ಗಂಧದ್ವಾರಾಂ ದುರಾಧರ್ಷಾಂ . . .  
ಬೇಸಿಗೆಯಲ್ಲಿ ಬಿರು ಬಿಸಿಲಿನ ಶಾಖದಿಂದ ಭೂಮಿಯು ಒಣಗಿ, ಮಣ್ಣು ಸಾಮಾನ್ಯವಾಗಿ ಧೂಳಿನ ಕಣವಾಗಿ ಹಾರುತ್ತಾ ಇರುವುದನ್ನು ಕಾಣುತ್ತೇವೆ. ಆದರೆ ಎಲ್ಲಿಯಾದರೂ ಒಂದು ಮಳೆ ಬಿದ್ದರೆ ಅಥವಾ ಮುಂಗಾರಿನ ಆರಂಭದ ಮಳೆ ಭೂಮಿಗೆ ಬಿದ್ದಾಗ ಒಂದು ರೀತಿಯ ಹಿತದ ವಾತಾವರಣದ ಜೊತೆಗೆ, ಮಣ್ಣಿನ ವಾಸನೆ ಒಂದು ರೀತಿಯಲ್ಲಿ ಕುಷಿಕೊಡುತ್ತದೆ. ನೀರು ಬಿದ್ದ ಮಣ್ಣು ಸಹಜವಾಗಿ ತನ್ನ ವಾಸನೆಯನ್ನು ಹೊರಸೂಸುತ್ತದೆ. ದೂರದಲ್ಲಿ ಎಲ್ಲಿಯೇ ಮಳೆಯಾದರೂ ಆ ಹಿತಕರ ವಾತಾವರಣ ನಿಸರ್ಗದಲ್ಲಿ ಏರ್ಪಡುತ್ತದೆ. ಅದನ್ನೇ ಶ್ರೀಸೂಕ್ತದಲ್ಲಿ ಭೂದೇವಿಯನ್ನು ಕೊಂಡಾಡುತ್ತಾ ಹೇಳಲಾಗಿದೆ. 

ಗಂಧದ್ವಾರಾಂ ದುರಾಧರ್ಷಾಂ ನಿತ್ಯಪುಷ್ಟಾಂ ಕರೀಷಿಣೀಂ |
ಈಶ್ವರೀಗ್ಂ ಸರ್ವ ಭೂತಾನಾಂ ತಾಮಿ ಹೋಪಹ್ವಯೇ ಶ್ರಿಯಮ್ || ಯಜುರ್ವೇದದ ೧೦ನೇ ಪ್ರಪಾಠಕದ ಒಂದನೇ ಅನುವಾಕದಲ್ಲಿ ಬರುವ ಈ ಮಂತ್ರದ ಅರ್ಥವನ್ನು ಹೇಳುತ್ತಾ ಗಂಧ ಎನ್ನುವುದು ಆಘ್ರಾಣವನ್ನು ಸೂಚಿಸುವ ಪದವಾಗಿದ್ದು, ಗಂಧವತೀ ಪೃಥಿವೀ ಇತಿ ತಾರ್ಕಿಕಾ ಲಕ್ಷಣಮಾಹುಃ ಎನ್ನುತ್ತಾ ಈ ಭೂಮಿ ಎನ್ನುವುದು ಪರಿಮಳ ಯುಕ್ತವಾದದ್ದು ಇಲ್ಲಿನ ಈ ನೆಲದ ಮಣ್ಣಿನ ವಾಸನೆ ಆಹ್ಲಾದಕರವಾಗಿರುತ್ತದೆ. ಭೂಮಿಯ ಗುರುತಿಸುವಿಕೆಯೇ ಆಘ್ರಾಣದಿಂದ ಎನ್ನುವುದು ಗಂಧದ್ವಾರ ಎನ್ನುವುದಕ್ಕೆ ಅರ್ಥ ಎನ್ನಲಾಗಿದೆ. ದುರಾಧರ್ಷಾಂ ವಿರೋಧಿಗಳ ಆಕ್ರಮಣವನ್ನು ಅಥವಾ ಅಸುರರೇ ಮೊದಲಾದವರ ಆಕ್ರಮಣವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗದ, ಯಾವಾಗಲೂ ಬೀಜ ಮತ್ತು ದವಸ ಧಾನ್ಯಗಳಿಂದ ತುಂಬಿರುವ ಮತ್ತು