ತ್ರ್ಯಂಬಕಂ ಯಜಾಮಹೇ ಮತ್ತು ವಶಿಷ್ಠ
ವಸಿಷ್ಠ ಒಬ್ಬ ಮಹರ್ಷಿಯಾಗಿದ್ದ. ನಿತ್ಯಾನುಷ್ಠಾನ ಪರಾಯಣನಾಗಿದ್ದ. ತಪಸ್ವಿ, ಆದರೆ ಈತನಿಗೆ ನಿದ್ದೆಯಲ್ಲಿ ಕನಸ್ಸಿನಲ್ಲಿ ನಡೆಯುವ ಅಭ್ಯಾಸ ಇತ್ತು. ಹೀಗಿರುತ್ತಾ ಒಮ್ಮೆ ಈತ ನಿದ್ದೆಗಣ್ಣಿನಲ್ಲಿ ನಡೆದುಕೊಂಡು ಹೋಗುತ್ತಾ ತನ್ನ ತಂದೆಯಾದ ವರುಣನ ಮನೆಯ ಸಮೀಪಕ್ಕೆ ಹೋಗುತ್ತಾನೆ. ವರುಣನ ಮನೆಯ ಕೊಟ್ಟಿಗೆಯ ಹತ್ತಿರ ನಾಯಿ ಮಲಗಿತ್ತು. ಮಧ್ಯ ರಾತ್ರಿಯಲ್ಲಿ ನಾಯಿ ಮಲಗಿದ್ದನ್ನು ಗಮನಿಸದೇ ಈತ ಸಾಗುತ್ತಿರುವಾಗ ನಾಯಿ ಬಹಳ ಜೋರಾಗಿ ಕೂಗುತ್ತದೆ. ಕೂಗುವುದು ಮಾತ್ರವಲ್ಲ ಕಚ್ಚಲು ಅಟ್ಟಿಸಿಕೊಂಡು ಬರುತ್ತದೆ. ಇದು ವಸಿಷ್ಠನ ಕುರಿತಾಗಿ ಇರುವ ಕಥೆಗಳಲ್ಲಿ ಒಂದು. ಸಪ್ತರ್ಷಿಗಳಲ್ಲೊಬ್ಬನಾದ ವಸಿಷ್ಠನ ತಂದೆ ವರುಣ ಎನ್ನುವುದು ತಿಳಿಯುತ್ತದೆ. ಮಿತ್ರಾವರುಣರ ರೇತಸ್ಸು ವಸತೀವರಿ ಎನ್ನುವ ಯಜ್ಞಪಾತ್ರೆಯಲ್ಲಿ ಬಿದ್ದು ಉರ್ವಶಿಯಲ್ಲಿ ಜನ್ಮ ಪಡೆದ ಎಂದು ಬೃಹದ್ದೇಶಿಯಲ್ಲಿ ವಿವರವಾಗಿ ಸಿಗುತ್ತದೆ.
ವಸ್ ಎನ್ನುವುದು ವಾಸ್ತು ಎನ್ನುವ ಪದದ ಧಾತು. ವಸತಿಯನ್ನು ಸೂಚಿಸುವ ಈ ಪದ ವಾಸಮಾಡಲು ಯೋಗ್ಯವಾದ ಮನೆ ಎಂದು ಅರ್ಥವನ್ನು ಕೊಡುತ್ತದೆ. ವಾಸ್ತೋಷ್ಪತಿ ಎಂದರೆ ವಾಸಮಾಡಲು ಯೋಗ್ಯವಾಗಿರುವ ಮನೆಯ ಯಜಮಾನ ಎಂದಾಗುತ್ತದೆ. ಈತನೇ ಆ ಮನೆಯ ಸಂರಕ್ಷಕನಾಗಿರುತ್ತಾನೆ. ಹಾಗಾದರೆ ಈ ವಾಸ್ತು ಎಂದರೆ ಯಾರು ? ಬೇರೆ ಬೇರೆ ವಿಧವಾಗಿ ರೂಪ ಧರಿಸಿ ಯಾವುದೇ ರೋಗ ರುಜಿನಗಳು ಬಂದರೂ ಗುಣಪಡಿಸುವ ಶಕ್ತಿಯನ್ನು ಹೊಂದಿದ ದೇವರೂಪ ರೋಗನಿರೋಧಕ ಶಕ್ತಿಯಂತಿರುವ ದೇವನು. ಇವನೇ ರುದ್ರರೂಪಿ ಭಗವಂತ ಎನ್ನಲಾಗುತ್ತದೆ. ಈ ವಸಿಷ್ಠ ಎನ್ನುವ ಪದ ಅದನ್ನೂ ಸೂಚಿಸುತ್ತದೆ.
