ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಲಂಬಾಣಿ ತಾಂಡಾದ ಕುಟುಂಬಗಳಿಗೆ ಆಹಾರ ಪೊಟ್ಟಣ ಒದಗಿಸಿದ ಜನತೆ

ಲಂಬಾಣಿ ಕುಟುಂಬಗಳಿಗೆ ಆಹಾರ ಧಾನ್ಯ ಒದಗಿಸಿದ ಜನತೆ
ರಬಕವಿ-ಬನಹಟ್ಟಿ,ಏ20: ದಿ.20 ರಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ `ಕೊರೊನಾ ಯುದ್ಧ: ಸೌಲಭ್ಯಗಳಿಲ್ಲದ ಲಂಬಾಣಿ ತಾಂಡಾ’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ಸುದ್ದಿಗೆ ಸ್ಪಂದಿಸಿದ ರಬಕವಿಯ ಭಾರತ ಗ್ಯಾಸ್ ವಿತರಕ ಸೋಮಶೇಖರ ಕೊಟ್ರಶೆಟ್ಟಿ, ಹಿಂದು ಸಂಘಟನಾ ಮುಖಂಡ ನಂದು ಗಾಯಕವಾಡ ಹಾಗು ಸಮಾಜ ಸೇವಕ ಧರೆಪ್ಪ ಉಳ್ಳಾಗಡ್ಡಿಯವರ ನೇತೃತ್ವದಲ್ಲಿ ಅಲ್ಲಿದ್ದ 15 ಕ್ಕೂ ಅಧಿಕ ಕುಟುಂಬಗಳಿಗೆ ಸೌಲಭ್ಯ ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ಲಾಕ್‍ಡೌನ್ ಮುಕ್ತಾಯದವರೆಗೂ ಇಲ್ಲಿನ 25 ಕುಟುಂಬಗಳಿಗೂ ಆಹಾರ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು.
ಆಸಂಗಿ ಗ್ರಾಮದಿಂದ ದೂರವಿದ್ದರೂ ನೀವು ಸುರಕ್ಷಿತವಾಗಿದ್ದೀರಿ. ಸುಮಾರು 150 ಜನರನ್ನು ಹೊಂದಿರುವ ಈ ತಾಂಡಾದಲ್ಲಿ ಹೊಸಬರಿಗೆ ಉಳಿಯಲು ಅವಕಾಶ ಕಲ್ಪಿಸಬೇಡಿ, ಸೌಕರ್ಯಗಳ ಸಮಸ್ಯೆಯಾದಲ್ಲಿ ಯಾರಾದರೊಬ್ಬರು ಸ್ಥಳೀಯ ಗ್ರಾಮ ಪಂಚಾಯ್ತಿಗೆ ಮನವರಿಕೆ ಮಾಡಿದ್ದಲ್ಲಿ ಒದಗಿಸುವರು ಹೀಗೆ ಹಲವಾರು ಧೈರ್ಯಗಳನ್ನು ತುಂಬಿ. ಅಂದಿನ ದುಡಿಮೆ ಅಂದೇ ಖರ್ಚು ಪರಿಸ್ಥಿತಿಯಲ್ಲಿನ ಕುಟುಂಬಗಳಿಗೆ ಸಾಂತ್ವನ ಹೇಳಿ ಲಾಕ್‍ಡೌನ್ ಮುಕ್ತಾಯಗೊಳ್ಳುವವರೆಗೂ ತಾಂಡಾ ಬಿಟ್ಟು ಹೊರಬೇಡಿಯೆಂದು ಧರೆಪ್ಪ ಉಳ್ಳಾಗಡ್ಡಿ ಮನವಿ ಮಾಡಿದರು.
ದುಡ್ಡಿದ್ದರೂ ಊಟವಿಲ್ಲ: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಅನೇಕ ವ್ಯಕ್ತಿಗಳು ಒಬ್ಬಂಟಿಗರೇ ಒಂದು ಕೋಣೆಯಲ್ಲಿ ಬದುಕು ಸಾಗಿಸುತ್ತಿದ್ದರು. ಅಂಥವರಿಗೆ ಸ್ಥಳೀಯ ಕಡಿಮೆ ದರದ ಡಬ್ಬಾ ಹೊಟೇಲ್, ಪುಟ್ಟ ಖಾನಾವಳಿಯೇ ಗತಿಯಾಗಿತ್ತು.
ಸದ್ಯ ಸಂಪೂರ್ಣ ಲಾಕ್‍ಡೌನ್‍ನಿಂದಾಗಿ ಕೈಯಲ್ಲಿ ದುಡ್ಡಿದ್ದರೂ ತಿನ್ನಲು ಆಹಾರವಿಲ್ಲ. ಅಂಥವರನ್ನು ನಗರಸಭೆ ಗುರ್ತಿಸಿ ನಿರ್ಗತಿಕರಿಗೆ ಹಂಚುತ್ತಿರುವ ಆಹಾರದೊಂದಿಗೆ ಅಂಥವರಿಗೂ ವ್ಯವಸ್ಥೆ ಕಲ್ಪಿಸುತ್ತಿರುವದಕ್ಕೆ ಕೆಲ ಸಂಘಟನೆಗಳು ಪೌರಾಯುಕ್ತ ಶ್ರೀನಿವಾಸ ಜಾಧವರನ್ನು ಅಭಿನಂದಿಸಿದ್ದಾರೆ.

ಕೃಪೆ : ಚಂದೂ. ತುಂಗಳ.