವ ವಾಚು! ಕುದುರೆ ರೇಸ್'ನಲ್ಲಿ ದುಡ್ಡು ಬಂದಿತ್ತು. ಅದರಲ್ಲಿ 300 ರೂಪಾಯಿ ಕೊಟ್ಟು ಈ ವಾಚು ಖರೀದಿಸಿದ್ದ ಗೆಳೆಯ! ನಂತರ ನಾನು ಮಂಕಾಗಿರುವುದನ್ನು ಕಂಡು ಆತ ಕಾರಣ ಕೇಳಿದ. ನಾನು ನನ್ನ ಸಮಸ್ಯೆಯನ್ನು ಹೇಳಿಕೊಂಡೆ : 'ಇಂದು ರಾತ್ರಿಯೇ ಚಿಕ್ಕಮಗಳೂರಿಗೆ ಹೋಗ್ಬೇಕು. ಸಿದ್ದಲಿಂಗಯ್ಯ ಕೊಟ್ಟ ದುಡ್ಡಿನಲ್ಲಿ ಅಪ್ಪ-ಅಮ್ಮನಿಗೆ ಬಟ್ಟೆ ಖರೀದಿಸಿದೆ. ಈಗ ಬಸ್ ಟಿಕೆಟ್'ಗೆ ದುಡ್ಡಿಲ್ಲ. ಏನು ಮಾಡುವುದೆಂದು ಗೊತ್ತಾಗದೇ ಸುಮ್ನೇ ನಿಂತಿದ್ದೇನೆ...' - ನನ್ನ ಈ ಮಾತನ್ನು ಕೇಳುತ್ತಲೇ ರಾವ್ ನನ್ನನ್ನು ದರದರ ಅಂತ ಎಳೆದುಕೊಂಡು ಒಬ್ಬ ಮಾರವಾಡಿ ಅಂಗಡಿಗೆ ಹೋದ. ಕೈಗೆ ಕಟ್ಟಿದ್ದ ಹೊಚ್ಚಹೊಸ ಎಚ್.ಎಂ.ಟಿ ವಿಜಯ್ ವಾಚನ್ನು ಆ ಮಾರವಾಡಿಗೆ ಮಾರಿ 150 ರೂಪಾಯಿ ಕೊಡಿಸಿದ! ನನ್ನ ಕಣ್ಣಲ್ಲಿ ಧಾರಾಕಾರ ನೀರು. ಅದನ್ನು ಆತನೇ ಒರೆಸುತ್ತಾ ಹೇಳಿದ್ದೇನು ಗೊತ್ತಾ? 'ಗೆಳೆಯಾ, ಕುದುರೆ ಮನಸ್ಸು ಮಾಡಿದರೆ ಇಂದಲ್ಲಾ ನಾಳೆ ನಾನು ವಾಚು ಖರೀದಿಸಬಲ್ಲೆ. ಆದರೆ ನೀನು ಚಿಕ್ಕಮಗಳೂರಿಗೆ ಹೋಗಲು ತಡವಾದರೆ ನಿನ್ನ ಭವಿಷ್ಯವೇ ಕತ್ತಲಲ್ಲಿ ಮುಳುಗಿ ಬಿಡುತ್ತದೆ. ನೀನು ಪರಾಜಿತನಾಗಬಾರದು. ಆದರೆ 'ಪರಾಜಿತ' ಸಿನಿಮಾದಲ್ಲಿ ನಟಿಸಬೇಕು! ಹೋಗಿ ಬಾ ಗೆಳೆಯಾ. ಆಲ್ ದಿ ಬೆಸ್ಟ್...' - ಹೀಗೆಂದು ಹೇಳಿ ಬಸ್ ಸ್ಟಾಂಡಿಗೂ ಬಂದು ಬೀಳ್ಕೊಟ್ಟ...ಮುಂದೆ ಏನೇನು ಆಯಿತೆನ್ನುವುದನ್ನು ನೀವು ನೋಡಿದ್ದೀರಿ. ಆದರೆ ನಾನು ಆ ಗೆಳೆಯನನ್ನು ಮರೆಯಲಿಲ್ಲ. ಆಗಾಗ ಸಂಪರ್ಕಿಸಿ ಸ್ನೇಹವನ್ನು ಉಳಿಸಿಕೊಂಡಿದ್ದೆ. ತೆಲುಗಿನ 'ಪ್ರತಿಘಟನ' ಸಿನಿಮಾ ದೊಡ್ಡ ಹಿಟ್ ಆಗಿ ಅವಕಾಶಗಳ ಮಹಾಪೂರವೇ ನನ್ನತ್ತ ಹರಿದು ಬಂದಾಗಲೂ ನಾನು ಆತನನ್ನು ಮರೆಯಲಿಲ್ಲ. ಆತನಿಗೆ ಮೂವರು ಹೆಣ್ಣು ಮಕ್ಕಳು. ನಾನೇ ಮುಂದೆ ನಿಂತು ಅವರಿಗೆ ಮದುವೆ ಮಾಡಿಸಿದೆ. ಅವನ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿದೆ. ಈಗಲೂ ನಮ್ಮಲ್ಲಿ ಅದೇ ಸೋದರ ಪ್ರೀತಿ-ವಿಶ್ವಾಸ ಉಳಿದುಕೊಂಡಿದೆ. ಒಂದೇ ಒಂದು ಕಮಿಟ್ಮೆಂಟಿದೆ : ಬೆಂಗ್ಳೂರಲ್ಲೊಂದು ಸೈಟ್ ಕೊಡಿಸಿ, ಮನೆ ಕಟ್ಟಲು ನೆರವಾಗಬೇಕೆನ್ನುವ ಆಸೆ...' - ಎಂದು ಹೇಳುತ್ತಾ ನೀವು ಕಣ್ಣೊರೆಸಿಕೊಂಡದ್ದನ್ನು ನಾನು ಮರೆಯೋದುಂಟಾ?
