ಲಾಕ್‍ಡೌನ್‍ಗೆ ಕ್ಯಾರೇ ಎನ್ನದೆ ಅನಧಿಕೃತ ಇಟ್ಟಂಗಿ ಭಟ್ಟಿಗಳು

* ದೂರು ನೀಡಿದರೂ ಯಾವದೇ ಪ್ರಯೋಜನವಾಗುತ್ತಿಲ್ಲ

-ಮಲ್ಲಿಕಾರ್ಜುನ ತುಂಗಳ

ರಬಕವಿ-ಬನಹಟ್ಟಿ,ಏ21: ಇಡೀ ದೇಶವೇ ಲಾಕ್‍ಡೌನ್‍ನಿಂದ ಮೌನಗೊಂಡಿದ್ದರೂ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಮಾತ್ರ ಅನಧಿಕೃತ ಇಟ್ಟಂಗಿ ಭಟ್ಟಿಗಳು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ತಮ್ಮ ದುರಾಸೆಯ ಮೂಲಕ ಸುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸುವಲ್ಲಿ ಕಾರಣವಾಗಿವೆ.

   ತಾಲೂಕಿನ ಆಸಂಗಿ, ಕುಲಹಳ್ಳಿ, ಹಿಪ್ಪರಗಿ ಸುತ್ತ ಸಾಕಷ್ಟು ಅನಧಿಕೃತ ಇಟ್ಟಂಗಿ ಭಟ್ಟಿಗಳು ತಲೆ ಎತ್ತಿವೆ. ಇವುಗಳ ಬಿಡುವ ಹೊಗೆಯಿಂದ ರೈತರು ಬೆಳೆದ ಬೆಳೆಗಳು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿರುವದನ್ನು ಒಂದು ವರ್ಷದಿಂದಲೂ ಸ್ಥಳೀಯ ಗ್ರಾಮ ಪಂಚಾಯ್ತಿಗೆ ಮನವಿ ಮಾಡುತ್ತಿದ್ದರೂ ಯಾವದೇ ಪ್ರಯೋಜನವಾಗಿಲ್ಲ.

   ಇದೀಗ ಕೊರೊನಾ ವೈರಸ್ ಎಲ್ಲೆಡೆ ಹಬ್ಬಿದ್ದು, ಸದ್ಯಕ್ಕೆ ರಬಕವಿ-ಬನಹಟ್ಟಿ ತಾಲೂಕು ಇದರಿಂದ ಮುಕ್ತಹೊಂದಿರುವ ತಾಲೂಕಾಗಿದೆ. ಇಲ್ಲಿನ ಅನಧಿಕೃತ ಇಟ್ಟಂಗಿ ಭಟ್ಟಿಗಳಲ್ಲಿ ಎಲ್ಲೆಲ್ಲಿಂದಲೂ ಕಾರ್ಮಿಕರು ಬರುತ್ತಿದ್ದು, ಇವರಿಗೆ ಯಾವದೇ ಮಾಸ್ಕ್ ಇಲ್ಲದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿರುವದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸುವಲ್ಲಿ ಕಾರಣವಾಗಿದೆ.

   ರಾತ್ರಿ ಹೊತ್ತು ಲಾರಿ, ಟ್ರ್ಯಾಕ್ಟರ್‍ಗಳ ಮೂಲಕ ಸಾಗಿಸುತ್ತಿರುವ ಇಟ್ಟಂಗಿಗಳಿಂದ ಗ್ರಾಮಸ್ಥರು ಪ್ರಶ್ನೆ ಮಾಡಿದರೆ ಬೆದರಿಕೆಯ ಉತ್ತರ ಸಹಜವಾಗಿ ಮೌನವಾಗುತ್ತಿದ್ದಾರೆ. ಈ ಭಟ್ಟಿಗಳ ರಸ್ತೆ ಮೂಲಕ ತೆರಳಬೇಕಾದರೆ ಕಣ್ಣು ಮುಚ್ಚಿಕೊಂಡೇ ತೆರಳಬೇಕಾದ ಪರಿಸ್ಥಿತಿ ಇದೆ.

ರೈತರ ಗೋಳು: ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ಕಬ್ಬು, ಬಾಳೆ, ಮೆಕ್ಕೆ ಜೋಳ ಬೆಳೆ ಬೆಳೆಯುವ ರೈತರು ಭಟ್ಟಿ ಬೂದಿ, ಹೊಗೆಯಿಂದ ಕಂಗೆಟ್ಟಿದ್ದಾರೆ.

   `ಅನಧಿಕೃತ ಭಟ್ಟಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಸಂಗಿ ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ’. ಪಾಂಡುರಂಗ ಸಾಲ್ಗುಡಿ, ಗ್ರಾಮಸ್ಥ.