ತೇರದಾಳ : ದೇಶಾದ್ಯಂತ ಲಾಕ್‍ಡೌನ್ ಆದಾಗಿನಿಂದ ರೈತರು ಬೆಳೆದ ಬೆಳೆಗಳು ತಮ್ಮ ತೋಟದಲ್ಲಿಯೇ ಕೊಳೆಯುತ್ತಿರುವುದರಿಂದ ರೈತ ಕಂಗಾಲಾಗಿದ್ದರು. ಅದನ್ನು ತಿಳಿದು ಶಾಸಕ ಸಿದ್ದು ಸವದಿಯವರು ರೈತರ ಬಾಳೆ ಹಣ್ಣನ್ನು ಯೋಗ್ಯ ದರದಲ್ಲಿ ಖರೀದಿಸಿ ಬಡವರಿಗೆ ಉಚಿತವಾಗಿ ಪಟ್ಟಣದ ಅಂಬೇಡ್ಕರ ಗಲ್ಲಿ ಹಾಗೂ ಕಲೂತಿ ನಗರದ ನಿವಾಸಿಗಳಿಗೆ ಹಂಚಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈತರಿಂದ ಹಣ್ಣು ಹಾಗೂ ತರಕಾರಿಗಳನ್ನು ಖರೀದಿಸಿ ಬಡವರಿಗೆ ಉಚಿತವಾಗಿ ಹಂಚಲಾಗುತ್ತಿದೆ. ಇಂದು ಬಾಳೆ ಹಣ್ಣು ಹಾಗೂ ಮಾಸ್ಕ್‍ನ್ನು ಹಂಚಿದ್ದೇವೆ. ನಾಳೆ ರೈತರಿಂದ ಕೋಬೀಜನ್ನು ಖರೀದಿಸಿ ಅದನ್ನು ಸಹ ಉಚಿತವಾಗಿ ಹಂಚಲಾಗುವುದು. ಇದರಿಂದ ರೈತರಿಗೂ ಹಾಗೂ ಬಡ ಜನರಿಗೂ ಅನುಕೂಲವಾಗಲಿ ಎನ್ನುವ ಹಿತ ದೃಷ್ಟಿಯಿಂದ ಹಂಚಲಾಗುತ್ತಿದೆ ಎಂದರು.
ಉಜ್ವಲ ಯೋಜನೆಯಲ್ಲಿ ಮೂರು ಸಿಲಿಂಡರ್‍ಗಳನ್ನು (ಗ್ಯಾಸ್) ಉಚಿತವಾಗಿ ನೀಡಲಾಗುತ್ತಿದ್ದು ಈಗಾಗಲೇ ಫಲಾನುಭವಿಗಳ ಬ್ಯಾಂಕ ಖಾತೆಗೆ ಮೂರು ಸಿಲಿಂಡರಗಳ ಹಣ ಜಮಾ ಆಗಿದೆ. ನಮ್ಮ ಮತಕ್ಷೇತ್ರದಲ್ಲಿ ಜನ್‍ಧನ್ ಖಾತೆ ಹೊಂದಿದ 70ಸಾವಿರ ಜನರಿದ್ದಾರೆ. ಅವರೆಲ್ಲರ ಖಾತೆಗೆ ಹಣ ಈಗಾಗಲೇ ಜಮಾ ಆಗಿದೆ. ಜನರಲ್ಲಿ ಒಂದು ತಪ್ಪು ಕಲ್ಪನೆ ಮೂಡಿದೆ ಜಮಾ ಆಗಿರುವ ಹಣವನ್ನು ಖಾತೆಯಿಂದ ತಗೆದುಕೊಳ್ಳದಿದ್ದರೆ ಹಣ ವಾಪಸ್ ಹೋಗುತ್ತದೆ ಎಂದು ಜನರಲ್ಲಿದೆ. ಆದರೆ ಇದಾವುದು ಹಣ ಮರಳಿ ಸರಕಾರಕ್ಕೆ ಹೋಗುವುದಿಲ್ಲ. ಅದು ನಿಮ್ಮ ಖಾತೆಯಲ್ಲಿಯೇ ಇರುವುದು ಅದನ್ನು ಯಾವಾಗ ಬೇಕಾದರೂ ತಗೆದುಕೊಳ್ಳಬಹುದು. ಸಂದ್ಯಾಸುರಕ್ಷಾ, ವಿಧವಾ ವೇತನ, ಅಂಗವಿಕಲ ಮಾಶಾಸನ ಬಹಳ ದಿನಗಳಿಂದ ಸರಕಾರ ಮಟ್ಟದಲ್ಲಿ ಉಳಿದುಕೊಂಡಿದ್ದು ಅದನ್ನು ಸಹ ಈ ವಾರದಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಸರಕಾರ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದರು.
ಈ ಸಂದರ್ಭದಲ್ಲಿ ಪ್ರಭು ಬಾಗಿ, ರಾಮಣ್ಣ ಹಿಡಕಲ್, ವಿನಾಯಕ ಬಂಕಾಪೂರ, ರಮೇಶ ಧರೆನ್ನವರ, ನಾಗಪ್ಪ ದೊಡಮನಿ, ಶೀತಲ ಬೋಳಗೊಂಡ, ಕೇದಾರಿ ಪಾಟೀಲ, ಕಾಶೀನಾಥ ರಾಠೋಡ, ಮಹಾದೇವ ಯಂಡಿಗೇರಿ, ಮುರಗೇಶ ಮಿರ್ಜಿ ಸೇರಿದಂತೆ ಇತರರು ಇದ್ದರು.

Social Plugin