ಕೆಂಜೂರಿನ ಆದರ್ಶ ಶೆಟ್ಟಿ ಮತ್ತು ಮಹೇಂದ್ರ ಕುಮಾರ್ ಹೋರಾಟ
- ವಸಂತ್ ಗಿಳಿಯಾರ್
ಆದರ್ಶ ಕೆಂಜೂರ್ ಕರೆ ಮಾಡಿದ್ದರು. ಮಹೇಂದ್ರಣ್ಣನ ಸಾವಿನ ಬಗ್ಗೆ ನೋವಿನಲ್ಲಿ. ಮಹೇಂದ್ರಣ್ಣನ ಬದುಕನ್ನ ಎರಡು ಭಾಗವಾಗಿ ನೋಡಿದರೆ ಅದರಲ್ಲಿ ದೊಡ್ಡ ಭಾಗ ಅವರು ತನ್ನವರಿಗಾಗಿಯೇ ಬದುಕಿದವರು. ಈ ಆದರ್ಶ ಕೆಂಜೂರ್ ಸಾಮಾನ್ಯ ಮನುಷ್ಯನಲ್ಲ. ಆಗ ಭಜರಂಗ ಧಳದಲ್ಲಿ ತೆಕ್ಕಟ್ಟೆ ಪ್ರಕಾಶಣ್ಣ, ಕುಂದಾಪುರದಲ್ಲಿ ಸಂಗಮ್ ಪ್ರದೀಪ್ ಕೆಂಜೂರಿನಲ್ಲಿ ಆದರ್ಶ ಕೆಂಜೂರ್ ಈ ಮೂರೂ ಹೆಸರೂ ಜಿಲ್ಲೆಯಲ್ಲಿ ದೊಡ್ಡ ಸೌಂಡಿನಲ್ಲಿತ್ತು. ಈ ಮೂವರ ಕೊಲೆಗೂ ತೆರೆ ಮರೆಯಲ್ಲಿ ಯೋಜನೆಗಳಾಗಿದ್ದವು. ಸಾಲು ಸಾಲಾಗಿ ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆಗಳಾಗುತ್ತಿದ್ದ ಹೊತ್ತದು. ಅಂಥಾ ಹೊತ್ತಿಗೆ ಈ ಮೂವರ ಹೆಣ ಕೆಡವಲೂ ಸಂಚುಗಳಾಗಿದ್ದವು. ನಿಮಗೆ ಆದರ್ಶ ಕೆಂಜೂರ್ ಬದುಕಿನ ಒಂದು ಪ್ರಮುಖ ಘಟನೆಯನ್ನ ಹೇಳಲೇ ಬೇಕು. ಆಗ ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ಚಾಲ್ತಿಯಲ್ಲಿತ್ತು. ಅದಕ್ಕೆ ಬಾಜಪ ನಾಯಕರು ಜಗಜೀವನ್ ದಾಸ್ ಶೆಟ್ಟಿ ಬ್ರಹ್ಮಾವರ, ಜ್ಞಾನ ವಸಂತ ಶೆಟ್ಟಿ ಮತ್ತು ಕೋಟ ಶ್ರೀನಿವಾಸ ಪೂಜಾರಿಯವರು. ಯುವ ನಾಯಕನಾಗಿ ಭರವಸೆ ಮೂಡಿಸಿದ್ದು ಬೈಕಾಡಿ ಸುಪ್ರಸಾದ್ ಶೆಟ್ಟಿ. ಆ ಹೊತ್ತಿಗೆ ಬ್ರಹ್ಮಾವರ ವ್ಯಾಪ್ತಿಯಲ್ಲಿ ಕಾಂಗ್ರೇಸ್ ಬಾಜಪಕ್ಕಿಂತಲೂ ಹೆಚ್ಚು ಹೆಗ್ಡೆ ಬಾಜಪ ಪ್ರಭಲ ವಿರೋಧಿ ವಲಯ. ಅಂಥಹ ಹೊತ್ತಿಗೆ ಆದರ್ಶ ಕೆಂಜೂರ್ ಬಂಧನಕ್ಕೆ ಒಳಪಡುತ್ತಾರೆ. ಗಂಧ ಸಾಗಾಟದ ಪ್ರಕರಣದಲ್ಲಿ! ಆ ಕಾಲದಲ್ಲಿ ಇದು ವ್ಯವಸ್ಥಿತವಾದ ಷಡ್ಯಂತ್ರವಾಗಿತ್ತು. ಆದರ್ಶ್ ಶೆಟ್ಟಿಯ ಬೆಳವಣಿಗೆ ಸಹಿಸದವರು ವಾಮ ಮಾರ್ಗ ಹಿಡಿದಿದ್ದರು. ಆ ಹೊತ್ತಿಗೆ ಮುತಾಲಿಕ್ ಭಜರಂಗ ದಳ ಬಿಟ್ಟು ತನ್ನದೇ ಜಾಡು ಹಿಡಿದು ಹೋಗಿದ್ದರು. ಮಹೇಂದ್ರ ಕುಮಾರ್ ರಾಜ್ಯ ಸಂಚಾಲಕರಾಗಿದ್ದ ಹೊತ್ತು. ಒಂದು ಹಂತದಲ್ಲಿ ಆದರ್ಶ್ ಶೆಟ್ಟರ ಪರ ನಿಲ್ಲಲು ಸಂಘವೂ ಹಿಂದೇಟು ಹಾಕಿತ್ತು ಎನ್ನುವುದನ್ನ ನೀವು ನಂಬಬೇಕು. ಅಗ್ನಿದಿವ್ಯದಿಂದ ಎದ್ದು ಬಂದು ಆದರ್ಶ ಈ ಪ್ರಕರಣದಿಂದ ಮುಕ್ತರಾಗಲಿದ್ದಾರೆ ಎಂದು ಸಂಘದ ಪ್ರಮುಖರು ಮಾತಾಡಿದ್ದರು.

