ಹಿಪ್ಪರಗಿಯಲ್ಲಿ ಎರಡು ಎಕರೆ ಪ್ರದೇಶದಲ್ಲಿ 80 ಟನ್ ದ್ರಾಕ್ಷಿ ಬೆಳೆದು ಸಾಧನೆ ಮಾಡಿದ ರೈತ ಶಂಕರ ಕಿತ್ತೂರರಿಗೆ ಲಾಭ ನೀಡದೆ ಲಾಕ್‍ಡೌನ್‍ನಿಂದ ಹಾನಿ ಅನುಭವಿಸುವಂತಾಯಿತು.
`ಬಂಗಾರ’ದ ಬೆಳೆಯಿದ್ದರೂ ಕೈಗೆ ದೊರಕಿದ್ದು `ಮಣ್ಣು’
ಲಾಕ್‍ಡೌನ್‍ನಿಂದ ಎಕರೆಗೆ 40 ಟನ್ ದ್ರಾಕ್ಷಿ ಬೆಳೆದ ರೈತ ಕಂಗಾಲು
 ವರದಿ - ಚಂದ್ರಶೇಖರ ತುಂಗಳ
ರಬಕವಿ-ಬನಹಟ್ಟಿ
ಕೊರೊನಾ ವೈರಸ್‍ನ ಸೋಂಕು ಇಡೀ ವಿಶ್ವದ ಬುಡ ಅಲುಗಾಡಿಸಿದೆ. ರೈತರ ಅಸ್ತಿತ್ವಕ್ಕೂ ಧಕ್ಕೆ ತಂದಿದೆ. ಕೊರೊನಾ ಸೋಂಕಿನಿಂದಾಗಿ ರಾಜ್ಯದಲ್ಲಿ ತೋಟಗಾರಿಕೆ ಬೆಳೆ ಬೆಳೆದ ರೈತರು ಕಂಗಾಲಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದ ಶಂಕರ ಕಿತ್ತೂರ ಎಂಬ ರೈತ ಕೇವಲ 2 ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂ. ವ್ಯಯಿಸಿ ಬರೋಬ್ಬರಿ 80 ಟನ್ ದ್ರಾಕ್ಷಿ ಬೆಳೆಯುವ ಮೂಲಕ ಅಚ್ಚರಿ ಮೂಡಿಸಿ ಮಾದರಿಯಾಗಬೇಕಿದ್ದ ರೈತ ಕೋಟ್ಯಾಂತರ ರೂ.ಗಳಷ್ಟು ಲಾಭ ಕೈಸೇರುವ ಬದಲಾಗಿ ಲಾಕ್‍ಡೌನ್‍ನಿಂದಾಗಿ ಬೆಳೆ ಬೆಳೆದ ಭೂಮಿಯ ಮಣ್ಣು ಕೈಸೇರುವಲ್ಲಿ ಕಾರಣವಾಗಿದೆ. 
ದಾಖಲೆ ಬೆಳೆ: ಸಾಮಾನ್ಯವಾಗಿ ಒಂದು ಎಕರೆ ಪ್ರದೇಶದಲ್ಲಿ 15 ರಿಂದ 20 ಟನ್ ದ್ರಾಕ್ಷಿ ಬೆಳೆಯುವದು ಸಾಮಾನ್ಯ. ಇದೀಗ ದಾಖಲೆಯ 40 ಟನ್‍ನಷ್ಟು ದ್ರಾಕ್ಷಿ ಬೆಳೆಯುವ ಮೂಲಕ ಗಮನ ಸೆಳೆದಿದ್ದರು. ಇನ್ನೇನು ಬಂಗಾರದ ಬೆಳೆಗೆ ಉತ್ತಮ ಬೆಲೆ ಬಂತು ಎನ್ನುವಷ್ಟರಲ್ಲಿ ಲಾಕ್‍ಡೌನ್‍ನಿಂದಾಗಿ ಪ್ರಮುಖ ರಫ್ತು ಕೇಂದ್ರವಾಗಿರುವ ಮಹಾರಾಷ್ಟ್ರದ ಪುಣೆ, ಸಾಂಗಲಿ, ಮುಂಬಯಿ ಹಾಗು ರಾಜ್ಯದ ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ರಫ್ತಾಗುತ್ತಿತ್ತು. 
ಮಣೂಕ ದರವೂ ಇಲ್ಲ: ಬೆಳೆದ ದ್ರಾಕ್ಷಿ ಎಲ್ಲವನ್ನೂ ಅನಿವಾರ್ಯ ಕಾರಣಕ್ಕೆ ಮಣೂಕ ಮಾಡಲು ಮುಂದಾಗಿರುವ ರೈತ ಶಂಕರ ಕಿತ್ತೂರ ಒಣದ್ರಾಕ್ಷಿಯಿಂದ ಅಷ್ಟೊಂದು ಲಾಭವಾಗಲು ಸಾಧ್ಯವಿಲ್ಲ. ಬೆಳೆಗೆ ಹೂಡಿಕೆ ಮಾಡಿದ ಹಣವಾದರೂ ಬರಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದರು.
`ದಾಖಲೆ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗಿತ್ತು. ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬಂದಿತ್ತಾದರೂ ಲಾಕ್‍ಡೌನ್‍ನಿಂದಾಗಿ ಒಂದುವರೆ ಕೋಟಿಗೂ ಅಧಿಕ ಲಾಭವಾಗುವದು ಕೈತಪ್ಪಿದಂತಾಗಿದೆ. ತೀವ್ರ ಬೇಸರವಾಗಿದೆ.’-----ಶಂಕರ ಕಿತ್ತೂರ, ಹಿಪ್ಪರಗಿ ರೈತ.