ಬನಹಟ್ಟಿಯ ದೇವರಾಜ ರಾಠಿಯವರ ತೋಟದಲ್ಲಿನ ಸೇವಂತಿ ಬೆಳೆಯಲ್ಲಿ ಮುದುಡಿ ಹಾಳಾಗುತ್ತಿರುವದು.
ಮಹಾಂತೇಶ ಹೂಗಾರ ಹಾಗು ಮಲ್ಲಪ್ಪ ಹೂಗಾರ ತೋಟದಲ್ಲಿ ಮಲ್ಲಿಗೆ, ಚಂಡೂ ಹಾಗು ಗಲಾಟೆ ಹೂವುಗಳು ಬಿಸಿಲಿಗೆ ಒಣಗುತ್ತಿರುವುದು.
ಮಣ್ಣಲ್ಲಿ ಮಣ್ಣಾಗುತ್ತಿರುವ ಅನೇಕ ಜಾತಿ ಹೂಗಳು
* ಹೂವಿನ ವ್ಯಾಪಾರದ ಮೇಲೆ ಭಾರಿ ಪರಿಣಾಮ
ರಬಕವಿ ಬನಹಟ್ಟಿ,ಏ20: ನಮ್ ತೋಟದಾಗ್ ಹತ್ ರೀತಿ ಹೂಗಳನ್ನ ಬೆಳೆತೀವ್ರಿ. ನಮ್ ಹೂವಿನ ಮಾರಾಟ ಮತ್ತು ವ್ಯಾಪಾರ ಮ್ಯಾಲರಿ. ಒಂದ್ ತಿಂಗಳಾತ್ರಿ ಒಂದ್ ಹೂ ಮಾರಿಲ್ಲ. ಜೀವನ ನಿರ್ವಹಣೆಯೇ ಭಾಲ್ ದೊಡ್ಡ ಸಮಸ್ಯೆಯಾಗೈತ್ರೀ... ಎಂದು ಹೂವಿನ ವ್ಯಾಪಾರಿ ಮಹಾಂತೇಶ ಹೂಗಾರ ತಮ್ಮ ಅಳಲನ್ನು ಪತ್ರಿಕೆಯ ಮುಂದೆ ತೋಡಿಕೊಂಡರು.
ಹೌದು ಅವರ ತೋಟದಲ್ಲಿ ಕೆಲವು ಹೂಗಳ ಬೇಡಿಕೆಯಿಲ್ಲದ ಕಾರಣ ಬಿಸಿಲಿಗೆ ಅಲ್ಲಿಯೇ ಬಾಡುತ್ತಿವೆ. ಕೆಲ ಹರಿದು ಹೂಗಳು ತೋಟದಲ್ಲಿಯೇ ನಾಶವಾಗುತ್ತಿವೆ. ಅಪಾರ ಪ್ರಮಾಣದಲ್ಲಿ ಬೆಳೆದ ಗುಲಾಬಿ ಹೂಗಳನ್ನು ಹರಿಯದೆ ಇರುವುದರಿಂದ ಅವು ಬಿಸಿಲಿಗೆ ಬಾಡುತ್ತಿವೆ.
