ಬನಹಟ್ಟಿ ಬಸ್ ನಿಲ್ದಾಣದಿಂದ ಬಿಹಾರ ಹಾಗು ಉತ್ತರ ಪ್ರದೇಶದ 154 ವಲಸೆ ಕಾರ್ಮಿಕರನ್ನು ಪ್ರತ್ಯೇಕ ಬಸ್‍ಗಳಲ್ಲಿ ಕಳಿಸಲಾಗುತ್ತಿರುವದು.
ಬಿಹಾರ ಹಾಗು ಉ.ಪ್ರ.ಕ್ಕೆ ತೆರಳಿದ 154 ವಲಸೆ ಕಾರ್ಮಿಕರು
ರಬಕವಿ-ಬನಹಟ್ಟಿ,ಮೇ20: ಬಿಹಾರದ 25 ಹಾಗು ಉತ್ತರ ಪ್ರದೇಶದ 129 ವಲಸೆ ಕಾರ್ಮಿಕರು ರಬಕವಿ-ಬನಹಟ್ಟಿ ತಾಲೂಕಿನಿಂದ ತಮ್ಮ ತವರಿಗೆ ಪ್ರಯಾಣ ಬೆಳೆಸಿದ್ದಾರೆ. ಸೇವಾ ಸಿಂಧು ಆ್ಯಪ್ ಮೂಲಕ ನೊಂದಾಯಿಸಿಕೊಂಡಿದ್ದ ಕಾರ್ಮಿಕರು ಹುಬ್ಬಳ್ಳಿವರೆಗೆ ಬಸ್ ಮೂಲಕ ಅಲ್ಲಿಂದ ವಿಶೇಷ ಶ್ರಮಿಕ ರೈಲಿನ ಮೂಲಕ ತೆರಳಿದರು.
ಬೆಳಿಗ್ಗೆ 8 ಗಂಟೆಗೆ ಬಿಹಾರಕ್ಕೆ ತೆರಳುವ ವಲಸೆ ಕಾರ್ಮಿಕರನ್ನು ಬೀಳ್ಕೊಟ್ಟರೆ, ಮಧ್ಯಾಹ್ನ 2 ಗಂಟೆಗೆ ಉತ್ತರ ಪ್ರದೇಶಕ್ಕೆ ತೆರಳುವ 129 ವಲಸೆ ಕಾರ್ಮಿಕರನ್ನು ಬೀಳ್ಕೊಡಲಾಯಿತು.
ಎಲ್ಲರಿಗೂ ತಾಲೂಕಾಡಳಿತ ಹಾಗು ಸ್ಥಳೀಯರಿಂದ ಆಹಾರ ಕಿಟ್ ನೀಡಿ ಬೀಳ್ಕೊಡಲಾಯಿತು. ತಾಲೂಕಾ ದಂಡಾಧಿಕಾರಿ ಪ್ರಶಾಂತ ಚನಗೊಂಡ, ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ನಗರಸಭೆ ಅಧಿಕಾರಿ ರಮೇಶ ಮಳ್ಳಿ, ಎಸ್.ಎಸ್. ಮುಗಳಖೋಡ ಕಾರ್ಮಿಕರೊಂದಿಗೆ ಮಾತನಾಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ತೆರಳುವಂತೆ ಶುಭ ಹಾರೈಸಿದರು.
15 ಗಂಟೆ ಬಸ್ ನಿಲ್ದಾಣದಲ್ಲಿ ಉಳಿದ ವಲಸಿಗರು: ಬುಧವಾರ ಬೆಳಿಗ್ಗೆ 8 ಗಂಟೆಗೆ ಬಸ್‍ನ ವ್ಯವಸ್ಥೆ ಮಾಡಿದ್ದ ತಾಲೂಕಾಡಳಿತ. ತವರಿಗೆ ತೆರಳುವ ಆತುರಕ್ಕೆ ಎಲ್ಲ 25 ವಲಸೆ ಕಾರ್ಮಿಕರು ಮಂಗಳವಾರ ಸಂಜೆ 5 ಗಂಟೆಗೆ ಬನಹಟ್ಟಿ ಬಸ್ ನಿಲ್ದಾಣದೊಳಗೆ ಉಳಿದುಕೊಂಡಿದ್ದರು. ಇಡೀ ರಾತ್ರಿ ಅಲ್ಲಿಯೇ ಉಳಿದು ಮರುದಿನ ತೆರಳಿದರು.