     ಇದನ್ನಾದರೂ ಮರೆಯಬಹುದೇನೋ ಆದರೆ ಮಲ್ಲೇಶ್ವರದ 'ರತನ್ ಮಹಲ್'ನ 32ನೇ ನಂಬರಿನ ರೂಮನ್ನು ಮರೆಯೋದುಂಟಾ? ಆ ಕಾಲದಲ್ಲಿ ಅದು ನಿಮ್ಮ ಅರಮನೆಯಾಗಿತ್ತು! ಹನ್ನೆರಡಡಿ ಉದ್ದ, ಹನ್ನೆರಡಡಿ ಅಗಲದ ಆ ಪುಟ್ಟ ರೂಮಿಗೆ ಆಗ ನಾನು ಬರುತ್ತಿದ್ದೆ. ಅಲ್ಲೇ 15ನೇ ಕ್ರಾಸ್'ನಲ್ಲಿರುವ ರಮಕ್ಕನ ಮನೆಯಲ್ಲಿದ್ದೆ. 'ಚಿತ್ರದೀಪ'ಕ್ಕೆ ಸೇರುವ ಮೊದಲಿನಿಂದಲೂ ಹೀಗೆ ಸಣ್ಣಪುಟ್ಟ ನಟರ ಮನೆಗೋ, ರೂಮಿಗೋ ಹೋಗಿ ಸಂದರ್ಶಿಸುತ್ತಿದ್ದೆ. ಹೀಗೆ ನಡೆಸಿದ ಸಂದರ್ಶನವನ್ನು ಅಚ್ಚುಕಟ್ಟಾಗಿ ಬರೆದು 'ಉದಯವಾಣಿ'ಗೆ ಕಳಿಸುತ್ತಿದ್ದೆ. ರೆಡಿಮೇಡ್ ಸಂದರ್ಶನ ಸಿಕ್ಕರೆ ಯಾರು ಪ್ರಕಟಿಸೋದಿಲ್ಲ ಹೇಳಿ? ನಾನು ನಿಮ್ಮ ರೂಮಿಗೆ ಬರುತ್ತಿದ್ದುದೂ ಇದೇ ಉದ್ದೇಶದಿಂದ! ಮೊದಲು ಕೋಕಿಲಾ ಮೋಹನ್, ನಂತರ ಜಯಮಾಲಾ ಅಕ್ಕನ ಗಂಡ ಪುರಂದರ್, ಆ ನಂತರ ಕಾಶೀನಾಥ್... ಹೀಗೆಯೇ ಸಾಗುತ್ತಿತ್ತು ನನ್ನ ಸಿನಿಮಾ ಪತ್ರಿಕೋದ್ಯಮದ ಆರಂಭಿಕ ಜರ್ನಿ. ಚರಣ್'ಜೀ, ನಿಮ್ಮ ರೂಮು ನನಗೆ ಆಪ್ತ ಎನಿಸಿದ್ದು ನಿಮ್ಮ ಹೃದಯಾಂತರಾಳದ ಪ್ರೀತಿಯಿಂದ. ನಿಮ್ಮ ಸಂದರ್ಶನವನ್ನು ಎರಡು ಪತ್ರಿಕೆಗಳಿಗೆ ಬೇರೆಬೇರೆ ಆಂಗಲ್'ಗಳಲ್ಲಿ ಬರೆದು ಕಳಿಸಿದೆ. ಎರಡೂ ಪ್ರಕಟವಾದವು. ಆ ಕಾಲದಲ್ಲಿ ಪತ್ರಿಕೆಗಳಲ್ಲಿ ಒಂದು ಪುಟ್ಟ ಸುದ್ದಿ ಪ್ರಕಟವಾದರೂ ಅದೊಂದು ದೊಡ್ಡ ಸಂಭ್ರಮ! 