ಹಾಗೆಂದರೆ? ಕೇಸು ಮುಗಿಸಿಕೊಂಡು, ಕೋರ್ಟಿನಲ್ಲಿ ಬಡಿದಾಡಿ ಬರುವುದು ಎಂದೇ? ಬಿಡಬೇಕಲ್ಲಾ ಈ ಮಹೇಂದ್ರ ಕುಮಾರ್? ಸಾಧ್ಯವೇ ಇಲ್ಲ. ಅಗ್ನಿದಿವ್ಯದಿಂದ ಗೆದ್ದು ಬರಲಿಕ್ಕೆ ಆದರ್ಶ ಶೆಟ್ಟಿಯನ್ನ ಅಗ್ನಿಪರೀಕ್ಷೆಗೆ ಒಡ್ಡಬೇಕಲ್ಲವೆ? ಸುಳ್ಳು ಪ್ರಕರಣ ದಾಖಲು ಮಾಡಿದರೆ ರಾಜ್ಯದ ಮೂಲೆ ಮೂಲೆಯಿಂದ ಸಂಘಟನೆಯ ಹುಡುಗರು ಕೆಂಜೂರಿಗೆ ಮೆರವಣಿಗೆ ಬಂದಾರು! ಹುಷಾರ್ ಅಧಿಕಾರಿಗಳೇ ಆದರ್ಶ ಶೆಟ್ಟಿ ತಪ್ಪಿತಸ್ಥನಲ್ಲ, ಆತ ನಮ್ಮವ ತಪ್ಪು ಮಾಡುವವನಲ್ಲ ಎಂದು ಅಬ್ಬರಿಸಿ ಪ್ರತಿಭಟನೆಗೆ ಕರೆ ಕೊಟ್ಟರು! ಖುದ್ದು ಮಹೇಂದ್ರ ಕುಮಾರ್ ಎಲ್ಲಾ ಹಿರಿಯರನ್ನೂ ಪ್ರತಿಭಟನೆಗೆ ಆಗಮಿಸುವಂತೆ ವಿನಂತಿಸಿಕೊಂಡರು. ಕರಾವಳಿಯ ರಾಜಕೀಯದ ಭೀಷ್ಮ ಎ.ಜಿ. ಕೊಡ್ಗಿ, ಬಾಜಪದ ಹಿರಿಯ ಡಾ. ಆಚಾರ್ಯ, ಕೋಟ ಶ್ರೀನಿವಾಸ ಪೂಜಾರಿ, ರಘುಪತಿ ಭಟ್, ಸುನಿಲ್ ಕುಮಾರ್ ಎಲ್ಲರೂ ಪ್ರತಿಭಟಿಸಿದರು. ಕೆಲವೇ ಗಂಟೆಯಲ್ಲಿ ಆದರ್ಶ ಶೆಟ್ಟರ ಬಿಡುಗಡೆಯಾಯಿತು.

ಮುಂದೆ ನಡೆದದ್ದೆಲ್ಲಾ ಇದೀಗ ಇತಿಹಾಸ. ನಿನ್ನೆ ಕೆಲವರು ಮಹೇಂದ್ರ ಎಂದು ಏಕವಚನದಲ್ಲಿ ಸಂಬೋಧಿಸಿ ಬರೆದರು. ವ್ಯಕ್ತಿಯೊಬ್ಬ ನಮ್ಮದಲ್ಲದ ವಿಚಾರಧಾರೆಯೊಂದಿಗೆ ಹೊರಟನೆಂದರೆ ಅವನೊಡನೆ ವೈಚಾರಿಕ ಭಿನ್ನಾಭಿಪ್ರಾಯ ಇರಬೇಕೇ ಹೊರತು ವೈಯಕ್ತಿಕ ದ್ವೇಷವಲ್ಲ! ಆ ಮೇಲ್ಪಂಕ್ತಿಯನ್ನ ಅನುಸರಿಸಿದ ಯಡಿಯೂರಪ್ಪನವರು, ಸಿ.ಟಿ ರವಿಯವರು ಇನ್ನೂ ಅನೇಕರು ಮಹೇಂದ್ರ ಕುಮಾರ್ ಸಾವಿಗೆ ಸಂತಾಪಿಸಿದ್ದನ್ನ ಗಮನಿಸಿದರೆ ಅರ್ಥಮಾಡಿಕೊಳ್ಳಬಹುದು. ಮುತಾಲಿಕ್ ಅದೆಲ್ಲಿದ್ದರೋ ಗೊತ್ತಿಲ್ಲ! ಕೊಪ್ಪದ ತನಕ ಹೋಗಿ ಮಹೇಂದ್ರ ಕುಮಾರ್ ಗೆ ಅಂತಿಮ ನಮನ ಸಲ್ಲಿಸಿ ಬಂದರು.