ವಾಸ್ತೋಷ್ಪತೇ ಪ್ರತಿ ಜಾನೀಹ್ಯಸ್ಮಾನ್ವೇಶ್ಸ್ತ್ವಾವೇಶೋ ಅನಮೀವೋ ಭವಾ ನಃ|
ಯತ್ತ್ವೇ ಮಹೇ ಪ್ರತಿ ತನ್ನೋ ಜುಷಸ್ವ ಶಂ ನೋ ಭವ ದ್ವಿಪದೇ ಶಂ ಚತುಷ್ಪದೇ ||
ನಾವು ವಾಸಿಸುವ ಮನೆಯನ್ನು ಕಾಪಾಡುವ ವಾಸ್ತೋಷ್ಪತಿ ದೇವನೇ! ಮನೆಯಲ್ಲಿ ವಾಸಿಸುವ ನಮ್ಮನ್ನು ನೀನು ನಿನ್ನ ಆರಾಧಕರು ಎಂದು ತಿಳಿ. ಮನೆಯಲ್ಲಿ ನಾವು ವಾಸಿಸಲು ಉತ್ತಮವಾದ ವಾತಾವರಣವನ್ನು ನಿರ್ಮಿಸಿ ಸಕಲ ರೋಗ ನಿರೋಧಕನಾಗಿರು. ನೀನು ಸಂತುಷ್ಟನಾಗಿದ್ದು ನಾವು ಬಯಸುವ ಸುಖ ಮತ್ತು ಸಂಪತ್ತನ್ನು ನಮಗೆ ನೀಡು. ಮುಖ್ಯವಾಗಿ ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಹಾಗೂ ನಮ್ಮ ಮನೆಯಲ್ಲಿ ವಾಸಿಸುವ ಪಶುಗಳಿಗೂ ಪಕ್ಷಿಗಳಿಗೂ ಸುಖವನ್ನು ನೀಡು ಎನ್ನುವುದು ಋಗ್ವೇದ.
ವಾಸ್ತೋಷ್ಪತೇ ಪ್ರತರಣೋ ನ ಏಧಿ ಗಯಸ್ಫಾನೋ ಗೋಭಿರಶ್ವೇಭಿರಿಂದೋ |
ಅಜರಾಸಸ್ತೇ ಸಖ್ಯೇ ಸ್ಯಾಮ ಪಿತೇವಪುತ್ರಾನ್ಪ್ರತಿ ನೋ ಜುಷಸ್ವ ||
ಒಬ್ಬ ತಂದೆ ತನ್ನ ಮಕ್ಕಳಿಗಾಗಿ ಎಷ್ಟೆಲ್ಲಾ ತ್ಯಾಗ ಮಾಡಿ ತನ್ನ ಜೀವನವನ್ನೇ ಮುಡುಪಾಗಿಟ್ಟು ಅವರನ್ನು ಮೇಲಕ್ಕೆ ತರುತ್ತಾನೋ ಅದೇ ರೀತಿ ನಮ್ಮ ಮನೆಯಲ್ಲಿ ಸಂಪತ್ತು ಬೆಳಗಲಿ, ನಮ್ಮ ಗೋವುಗಳು ಅಭಿವೃದ್ಧಿಯನ್ನು ಹೊಂದಲಿ, ನಮಗೆ ಕುದುರೆಗಳನ್ನು ಸಾಕುವಷ್ಟು ಬಲವನ್ನು ನೀಡು ನಮ್ಮ ಸಂಪತ್ತು ದಿನೇ ದಿನೇ ವೃದ್ಧಿಸಿ ನಮಗೆ ಇನ್ನೂ ಬೇರೆ ಬೇರೆ ಮನೆಗಳನ್ನು ನಿರ್ಮಿಸುವ ಶಕ್ತಿ ನೀಡು ಎಂದು ಕೇಳಿಕೊಳ್ಳುತ್ತಾನೆ.
