ಆಸಂಗಿಯಲ್ಲಿ ಶತಾಯುಷಿ ಮಲ್ಲಿಕಾರ್ಜುನ ಸ್ವಾಮಿಗಳ ಕಾರ್ಯಕ್ರಮ ಜರುಗಿತು.

ಬಾಳೆ ಹಣ್ಣು, ಹಾಲು ಆಹಾರದ ಗುಟ್ಟು
*ಧ್ಯಾನದಿಂದ ಆರೋಗ್ಯ ಕಾಪಾಡಿಕೊಳ್ಳುವ ಶತಾಯುಷಿ
ರಬಕವಿ-ಬನಹಟ್ಟಿ,ಮೇ16: ವಯಸ್ಸು 108, ಕಣ್ಣು, ಕಿವಿ ಎಲ್ಲವೂ ಸ್ಪಷ್ಟ, ಎಂಥವರನ್ನೂ ನಾಚಿಸುವಂತ ವೇಗದ ನಡಿಗೆ, ನಿತ್ಯ ಆಹಾರ ಎರಡು ಬಾಳೆ ಹಣ್ಣು, ಒಂದು ಲೋಟ ಹಾಲು, ಧ್ಯಾನದೊಂದಿಗೇ ಆರೋಗ್ಯ ಕಾಪಾಡಿಕೊಳ್ಳುವ ಈ ಅಜ್ಜನ ನಿತ್ಯ ಚಟುವಟಿಕೆಯೇ ಬಲು ಅಪರೂಪ.
ಹೌದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಪರಮಾನಂದ ಮಗದುಮ್ ಎಂಬುವರ ತೋಟದಲ್ಲಿರುವ ಶತಾಯುಷಿ ಮಲ್ಲಿಕಾರ್ಜುನ ಸ್ವಾಮೀಜಿ ಮೂಲತಃ ಧಾರವಾಡದವರೆಂದು ಹೇಳಿದರೂ, ಇವರಿಗೆ ಯಾವದೇ ಮಠ-ಮಂದಿರಗಳಿಲ್ಲ. ಎಲ್ಲಿ ಉಳಿಯುವರೋ ಅಲ್ಲಿ ಭಕ್ತರ ಸಾಲು, ಯಾವದೇ ಬಯಕೆ, ದಾಹವಿಲ್ಲದೆ ಬದುಕುವ ಅಪರೂಪದ ವ್ಯಕ್ತಿ.
1958 ರಲ್ಲಿ ಎಂ.ಎ. ಇಂಗ್ಲೀಷ್ ಮುಗಿಸಿ, ಸಂಸ್ಕøತದಲ್ಲಿ ಪಿಎಚ್‍ಡಿ ಪಡೆದ ವ್ಯಕ್ತಿ. ಕಳೆದ 23 ವರ್ಷಗಳಿಂದ ನಿತ್ಯ ಬೆಳಿಗ್ಗೆ ಎರಡು ಬಾಳೆ ಹಣ್ಣು, ಹಾಲು ಸೇವಿಸುವ ಮೂಲಕ ಯಾವದೇ ಮಾತ್ರೆಗಳನ್ನು ತೆಗೆದುಕೊಳ್ಳದೆ ಅನಾರೋಗ್ಯ ಸಂದರ್ಭದಲ್ಲಿಯೂ ನಿತ್ಯ ಧ್ಯಾನದ ರೂಪದಲ್ಲಿ ಆರೋಗ್ಯವಂತರಾಗುವಲ್ಲಿ ವಿಶೇಷತೆ ಹೊಂದಿದವರು. 
ಲಾಕ್‍ಡೌನ್ ಸಂದರ್ಭ ಆಸಂಗಿ ಗ್ರಾಮದಲ್ಲಿಯೇ ಉಳಿದ ಕಾರಣ ತಮ್ಮ 108 ವರ್ಷಾಚರಣೆ ಮಾಡಲಾಯಿತು. ಇದೇ ಸಂದರ್ಭ ಹರ್ಷವರ್ಧನ ಪಟವರ್ಧನ, ಸೋಮಣ್ಣ ಉಮಚಗಿ, ರಾಜು ತೇಲಿ, ಪ್ರಶಾಂತ ಐಹೊಳೆ, ಸಂತೋಷ ಹಿರೇಮಠ, ಸಹದೇವ ಬಡಿಗೇರ, ಸಂಗಪ್ಪ ಅಪ್ಪಾಜಿಗೋಳ, ಬಸಪ್ಪ ಗುಡ್ಡಾಕಾರ, ಅರುಣ ಬಾಣಕಾರ, ಆದಗೊಂಡ ಇದ್ದರು.