ರಾಮಾಯಣದಲ್ಲಿನ ಸಣ್ಣದೊಂದು ಘಟನೆಯನ್ನ ಹೇಳುತ್ತಾ ಇದನ್ನ ಇಲ್ಲಿಗೆ ಮುಗಿಸುತ್ತೇನೆ. ರಾಮ ರಾವಣನನ್ನ ವಧಿಸಿದ ನಂತರ ರಾವಣನ ಸಹೋದರ ರಾಮ ಭಕ್ತ ವಿಭಿಷಣ ರಾವಣನ ಅಂತ್ಯವಿಧಿಗಳನ್ನ ನೆರವೇರಿಸಲಾರೆ ಎಂದಾಗ ರಾಮನೇ ವಿಭಿಷಣನ ಮನವೊಲಿಸುತ್ತಾನೆ. ಇದ್ದಾಗ ಬದುಕಿದ್ದಾಗ,ಹಗೆತನ,ದ್ವೇಷ,ವೈಶಮ್ಯ ಸತ್ತ ಮೇಲೆ ಅವನ ಜೊತೆಗೆ ಅವೆಲ್ಲವೂ ಮುಗಿದು ಹೋಗಬೇಕು. ವಿಭೀಷಣ ಕೇಳು ರಾವಣನ ಅಂತ್ಯವಿಧಿ ನೆರವೇರಿಸುವುದು ನಿನ್ನ ಕರ್ತವ್ಯ, ನೀನು ಮಾಡದಿದ್ದರೆ ನಾನು ಮಾಡುತ್ತೇನೆ ಎನ್ನುತ್ತಾನೆ ರಾಮ. ನಂತರವೇ ವಿಭೀಷಣ ರಾವಣನ ಅಂತ್ಯವಿಧಿಃ ನೆರವೇರಿಸುತ್ತಾನೆ.ದ್ವೇಷಗಳು ನಮ್ಮನ್ನೇನು ಎತ್ತರಕ್ಕೆ ತಲುಪಿಸುವುದಿಲ್ಲ. ಅಷ್ಟಕ್ಕೂ ನಾನಿಲ್ಲಿ ಮಹೇಂದ್ರಣ್ಣನ ಎಲ್ಲಾ ತಪ್ಪುಗಳನ್ನೂ ಸರಿ ಎನ್ನುತ್ತಲಿಲ್ಲ. ಆದರೆ ದ್ವೇಷದಲ್ಲಿ ಅವರ ಸಾವನ್ನ ಸಂಭ್ರಮಿಸುವಂತಹ ತಪ್ಪನ್ನ ಅವರು ಮಾಡಿಲ್ಲ. ಮಹೇಂದ್ರ ಕುಮಾರ್ ತನ್ನ ರಾಜ್ಯ ಸಂಚಾಲಕತ್ವವನ್ನ ತ್ಯಾಗ ಮಾಡಿದ್ದು ರಾಜ್ಯದಲ್ಲಿದ್ದ ಬಾಜಪ ಸರ್ಕಾರ ಉಳಿಯಬೇಕು ಎನ್ನುವ ಕಾರಣಕ್ಕಾಗಿ ಎನ್ನುವುದನ್ನ ಇವರೆಲ್ಲ ನೆನಪಿಸಿಕೊಳ್ಳಬೇಕು. ರಾಜ್ಯ ರಾಜಕಾರಣದ ಹಿರಿತಲೆಗಳೇ ’ಮೂರೇ ಮೂರು ದಿನ ಬಂಧನ’ ಎಂದು ಆಶ್ವಾಸನೆ ಕೊಟ್ಟು ಅವರನ್ನ ಜೈಲಿಗಟ್ಟಿತ್ತು ರಾಜ್ಯ ಸರ್ಕಾರ. ಆಗ ಬಾಜಪದ ಕೈನಲ್ಲೇ ಅಧಿಕಾರವಿತ್ತು. ಆದರೆ ನಂತರ ನಡೆದದ್ದೇ ಬೇರೆ.

ಬರೆದರೆ ಇದಕ್ಕೆ ಅಂತ್ಯವಿಲ್ಲ. ಆದರ್ಶಣ್ಣನ ಒಂದು ಕರೆ ಇಷ್ಟನ್ನೆಲ್ಲಾ ಬರೆಸಿತು


ಕೃಪೆ : ಮುಖಪುಟ...