ವಾಸ್ತೋಷ್ಪತೇ ಶಗ್ಮಯಾ ಸಂಸದಾ ತೇ . . . . ಎನ್ನುವಲ್ಲಿ
ಮನೆ ಎನ್ನುವುದು ಹೇಗಿರುತ್ತೆ ಎನ್ನುವುದು ಇಲ್ಲಿ ಹೇಳಲಾಗಿದೆ. ನಮಗೆ ಕಂಡೊಡನೆ ಮನಸ್ಸನ್ನು ಆಕರ್ಷಿಸುತ್ತದೆಯಂತೆ ಅದನ್ನೇ ಇಲ್ಲಿ ರಣ್ವಯಾ ಎನ್ನಲಾಗಿದೆ. ರಮಣೀಯವಾಗುವ ಎನ್ನುವ ಅರ್ಥವನ್ನು ಕೊಡುವುದು. ಇನ್ನು ಶಗ್ಮಯಾ ಎನ್ನುವುದು ಸುಖವನ್ನು ಹೇಳುತ್ತದೆ. ಮನೆಯನ್ನು ಪ್ರವೇಶಿಸಿ ಅಲ್ಲಿ ಉಳಿದಾಗ ನಮಗೆ ಸುಖದ ಅನುಭವವಾಗಬೇಕಂತೆ. ಗಾತುಮತ್ಯಾ ಎಂದು ಹೇಳಿರುವುದು ಮನೆ ಇದ್ದರೆ ಅಲ್ಲಿ ಸುಖವಿದ್ದರೆ ಮತ್ತು ಆಕರ್ಷಕವಾಗಿದ್ದರೆ ಮಾತ್ರ ಸಾಲದು ಇಲ್ಲಿ ಸಂಪತ್ತು ಶೇಖರಣೆಯಾಗುತ್ತಿದ್ದರೆ ಮಾತ್ರ ಉಳಿದವು ಸುಸೂತ್ರವಾಗಿರುತ್ತವೆ ಎನ್ನುವುದು ಶಗ್ಮಯಾ ಎನ್ನುವುದರ ತಾತ್ಪರ್ಯ. ಪಾಹಿ ಕ್ಷೇಮ ಉತ ಯೋಗೇ ವರಂ’ ಇಲ್ಲಿ ಇವಿಷ್ಟೂ ಅಲ್ಲದೇ ನಮಗೆ ರಕ್ಷಣೆ ಬೇಕಾಗುತ್ತದೆ ನಾವು ಮಾಡುವ ಉದ್ಯೋಗದಲ್ಲಿ, ಕಳ್ಳಕಾಕರು, ಬಿಸಿಲು, ಮಳೆ ಶೀತಗಳಿಂದಲೂ ರಕ್ಷಣೆ ಅತ್ಯವಶ್ಯ ಅವುಗಳು ದೊರಕಲಿ, ಮತ್ತು ನಾವು ಅಪೇಕ್ಷಿಸಿದ್ದು ಅತ್ಯಂತ ಸುಲಭವಾಗಿ ದೊರಕುವಂತಾಗಲಿ ಎನ್ನುವುದನ್ನೇ ಯೋಗೇ ಎಂದಿರುವುದು. ಹೀಗೆ ಒಂದು ಮನೆ ಮನೆಯ ಎಲ್ಲರನ್ನೂ ಸುಖ ಸಂತೋಷ ನೆಮ್ಮದಿಯಿಂದ ಬಾಳುವಂತೆ ಮಾಡಬಲ್ಲದು ಆದರೆ ಅದು ವಾಸ್ತೋಷ್ಪತಿಯ ಅಥವಾ ವಾಸ್ತು ದೇವನ ಅನುಗ್ರಹದಿಂದ ಎಂದಿರುವುದು ವಸಿಷ್ಠನ ಹಿರಿಮೆಯನ್ನು ತೋರಿಸಿಕೊಡುತ್ತದೆ.
ಇಷ್ಟೆಲ್ಲಾ ಹೇಳುವ ವಸಿಷ್ಠ ಋಗ್ವೇದ ೭ನೇ ಮಂಡಲದ ದೃಷ್ಟಾರ. ಈತ ೭ನೇ ಮಂಡಲದ ೫೯ನೇ ಋಕ್ಕಿನಲ್ಲಿ ನಹಿ ವಶ್ಚರಮಂ ಚನ ವಸಿಷ್ಠಃ ಎನ್ನುವಲ್ಲಿ ವಸಿಷ್ಠನ ಔದಾರ್ಯವನ್ನು ಹೇಳಲಾಗಿದೆ. ಎಷ್ಟೇ ಕನಿಷ್ಠರಾಗಿದ್ದರೂ ಸಹ ಅವರನ್ನು ಎಂದಿಗೂ ವಸಿಷ್ಠ ತಿರಸ್ಕರಿಸುವುದಿಲ್ಲ ಎಂದು ಮರುತ್ತುಗಳನ್ನು ಕುರಿತು ಅಶ್ವಿನೀ ದೇವತೆಗಳು ಕೊಂಡಾಡುವ ಮಾತಿದು.
ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ |
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾsಮೃತಾತ್|
ಪುಣ್ಯಕಾರ್ಯಗಳನ್ನು ಮಾಡಿದ ಪುಣ್ಯಗಳ ಸುಗಂಧ ಉಳ್ಳವನೂ, ಜಗತ್ತಿನ ಬಲವರ್ಧಕನೂ, ಬ್ರಹ್ಮ, ವಿಷ್ಣು, ಮಹೇಶ್ವರರಿಗೂ ಪಿತೃವಾದ ಜಗನ್ನಿಯಾಮಕನನ್ನು ಪೂಜಿಸುತ್ತೇವೆ. ಬಳ್ಳಿಯಲ್ಲಿ ಕಾಯಿಯಾಗಿ ಹೊರಹೊಮ್ಮಿದ ಉರ್ವಾರುಕ ಪಲವು ತೊಟ್ಟು ಕಳಚಿಕೊಂಡು ಹೊರಬೀಳುವಂತೆ ಮೃತ್ಯುವಿನಿಂದ ನಮ್ಮನ್ನು ಬಿಡುಗಡೆಗೊಳ್ಳುವಂತಾಗಲಿ. ಆದರೆ, ನಮಗೆ ಮುಕ್ತಿ ಸಿಗುವಂತಾಗಲಿ ಎನ್ನುವ ಈ ಮಹಾಮೃತ್ಯುಂಜಯ ಮಂತ್ರವನ್ನು ನಮಗೆ ಕೊಟ್ಟದ್ದು ನಮ್ಮ ಭಾಗ್ಯ. ಇದೇ ಮಂತ್ರ ತೈತ್ತಿರೀಯ ಸಂಹಿತೆಯಲ್ಲಿಯೂ ಸಿಗುತ್ತದೆ. ಯಥಾಸತಿ ಸುಗಂ ಮೇಷಾಯ ಮೇಷ್ಯಾ ಅವಾಂಬ ರುದ್ರ ಮದಿಮಹ್ಯವ ದೇವಂ ತ್ರ್ಯಂಬಕಮ್ | ಯಥಾ ನ ಶ್ರೇಯಸಃ ಕರದ್ಯಥಾ ನೋ ವಸ್ಯಸಃ ಕರದ್ಯಥಾ ನಃ ಪಶುಮತಃ ಕರದ್ಯಥಾ ನೋ ವ್ಯವಸಾಯಯಾತ್ | ತ್ರ್ಯಂಬಕಂ ಯಜಾ
ಮಹೇ ಸುಗಂಧಿಂ ಪುಷ್ಟಿವರ್ಧನಂ | ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾsಮೃತಾತ್| ಏಷ ತೇ ರುದ್ರ ಭಾಗಸ್ತಂ ಜುಷಸ್ವ ತೇನಾವಸೇನ ಪರೋ ಮೂಜವತೋsತೀಹ್ಯವತತಧನ್ವಾ ಪಿನಾಕಹಸ್ತಃ ಕೃತಿವಾಸಾಃ || ಎನ್ನುವಲ್ಲಿ ವೈದ್ಯರೂಪನಾಗಿ ಆರ್ತನಾದವನ್ನು ಆಲಿಸುವ ರುದ್ರನಿಗಿಂತ ದೊಡ್ಡ ವೈದ್ಯನೇ ಇಲ್ಲ ಎನ್ನುವಂತಹ ಭಾವ ಕಟ್ಟಿಕೊಡುತ್ತದೆ. ಅಲ್ಲಿ ಪರಶಿವನೇ ನಮಗೆ ಭಿಷಕ್ ಆಗಿ ನಮ್ಮ ಕಷ್ಟ ಕಾರ್ಪಣ್ಯಗಳನ್ನು ನೀಗುವವನು ಆ ಶಿವನೇ ಎನ್ನುವುದು ಯಜುರ್ವೇದ.
ಇದನ್ನು ಋಗ್ವಿಧಾನದಲ್ಲಿ ಹೇಗೆ ಜಪ ಮಾಡಬೇಕು ಎನ್ನುವ ವಿಧಿಯನ್ನು ಕೊಟ್ಟಿದ್ದು ಯಜುರ್ವೇದವೂ ರುದ್ರರೂಪದಲ್ಲಿ ನಮಕ ಭಾಗದಲ್ಲಿ ನಮಗೆ ಕೊಡುತ್ತದೆ.
#ತ್ರ್ಯಂಬಕಂ_ಯಜಾಮಹೇ

Social Plugin