ತೇರದಾಳ : ಕೊರೊನಾ ಹರಡದಿರಲು ಎಲ್ಲೆಡೆ ಲಾಕ್‍ಡೌನ್ ಮುಂದುವರೆದಿದ್ದು, ಇಲ್ಲಿನ ಜನರು ಮಾತ್ರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಇಂದು ಗುರುವಾರ ಬೆಳಿಗ್ಗೆ 6ಗಂಟೆ ಸುಮಾರಿಗೆ ಪೇಠ ಭಾಗದಲ್ಲಿ ಸಂತೆ ಸೇರಿದ್ದರು.
  ಶಾಸಕರಾದ ಸಿದ್ದು ಸವದಿ, ತಾಲೂಕಾ ಆಡಳಿತ, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಪುರಸಭೆಯವರು ಕೊರೊನಾ ಹರಡದಂತೆ ಮನೆಯಲ್ಲಿಯೇ ಇರಿ ಎಂದು ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಪಟ್ಟಣದ ಜನತೆ ಮಾತ್ರ ಈ ನಿಯಮಕ್ಕೆ ಕ್ಯಾರೆ ಎನ್ನುತ್ತಿಲ್ಲ. ಪೋಲಿಸ್ ಇಲಾಖೆಯವರು ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಲು ಲಾಠಿ ಏಟು ಕೊಟ್ಟದ್ದಾಯಿತು. ಪೋಲಿಸ್‍ರ ಜೊತೆ ಸೇರಿ ತಹಶೀಲ್ದಾರ ಪ್ರಶಾಂತ ಚನಗೊಂಡ ಲಾಠಿ ಹಿಡಿದು ಗಲ್ಲಿಗಲ್ಲಿಯಲ್ಲಿ ಸಂಚರಿಸಿ ಮನೆಯಲ್ಲಿರಿ ಎಂದು ಬೆಳಿಗ್ಗೆಯಿಂದ ಸಂಜೆಯಯವರೆಗೆ ತಿರುಗಿದರು. ಇಷ್ಟು ಸಾಲದ್ದಕ್ಕೆ ದ್ವಿಚಕ್ರ ವಾಹನ ಸವಾರರಿಗೆ ಆರತಿ ಮಾಡಿ ಕೈಮುಗಿದು ಮನೆಯಿಂದ ಹೊರಗೆ ಬರಬೇಡಿ ಎಂದು ಹೇಳಿದ್ದರು. ಇದೆಲ್ಲವನ್ನು ಮರೆತ ಜನರು ಇಂದು ಗುರುವಾರ ಬೆಳಿಗ್ಗೆ ಸಂತೆ ಸೇರಿ ಮತ್ತಷ್ಟು ಜನರಲ್ಲಿ ಆತಂಕ ಮೂಡಿಸಿದರು.
  ಇಂದು ಗುರುವಾರ ಸಂತೆಯ ದಿನ ಒಂದೆಡೆಯಾದರೆ ಅಮವಾಸ್ಯೆ ಇನ್ನೊಂದಡೆ. ಜನರಿಗೆ ಸಮಾಧಾನವೇ ಇಲ್ಲದಂತಾಗಿದೆ. ತಾಲೂಕಾ ಆಡಳಿತ, ಪೋಲಿಸ್, ಆರೋಗ್ಯ ಇಲಾಖೆ ಪುರಸಭೆಯವರು ತಮ್ಮೆಲ್ಲ ಕುಟುಂಬವನ್ನು ಮರೆತು ಹಗಲು ರಾತ್ರಿ ಸಾರ್ವಜನಿಕರ ಆರೋಗ್ಯ ಕಾಪಾಡಲು ಮುಂದಾಗಿದ್ದಾರೆ. ಇದೆಲ್ಲವನ್ನು ಲೆಕ್ಕಿಸದ ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಸಂತೆ ಸೇರುತ್ತಿದ್ದಾರೆ. ಇವರಿಗೆ ಸರಕಾರದ ಆದೇಶಕ್ಕೆ ಕಿಮ್ಮತ್ ಇಲ್ಲದಂತಾಗಿದೆ. ಸರಕಾರದ ಪ್ರತಿನಿಧಿಗಳು ಇಷ್ಟೆಲ್ಲ ಶ್ರಮ ಪಡುತ್ತಿರುವುದು ನಮ್ಮೇಲ್ಲರ ಹಿತ ರಕ್ಷಣೆಗಾಗಿ. ಇನ್ನಷ್ಟು ದಿನ ನಾವು ಮನೆಯಲ್ಲಿಯೇ ಕುಳಿತರೆ ಈಗ ಬಂದಿರುವಂತ ಅಪಾಯದಿಂದ ಪಾರಾಗಬಹುದು. ಸರಕಾರದ ಆದೇಶವನ್ನು ಪಾಲಿಸುವುದರ ಜೊತೆಗೆ ಪೋಲಿಸ್, ಆರೋಗ್ಯ, ಕಂದಾಯ ಇಲಾಖೆಗೆ ಹಾಗೂ ಪುರಸಭೆ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳಿಗೆ ಕೈಜೋಡಿಸೋಣ.