ಸೌಗಂಧಭರಿತವಾದ ಈ ಭೂಮಿಯ ಭಾರವನ್ನು ಹೊರಲು ಸಾಧ್ಯವಿರದ. ಯಾವಾಗಲೂ ಈ ಭೂಮಿಯು ಬೀಜ ಮತ್ತು ಧಾನ್ಯಗಳಿಂದ ಯಾವಾಗಲೂ ತುಂಬಿಕೊಂಡಿರುವ ಎನ್ನುವುದನ್ನು ಇಲ್ಲಿ ನಿತ್ಯಪುಷ್ಟಾಂ ಎನ್ನಲಾಗಿದೆ. ಹಾಗೆಯೇ, ಗೋವುಗಳಿಂದ, ಗೋಮಯದಿಂದ ಹಾಗೂ ಗೋವಿನ ಜಾತಿಗೆ ಸೇರಿದ ಇತರ ಪಶುಗಳಿಂದ ಕೂಡಿರುವ ಎನ್ನುವುದನ್ನೇ ಇಲ್ಲಿ ಕರೀಷಿಣೀಂ ಎನ್ನಲಾಗಿದೆ. ದೇವ, ತಿರ್ಯಕ್, ಮನುಷ್ಯ ರೂಪಗಳಿಂದ ಕೂಡಿರುವಂತವುಗಳೂ ಹಾಗೂ ಮತ್ತು ಪ್ರಾಣಿ ದೇಹ ಹೊಂದಿರುವ ಎನ್ನುವುದನ್ನು ಸರ್ವಭೂತಾನಾಂ ಎನ್ನಲಾಗಿದೆ. ಇವುಗಳೆಲ್ಲದರ ಜನನಕ್ಕೆ ಕಾರಣೀ ಭೂತವಾದದ್ದನ್ನೆ ಅಂದರೆ ನಿಯಂತೃವನ್ನು ಈಶ್ವರೀಗ್ಂ ಎನ್ನಲಾಗಿರುವುದು. ಇವುಗಳೆಲ್ಲವೂ ಸಹ ಶ್ರೇಯಸನ್ನು ಹೊಂದಲಿ. ಇವುಗಳಿಗೆ ಒಳ್ಳೆಯದಾಗಲಿ ಎನ್ನುವುದನ್ನು ಭಾಷ್ಯಕಾರರು ತಿಳಿಸಿಕೊಟ್ಟಿರುವರು.

ಆನಂದ ಮತ್ತು ಕರ್ದಮರೇ ಮೊದಲಾದ ಋಷಿಗಳ ಈ ಸೂಕ್ತದಲ್ಲಿ ಅಗ್ನಿಯನ್ನು ಕುರಿತಾಗಿ ಪ್ರಾರ್ಥಿಸುವಾಗ ಹೇ ಅಗ್ನಿದೇವನೇ ಭೂಮಿಯ ಗುಣವೇ ಗಂಧ. ಅಂದರೆ ಪೃಥ್ವೀ ರೂಪಧಾರಿಯಾದ ಭೂಮಿಯ ಮೂಲ ಗುಣ ಗಂಧ ಸ್ವರೂಪ. ಯಾರಿಂದಲೂ ಈ ಗಂಧಸ್ವರೂಪೀ ಭೂಮಿಯನ್ನು ಧರಿಸಲು ಅಂದರೆ ಹೊರಲು ಸಾಧ್ಯವಿಲ್ಲ. ಈ ಭೂದೇವಿಯ ಆಕಾರ ಮತ್ತು ಭಾರವೇ ಅದಕ್ಕೆ ಕಾರಣ. ಅದೆಷ್ಟು ಪಶು ಸಂಪತ್ತನಿಂದ ತುಂಬಿಕೊಂಡು ಪುಷ್ಟಿ ಪ್ರದಳಾಗಿರುವವಳು. ಈ ಬ್ರಹ್ಮಾಂಡದ ಎಲ್ಲಾ ಪ್ರಾಣಿಗಳಿಗೂ ನಿಯಾಮಕಳು, ಆಕೆಯೇ ಪ್ರಭುತ್ವ ಹೊಂದಿರುವವಳು. ಪೃಥ್ವೀರೂಪದಿಂದಿರುವವಳಾದ ಶ್ರೀ ದೇವತೆಯನ್ನು ನನ್ನ ಬಳಿ ಬರುವಂತೆ ಪ್ರಾರ್ಥಿಸುವೆನು ಎನ್ನುವುದು ಈ ಮಂತ್ರದ ಅರ್ಥ ಋಗ್ವೇದದಲ್ಲಿ ಹೇಳಲ್ಪಟ್ಟಿರುವುದು.

