ನಟ  ಇರ್ಫಾನ್ ಖಾನ್ ನಿಧನದ ಸುದ್ದಿ ಹೇಳುತ್ತ ನ್ಯೂಸ್ ನೇಷನ್ ಚಾನೆಲ್ ನ ಆ್ಯಂಕರ್ ಒಬ್ಬ ಬಿಕ್ಕಿ ಬಿಕ್ಕಿ ಅಳತೊಡಗಿದ... ಮಾತೇ ಹೊರಡಲಿಲ್ಲ... ವೀಕ್ಷಕರ ಕ್ಷಮೆ ಕೇಳಿ ಕೆಲವು ಸೆಕೆಂಡುಗಳ ಕಾಲ ಸುಧಾರಿಸಿಕೊಂಡು ಆ ಆ್ಯಂಕರ್ ಮತ್ತೆ ಮಾತು ಮುಂದುವರೆಸಿದ... ಇನ್ನೂ ಕೆಲ ಚಾನೆಲ್‌ಗಳ ಆ್ಯಂಕರ್ ಗಳ ಗಂಟಲು ಕೂಡ ಹೀಗೆಯೇ ಬಿಗಿಯುತ್ತಿದ್ದುದು ಸುಳ್ಳಲ್ಲ... 
ಇವು ಬಹಳ ಅಪರೂಪದ ಸಂದರ್ಭಗಳು.. ಅಪರೂಪದಲ್ಲೇ ಅಪರೂಪದ ಕಲಾವಿದ ಇರ್ಫಾನ್ ಖಾನ್.. ಕಣ್ಣಲ್ಲೇ ನಟನೆ ಇರ್ಫಾನ್ ವಿಶೇಷತೆ... ಈ ನಟನ ಮನೋಜ್ಞ ಅಭಿನಯಕ್ಕೆ ಮನಸೋಲದ ಸಿನೇಮಾ ಪ್ರಿಯರೇ ಇಲ್ಲವೇನೋ... ಹಿಂದಿ ಸಿನೇಮಾ ಜಗತ್ತಿನಲ್ಲಿ ಜನಪ್ರಿಯತೆಯ ಉತ್ತುಂಗ ತಲುಪಿದ್ದ ಇರ್ಫಾನ್, ಹಾಲಿವುಡ್ ಸಿನೇಮಾಗಳಲ್ಲೂ ಛಾಪು ಮೂಡಿಸಿದ ನಟ. 
ಈ ಯಶಸ್ಸು, ಜನಪ್ರಿಯತೆ ಖಂಡಿತ ಸುಲಭವಾಗಿ ದಕ್ಕಿದ್ದೇನಲ್ಲ... ಆರಂಭದ ದಿನಗಳಲ್ಲಿ ಹೆಜ್ಜೆ ಹೆಜ್ಜೆಗೂ ಮುಳ್ಳಿನ ಹಾದಿ... ಮಾರಣಾಂತಿಕ ರೋಗವೂ ಅವರ ವೇಗವನ್ನು ತಡೆಯಲು ಪ್ರಯತ್ನಿಸಿತು. ಆದರೆ, ಪ್ರಾಮಾಣಿಕತೆ, ಬದ್ಧತೆ ಮತ್ತು ಛಲದಂಕ ಮಲ್ಲನಂತೆ ಮಾಡಿದ ನಿರಂತರ ಪ್ರಯತ್ನದ ಫಲವಾಗಿ ಯಶಸ್ಸು ಇರ್ಫಾನ್ ಖಾನ್ ಗೆ ತಲೆಬಾಗಲೇ ಬೇಕಾಯಿತು...
ಇಂಥ ಅಪರೂಪದ ನಟನ ಅಕಾಲಿಕ ಸಾವಿನ ಸುದ್ದಿ ನಿಜಕ್ಕೂ ಆಘಾತಕಾರಿ... ಕೇವಲ ನಟನೆ ಮಾತ್ರವಲ್ಲ, ಇರ್ಫಾನ್ ಖಾನ್ ಅವರ ಮಾನವೀಯ ಗುಣಗಳನ್ನು ನೆನಪಿಸಿಕೊಂಡು ಬಾಲಿವುಡ್ ನಟರು ಮತ್ತು ಸಮಾಜದ ಎಲ್ಲಾ ರಂಗಗಳಲ್ಲಿನ ಅವರ ಅಭಿಮಾನಿಗಳು ಮನ ಮಿಡಿಯುತ್ತಿದ್ದಾರೆ...
ಹೋಗಿ ಬನ್ನಿ ಇರ್ಫಾನ್... ಹಿಂದಿ ಸಿನೇಮಾ ಜಗತ್ತು ನಿಮ್ಮನ್ನು ಮರೆಯಲಾರದು...