ಸಂಪೂರ್ಣ ಬಂದ್ ಆಗಿರುವ ಸೈಜಿಂಗ್ ಘಟಕಗಳು.
ಸ್ತಬ್ಧಗೊಂಡ ಸೈಜಿಂಗ್ ಘಟಕ: ಕಾರ್ಮಿಕರು ಬೀದಿಪಾಲು
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಮೇ8: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತವಿರುವ 18 ಸೈಜಿಂಗ್ ಘಟಕಗಳು ಕೊರೊನಾ ಲಾಕ್‍ಡೌನ್ ಹಿನ್ನಲೆಯಲ್ಲಿ ಕಳೆದ 7 ವಾರಗಳಿಂದ ಬಂದ್ ಆಗಿರುವ ಹಿನ್ನಲೆ ಸಾವಿರಕ್ಕೂ ಅಧಿಕ ಕಾರ್ಮಿಕರು ಬೀದಿಪಾಲಾಗಿದ್ದಾರೆ.
ಮೊದಲೇ ಜವಳಿ ಕ್ಷೇತ್ರ ಅಧೋಗತಿಯತ್ತ ಸಾಗುತ್ತಿರುವ ಹಿನ್ನಲೆ ಕೊರೊನಾ ಮಹಾಮಾರಿಯಿಂದ ಮತ್ತಷ್ಟು ಕಂಟಕ ಎದುರಿಸುವ ಮೂಲಕ ಇದೀಗ ಸಂಪೂರ್ಣ ಬಂದ್ ಆಗಿರುವ ಹಿನ್ನಲೆ ನೇಕಾರಿಕೆಯನ್ನೇ ನಂಬಿರುವ ಸಾವಿರಾರು ಕಾರ್ಮಿಕ ಕುಟುಂಬಗಳು ಬೀದಿಪಾಲಾದ ಪ್ರಸಂಗ ನಡೆದಿದೆ.
ವರ್ಷದಲ್ಲಿ ಏಪ್ರಿಲ್ ಹಾಗು ಮೇ ತಿಂಗಳು ಅತ್ಯಂತ ನಿರ್ಣಾಯಕ ಹಾಗು ಹೆಚ್ಚು ಒತ್ತಡದಿಂದ ಕಾರ್ಯ ನಡೆಸುವ ಕ್ಷೇತ್ರ ಜವಳಿಯದ್ದಾಗಿದೆ. ಇತ್ತ ಕಚ್ಚಾ ವಸ್ತುಗಳು ದೊರಕದೆ ಮತ್ತೊಂದೆಡೆ ಭೀಮ್‍ಗಳು ತಯಾರಾದರೂ ಸೀರೆ ನೇಯ್ಗೆಗೆ ತೆರಳದೆ ಅತಂತ್ರ ಸ್ಥಿತಿ ಸೈಜಿಂಗ್ ಮಾಲಿಕರದ್ದಾಗಿದೆ.
ಲಾಕ್‍ಡೌನ್ ತೆಗೆದು ತಿಂಗಳು ಗತಿಸಿದ ನಂತರ ಈ ಸೈಜಿಂಗ್ ಘಟಕಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಏಕೆಂದರೆ ಕಚ್ಚಾ ವಸ್ತುಗಳಾದ ಬಣ್ಣ, ಟಾರ್ಚ್, ಜರಾ, ಕೋನ್ಸ್, ಅಸೀಡ್ ಸೇರಿದಂತೆ ಇತರೆ ಸಾಮಗ್ರಿಗಳ ಉತ್ಪಾದನೆ ಕೇಂದ್ರಗಳೇ ಬಂದ್ ಆಗಿರುವ ಹಿನ್ನಲೆ ಕಾರ್ಖಾನೆ ಪ್ರಾರಂಭಿಸುವದು ಸವಾಲಾಗಿದೆ.
ವೇತನ ಅಸಾಧ್ಯ: ಈಗಾಗಲೇ ಮೂರ್ನಾಲ್ಕು ವಾರಗಳಷ್ಟು ದುಡಿಮೆಯಿಲ್ಲದಿದ್ದರೂ ಮುಂಗಡವಾಗಿ ಹಣವನ್ನು ನೇಕಾರರಿಗೆ ಒದಗಿಸಲಾಗಿದೆ. ಕಳೆದ ನಾಲ್ಕು ವಾರಗಳಿಂದ ಆರ್ಥಿಕ ಸಂಕಷ್ಟ ಹೆಚ್ಚಾದ ಕಾರಣ ನೇಕಾರರಿಗೂ ಹಣ ಕೊಡಲು ಸಾಧ್ಯವಾಗುತ್ತಿಲ್ಲವೆಂಬ ನಿಸ್ಸಹಾಯಕ ಮಾತು ಸೈಜಿಂಗ್ ಘಟಕಗಳ ಮಾಲಿಕರದ್ದಾಗಿದೆ.
`ನೇಕಾರರಷ್ಟೇ ಸೈಜಿಂಗ್ ಘಟಕಗಳ ಕೆಲಸಗಾರರ ಪಾತ್ರವೂ ಹಿರಿದಾಗಿದೆ. ಸೀರೆ ಉತ್ಪಾದನೆಗೆ ಸೈಜಿಂಗ್ ಪಾತ್ರ ಪ್ರಾಮುಖ್ಯ. ಇಲ್ಲಿನ ಕಾರ್ಮಿಕರನ್ನೂ ನೇಕಾರ ಸಮ್ಮಾಜ ಯೋಜನೆಯಲ್ಲಿ ಪರಿಗಣಿಸುವ ಮೂಲಕ ಅವರಿಗೂ ಯೋಜನೆ ಸದುಪಯೋಗವಾಗಬೇಕು’.-----ಬ್ರಿಜ್‍ಮೋಹನ ಡಾಗಾ, ಕಾರ್ಯದರ್ಶಿ, ಸೈಜಿಂಗ್ ಘಟಕಗಳ ಸಂಘ.
`ಸೈಜಿಂಗ್ ಘಟಕಗಳನ್ನು ನಡೆಸುವದೇ ಸವಾಲಾಗುತ್ತಿದೆ. ಕೊರೊನಾ ವೈರಸ್‍ನ ಹೊಡೆತಕ್ಕೆ ವಾಪಸ್ ತಯಾರಾಗುವಲ್ಲಿ ಯಾವದೇ ಮುನ್ಸೂಚನೆ ಸಿಗುತ್ತಿಲ್ಲ. ಸರ್ಕಾರ ಸೈಜಿಂಗ್ ಘಟಕಗಳತ್ತ ಗಮನ ಹರಿಸಬೇಕಿದೆ.’-----ರಾಮಣ್ಣ ಭದ್ರನ್ನವರ, ಅಧ್ಯಕ್ಷರು, ಸೈಜಿಂಗ್ ಘಟಕಗಳ ಸಂಘ.

Social Plugin