ಹೂವಿನ ವ್ಯಾಪಾರವನ್ನೆ ನಂಬಿಕೊಂಡಿರುವ ಅನೇಕ ಕುಟುಂಬಗಳು ಈಗ ಬಹಳಷ್ಟು ಸಮಸ್ಯೆಯನ್ನು ಎದುರಿಸುತ್ತಿವೆ. ಸುತ್ತ ಮುತ್ತಲಿನ ಎಲ್ಲ ದೇವಸ್ಥಾನಗಳ ಪೂಜೆಗಳು ಸ್ಥಗಿತಗೊಂಡಿವೆ. ಯಾವುದೇ ಧಾರ್ಮಿಕ ಮತ್ತು ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಈ ಭಾಗದಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಹಳಷ್ಟು ಮದುವೆ ಸಮಾರಂಭಗಳು ಇದ್ದವು. ಈಗ ಎಲ್ಲವೂ ರದ್ದಾಗಿವೆ. ಇಂಥ ಕಾರ್ಯಕ್ರಮಗಳನ್ನೆ ಅವರು ಅವಲಂಬಿಸಿರುವುದರಿಂದ ಹೂ ವ್ಯಪಾರಿಗಳು ಆರ್ಥಿಕವಾಗಿ ಹಾನಿಯನ್ನು ಅನುಭವಿಸುತ್ತಿದ್ದಾರೆ. ಜೀವನ ನಿರ್ವಹಣೆ ಕೂಡಾ ಕಷ್ಟವಾಗುತ್ತಿದೆ.
ಮಣ್ಣಲ್ಲಿ ಮಣ್ಣಾದ ಗಲಾಟೆ: ಸುಮಾರು ಎರಡು ಎಕರೆ ಪ್ರದೇಶದಲ್ಲಿ ಗಲಾಟೆ ಹಾಗು ಚಂಡೂ ಹೂಗಳನ್ನು ಬೆಳೆದ ಮಲ್ಲಪ್ಪ ಹೂಗಾರ ಎಂಬುವರು ಸಂಪೂರ್ಣ ಹಾನಿಗೊಳಗಾಗುವಲ್ಲಿ ಕಾರಣವಾಗಿ, ಅರಳಿದ ಹೂಗಳು ಮಣ್ಣಲ್ಲಿಯೇ ಮುದುಡಿ ಮಣ್ಣಾಗುತ್ತಿವೆ.
ಮಹಾರಾಷ್ಟ್ರ ಕೇಂದ್ರ ಬಿಂದು: ಪ್ರಗತಿಪರ ಕೃಷಿಕರನ್ನೂ ಬೆಂಬಿಡದ ಕೊರೊನಾ ನಿತ್ಯ ಸದಾ ಸಾಧನೆಯಲ್ಲಿಯೇ ರೈತರಿಗೆ ಮಾದರಿಯಾಗಿದ್ದ ದೇವರಾಜ ರಾಠಿಯವರು ಬೆಳೆದಿರುವ ಸೇವಂತಿ ಹೂ ಭೂಮಿಯಲ್ಲಿಯೇ ಬಾಡುತ್ತ ನಶಿಸಿ ಹೋಗುವ ಪ್ರಸಂಗವಾಗಿದೆ.
ಮಹಾರಾಷ್ಟ್ರದ ಮುಂಬಯಿ, ಕರಾಡ, ಪೂಣಾ, ಸಾತಾರ ಹೀಗೆ ಹಲವಾರು ಕೇಂದ್ರಗಳು ಹೂಗಳ ಮಾರಾಟದ ಕೇಂದ್ರ ಬಿಂದುವಾಗಿತ್ತು. ಇದೀಗ ಸಾಗಣೆ ಹಾಗು ಖರೀದಿದಾರರು ಇಲ್ಲದ ಕಾರಣ ಹಾನಿ ಅನುಭವಿಸುವಲ್ಲಿ ಕಾರಣವಾಗಿದೆ.
ಒಟ್ಟಿನಲ್ಲಿ ಕೊರೊನಾ ವೈರಸ್ ಪ್ರತಿಯೊಂದು ಕ್ಷೇತ್ರದ ಉದ್ಯೋಗದ ಮೇಲೆ ತನ್ನ ಪ್ರಭಾವ ಬೀರಿರುವುದರಿಂದ ಹೂ ವ್ಯಾಪಾರಿಗಳು ಕೂಡಾ ಅತಂತ್ರರಾಗಿದ್ದಾರೆ.
ಕೃಪೆ : ಚಂದೂ. ತುಂಗಳ. ಬನಹಟ್ಟಿ

Social Plugin