ಕೊರೊನಾ ವೈರಸ್‍ದಿಂದಾಗಿ ಕುಂಬಾರರ ಬದುಕು ದುಸ್ತರ, ಅವರಿಗೆ ಬೇಕಾಗಿದೆ ಸಹಾಯದ ಹಸ್ತ
ತೇರದಾಳ : ವಿಶ್ವದಾದ್ಯಂತ ವಕ್ಕರಿಸಿರುವ ಕೊರೊನಾ ವೈರಸ್ ಎಲ್ಲರ ಬದುಕಿನ ಬಂಡಿಯನ್ನು ಸ್ಥಬ್ದಗೊಳಿಸಿದೆ. ಶ್ರೀಮಂತ ಬಡವರನ್ನದೆ ಎಲ್ಲರ ಬದುಕಿನ ಮೇಲೆ ಪ್ರಭಾವ ಬೀರುತ್ತಲಿದೆ. ಇದರಿಂದ ಗುಡಿ ಕೈಗಾರಿಕೆಗಳ ಮೇಲೆ ಅವಲಂಭಿತರಾದ ಸಾಕಷ್ಟು ಕುಶಲಕರ್ಮಿಗಳು ತಮ್ಮ ಬದುಕಿನ ಜಟಕಾ ಬಂಡಿಯನ್ನು ಸಾಗಿಸಲಾಗದೆ ಉಸಿರುಗಟ್ಟಿ ನಿಂತಿದ್ದಾರೆ.
ಏನು ಮಾಡೋದು, ಯಾರನ್ನು ಕೇಳೊದು ಎಂಬ ಚಿಂತೆಯಲ್ಲಿದ್ದಾರೆ. ಇದ್ದವರು ಹೇಗೋ ಏನೋ ಜೀವನ ಸಾಗಿಸಬಹುದು. ಆದರೆ ಅಂದೆ ದುಡಿದು ಅಂದೆ ಜೀವನ ಸಾಗಿಸುವ ಕಾರ್ಮಿಕರು ಪ್ರತಿ ದಿವಸವನ್ನು ಕಳೆಯುವುದು ದೊಡ್ಡ ಸಾಹಸವಾಗಿದೆ. ಸಾಲ ಮಾಡಿ ಮಡಿಕೆ ಕುಡಿಕೆ ತಯಾರಿಸಿ ಇನ್ನೇನು ಮಾರುಕಟ್ಟೆಗೆ ಕಾಲಿಡುವ ಸಂದರ್ಭದಲ್ಲಿ ಕೊರೊನಾ ವೈರಸ್ ಇವರ ನಿರೀಕ್ಷೆಯನ್ನು ಸುಳ್ಳು ಮಾಡಿದೆ. ಇದರಿಂದ ಕುಶಲ ಕರ್ಮಿಗಳು ದಿಗ್ಬ್ರಾಂತರಾಗಿ ಕುಳಿತಿದ್ದಾರೆ. ಮಾಡಿದಸಾಲವನ್ನು ಹೇಗೆ ತೀರಿಸುವುದು, ಬದುಕನ್ನು ಹೇಗೆ ನಡೆಸುವುದು ಎಂಬ ಆತಂಕದಲ್ಲಿದ್ದಾರೆ. ಸರಕಾರವು ಕಡು ಬಡವರಿಗೆ ಪಡಿತರ ಅಕ್ಕಿ ಗೋಧಿ ನೀಡಿದೆ. ಆದರೆ ಇಷ್ಟರ ಮೇಲೆ ಬದುಕು ಸಾಗದು. ಇನ್ನೂ ಹಲವಾರು ಮೂಲ ಭೂತ ಅವಶ್ಯಕ ವಸ್ತುಗಳನ್ನು ಸರಕಾರವು ಪೂರೈಸ ಬೇಕಾಗಿದೆ. ಅಂದರೆ ಮಾತ್ರ ಇವರ ಬದುಕು ಸಾಗುವುದು. ಲಕ್ಷಗಟ್ಟಲೇ ಸಾಲ ಶೂಲ ಮಾಡಿ ತಯಾರಿಸಿದ ಮಡಿಕೆ ಕುಡಿಕೆಗಳನ್ನು ಎಲ್ಲಿಗೆ ಒಯ್ಯೋದು, ಯಾರಿಗೆ ಮಾರೋದು? ಇಡೀ ದೇಶವೇ ಲಾಕ್‍ಡೌನ್ ಆದಾಗ ವ್ಯವಹಾರ ಮಾಡೋದು ಹೇಗೆ ಎಂಬ ಪ್ರಶ್ನೆಗಳಿಗೆ ಇವರ ಹತ್ತಿರ ಉತ್ತರವಿಲ್ಲ. ದೇಶ ಲಾಕ್‍ಡೌನ್ ಆದಾಗಿನಿಂದ ಇಲ್ಲಿಯವರೆಗೂ ಹೇಗೋ ಏನೋ ಜೀವನ ನಡೆಸಿಕೊಂಡು ಬಂದ ಇವರ ಕೈಗಳೀಗ ಸೋತಿವೆ. ಇದಕ್ಕೆ ಸರಕಾರದ ಆಶ್ರಯ ಅವಶ್ಯಕತೆ ಇದೆ. ಸದ್ಯದ ಇವರ ಪರೀಸ್ಥಿತಿ ತುಂಬಾ ನಾಜೂಕಾಗಿದೆ. ಬದುಕಲು ಮನೆಯಲ್ಲಿರಬೇಕು ಎಂದು ಸರಕಾರ ಹೇಳುತ್ತಿದೆ. ಆದರೇ ಬದುಕು ನಡೆಸಬೇಕಾದರೆ ಕೆಲಸ ಮಾಡಲು ಹೊರ ಬೀಳಬೇಕಾದ ಅವಶ್ಯಕತೆ ಇದೆ. ಇದರಿಂದ ಒಳಗಿದ್ದರೂ ಚಿಂತೆ ಹೊರಬಿದ್ದರು ಚಿಂತೆ. ಒಟ್ಟಿನಲ್ಲಿ ಕುಶಲ ಕರ್ಮಿಗಳು ದಿಕ್ಕು ತೋರದೇ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಒಟ್ಟಿನಲ್ಲಿ ಮಧ್ಯಮ ವರ್ಗದವರನ್ನು ಹಿಡಿದು ಎಲ್ಲ ಕುಶಲ ಕರ್ಮಿಗಳು ಬದುಕನ್ನು ನಡೆಸಲು ಹರಸಾಹಸ ಪಡುತ್ತಿದ್ದಾರೆ. ಇವರ ನೋವಿನ ಕೂಗಿಗೆ ಸಹಾಯದ ಅವಶ್ಯಕತೆ ಇದೆ. ಇದಕ್ಕೆ ಸರಕಾರವು ಆದಷ್ಟು ಬೇಗ ಕೈಹಿಡಿಯಬೇಕಾಗಿದೆ.
Social Plugin