     ಅಂದಿನಿಂದ ನಾವು ತುಂಬಾ ಹತ್ತಿರವಾದೆವು. ಆಗಾಗ ನಿಮ್ಮ ರೂಮಿಗೆ ಬರುತ್ತಿದ್ದೆ. ದುಡ್ಡಿದ್ದರೆ ಪಕ್ಕದ ಉಡುಪಿ ಕೃಷ್ಣ ಭವನದಲ್ಲಿ ಕಾಫಿ ಕುಡಿಸುತ್ತಿದ್ದೀರಿ. ಇಲ್ಲವಾದರೆ ನಿಮ್ಮ ನೋವಿನ ಬದುಕಿನ ಕಥೆ ಹೇಳುತ್ತಿದ್ದೀರಿ. ಆಗ ನಿಮ್ಮ ಮುಖ್ಯ ಸಂಪಾದನೆ ಇದ್ದದ್ದು ಆರ್ಕೆಸ್ಟ್ರಾಗಳಲ್ಲಿ ಹಾಡುವುದರಲ್ಲಿ ಮತ್ತು ಗಿಟಾರ್ ನುಡಿಸುವುದರಲ್ಲಿ! ಆಗಲೇ ನಡೆದದ್ದು ಸಿದ್ಧಲಿಂಗಯ್ಯನವರು ನಿಮ್ಮನ್ನು 'ಪರಾಜಿತ' ಸಿನಿಮಾಕ್ಕಾಗಿ ಕರೆದ ಪವಾಡ! ಇದಕ್ಕೆ ಸಂಬಂಧಿಸಿದ ವಿವರವನ್ನು ಮೊದಲೇ ಹೇಳಿದ್ದೇನೆ. ಮುಂದೆ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬಂದುವು. ಅಬ್ಬಾಯಿ ನಾಯ್ಡು ಕರೆದು ಒಂದರ ಹಿಂದೊಂದರಂತೆ ಅವಕಾಶಗಳನ್ನು ಕೊಡತೊಡಗಿದರು. ಕೆಲವೇ ವರ್ಷಗಳಲ್ಲಿ ತೆಲುಗಿಗೆ ವಲಸೆ ಹೋದ್ರಿ. ದೊಡ್ಡ ಅವಕಾಶ, ದೊಡ್ಡ ಬ್ಯಾನರ್, ದೊಡ್ಡ ನಿರ್ಮಾಪಕರು...ತೆಲುಗು, ತಮಿಳು, ಹಿಂದಿ, ಮಲಯಾಳಂ...ಮಿಂಚಿಂಗೋ ಮಿಂಚಿಂಗು! ಹೈದರಾಬಾದ್'ನಲ್ಲೊಂದು ಬಂಗಲೆ, ಚೆನ್ನೈನಲ್ಲೊಂದು ಬಂಗಲೆ, ಬೆಂಗ್ಳೂರಿನಲ್ಲೊಂದು ಫಾರ್ಮ್ ಹೌಸ್...ಕನಸ್ಸಲ್ಲೂ ಕಾಣದಿರುವಂಥಾ ಬದುಕು ನಿಮ್ಮದಾಯಿತು ಚರಣ್. ಹೆಚ್ಚೆಚ್ಚು ದುಡ್ಡು ಬಂದಷ್ಟೂ ಹೆಚ್ಚೆಚ್ಚು ದಾನಿಗಳಾದ್ರಿ. ಈಗ ಈ ಹಂತದಲ್ಲಿ ಬಂದು ನಿಂತುಕೊಂಡಿದ್ದೀರಿ. ಒಬ್ಬ ಮಗ ಪೈಲೆಟ್, ಮತ್ತೊಬ್ಬ ಮಗ ನಾಯಕ! ಇಚ್ಛೆಯನರಿತು ನಡೆವ ಪತ್ನಿ...ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ!
     ಚರಣ್, ಇದು ಜೀವ, ಇದು ಜೀವನ. ಬೆಳಗಾವಿಯಿಂದ ಬಂದು, ಮಹಾನಗರಗಳಲ್ಲಿ ಪಡಬಾರದ ಪಾಡುಪಟ್ಟು ದುರಾದೃಷ್ಟಕ್ಕೆ ಸವಾಲು ಹಾಕಿ ಗೆದ್ದ ನಿಮಗಿದೋ ದೊಡ್ಡ ಸಲಾಂ! ಮತ್ತೇನೂ ವಿಶೇಷವಿಲ್ಲ. ಇದ್ದರೆ ಮುಂದಿನ ಪತ್ರದಲ್ಲಿ ತಿಳಿಸುತ್ತೇನೆ. ಆಗಾಗ ಪತ್ರ ಬರೀತಿರಿ. ಟೇಕ್ ಕೇರ್. ನಿಮಗೆ ಇನ್ನಷ್ಟು ಒಳ್ಳೆಯದಾಗಲಿ...
                                    ಇಂತಿ ನಿಮ್ಮ
                         ◆ ಗಣೇಶ್ ಕಾಸರಗೋಡು