ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ ಚಿಕ್ಕಪಡಸಲಗಿಯ ಶ್ರಮಬಿಂದು ಸಾಗರಕ್ಕೆ 0.2 ಟಿಎಂಸಿ ನೀರು ಬಿಡುಗಡೆಗೊಳಿಸಲಾಯಿತು.

ಹಿಪ್ಪರಗಿ ಜಲಾಶಯದಿಂದ ಮತ್ತೇ ನೀರು ಬಿಡುಗಡೆ
ರಬಕವಿ-ಬನಹಟ್ಟಿ,ಮೇ17: ಜಮಖಂಡಿ ಹಾಗು ಅಥಣಿ ಸುತ್ತಲಿನ ಗ್ರಾಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ ಮೇ 1 ರಂದು ಚಿಕ್ಕಪಡಸಲಗಿಯ ಶ್ರಮಬಿಂದು ಸಾಗರಕ್ಕೆ ಹಿಪ್ಪರಗಿ ಜಲಾಶಯದಿಂದ 0.3 ಟಿಎಂಸಿ ನೀರನ್ನು ಹರಿಬಿಡಲಾಗಿತ್ತು. ತೇರದಾಳ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಸೋಮವಾರ ಗೇಟ್ ನಂ. 2 ರಿಂದ ಮತ್ತೇ 0.2 ಟಿಎಂಸಿಯಷ್ಟು ನೀರನ್ನು ಬಿಡುವ ಮೂಲಕ ಜಮಖಂಡಿ ತಾಲೂಕಿನ ನದಿ ತೀರದ 25 ಗ್ರಾಮಗಳ ರೈತರಿಗೆ ನೀರಿನ ಸಮಸ್ಯೆ ನೀಗಿಸುವಲ್ಲಿ ಕಾರಣವಾಗಿದೆ.
ಸದ್ಯ ಹಿಪ್ಪರಗಿ ಜಲಾಶಯಕ್ಕೆ ರಾಜಾಪುರ ಜಲಾಶಯದ ಒಳಹರಿವು ಹಾಗು ಹಳ್ಳ ಇತರೆ ಮೂಲಗಳಿಂದ ನೀರು ಬರುತ್ತಿರುವ ಕಾರಣ 1.84 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಹಿಪ್ಪರಗಿ ಜಲಾಶಯದ ಮುಂದಿನ ಗ್ರಾಮಗಳಿಗೆ ನೀರಿನ ಸಮಸ್ಯೆ ಎದುರಾದಲ್ಲಿ ಮತ್ತೇ ನೀರು ಬಿಡುಗಡೆಗೆ ಸಿದ್ಧವೆಂದು ಸವದಿ ತಿಳಿಸಿದರು.
ಬೇಸಿಗೆ ನಿಭಾಯಿಸಲು ಸಾಧ್ಯ: ಬೇಸಿಗೆ ದಿನಗಳನ್ನು ನಿಭಾಯಿಸುವಷ್ಟು ನೀರು ಹಿಪ್ಪರಗಿ ಜಲಾಶಯದಲ್ಲಿದೆ. ತಿಂಗಳಿಗೆ 1 ಟಿಎಂಸಿಯಷ್ಟು ನೀರು ಬೇಕು. ಸದ್ಯ 1.64 ಟಿಎಂಸಿಯಷ್ಟು ನೀರು ಉಳಿಯಲಿದ್ದು, ನಿರಾಯಾಸವಾಗಿ ಬೇಸಿಗೆ ದಿನಗಳನ್ನು ಕಳೆಯಬಹುದಾಗಿದೆ ಎಂದು ಸವದಿ ತಿಳಿಸಿದರು.
ಗೇಟ್ ರಿಪೇರಿ: ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಎಲ್ಲ 22 ಗೇಟ್‍ಗಳು ರಿಪೇರಿಯಲ್ಲಿವೆ. ಕಳೆದೆರಡು ತಿಂಗಳ ಹಿಂದೆ ಇದೇ ಸಮಸ್ಯೆ ಕಾರಣ ನೀರು ಬಿಟ್ಟ ಸಂದರ್ಭ ವಾಪಸ್ ತಡೆಯಲು ಸಾಧ್ಯವಾಗದೆ ನೀರು ಪೋಲಾಗಿತ್ತು. ಮತ್ತೆ ಸಮಸ್ಯೆ ಮರುಕಳಿಸಬಾರದು. ಒಟ್ಟು 6.25 ಕೋಟಿ ರೂ.ಗಳ ವೆಚ್ಚದ ಟೆಂಡರ್ ಕಾಮಗಾರಿಗೆ ಅಂದಾಜು ಪತ್ರ ಸಿದ್ಧವಾಗಿದೆ. ಸದ್ಯದಲ್ಲಿಯೇ ಟೆಂಡರ್ ಕರೆದು ರಸ್ತೆ ರಿಪೇರಿಯನ್ನೂ ನಡೆಸಲಾಗುವದಾಗಿ ಸವದಿ ತಿಳಿಸಿದರು.
ಇದೇ ಸಂದರ್ಭ ಜಿಪಂ ಸದಸ್ಯ ಪುಂಡಲೀಕ ಪಾಲಭಾಂವಿ, ರೈತ ಮುಖಂಡ ಬಸವರಾಜ ಸಿಂಧೂರ, ಅನ್ನಪ್ಪ ಸಾವಳಗಿ, ತಾಪಂ ಸದಸ್ಯ ಚನಬಸಪ್ಪ ಹೊಸಮನಿ, ಪಾರಿಸ ಬಳಗಾರ, ಮಲ್ಲಪ್ಪ ಚಹ್ವಾಣ, ಆನಂದ ಕಂಪು, ಸದಾಶಿವ ಕಾತರಕಿ, ಶಂಕರಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.