ಆಕಾಶದ ಗುರುತಿಸುವಿಕೆ ಶಬ್ದದಿಂದ ಅಂದರೆ ಶಬ್ದವೇ ಆಕಾಶದ ಗುಣ, ಇನ್ನು ಗಾಳಿ ಇರುವುದು ನಿಜ, ಆದರೆ ಅದು ಕಣ್ಣಿಗೆ ಕಾಣಿಸದೇ ಇದ್ದರೂ ಸ್ಪರ್ಷವು ಅನುಭವಕ್ಕೆ ಬರುತ್ತದೆ. ಆದುದರಿಂದ ವಾಯುವಿನ ಗುಣ ಸ್ಪರ್ಷ. ಇನ್ನು ಕಣ್ನಿಗೆ ಕಾಣುವುದು ಒಂದು ರೂಪವನ್ನು ಹೊಂದಿರುತ್ತದೆ. ಅಂತಹ ರೂಪಕ್ಕೊಂದು ತೇಜಸ್ಸು ಇರುತ್ತದೆ. ಆದುದರಿಂದ ತೇಜಸ್ಸಿನ ಗುಣ ರೂಪ ಎನ್ನಲಾಗುತ್ತದೆ. ಇನ್ನು ನೀರಿನ ಗುಣ ರಸ ಎಂದು ಹೇಳಲಾಗಿದೆ. ಹಾಗೆಯೇ ಭೂಮಿಯ ಗುಣ ಗಂಧವೇ ಮುಖ್ಯ ಗುಣ ಎನ್ನಲಾಗುತ್ತದೆ. ಅಂದರೆ ಪಂಚಭೂತಗಳಿಗಿರುವ ಗುಣಧರ್ಮ ಹೇಳಲಾಗಿದೆ. ಆದುದರಿಂದ ಗಂಧವತೀ ಪೃಥಿವೀ ಎನ್ನುವುದು ಭೂಮಿಗೆ. 

ಅಂದರೆ ಇಲ್ಲಿ ಈ ಭೂಮಿಯ ವೈಶಿಷ್ಟ್ಯತೆಯನ್ನು ಹೇಳುತ್ತಾ ಇಲ್ಲಿನ ಮಣ್ಣು ಗಂಧದಂತೆ ಇದು ನಿತ್ಯ ಸಮೃದ್ಧಿದಾಯಕ. ಇಂತಹ ಮಣ್ಣು ನಮಗೆ ಆಪ್ಯಾಯಮಾನ ಮತ್ತು ಈ ಮಣ್ಣಿನಿಂದಲೇ ನಮ್ಮ ಜೀವನ ಮತ್ತು ಮರಣ. ಅದನ್ನೇ ದಾಸರು ’ಮಣ್ಣಿಂದ ಕಾಯಾ ಮಣ್ಣಿಂದ’ ಎಂದಿರುವುದು. ಇನ್ನು ಈ ಭೂಮಿಯಲ್ಲಿ ಇಲ್ಲದಿರುವುದು ಏನು ? ಅನೇಕ ಪ್ರಾಣಿ ಪಕ್ಷಿಗಳಿಗೆ ಜೀವ ಜಲಚರಗಳಿಗೆ ಆಶ್ರಯತಾಣ ಆಗಿರುವುದರಿಂದಲೇ ಇದೊಂದ ಸಂಪತ್ತಿನ ಆಗರ ಎನ್ನಿಸಿ ಬಿಟ್ಟಿದೆ. ಇಂತಹ ಇನ್ನೊಂದನ್ನು ಸಾಮಾನ್ಯರಾದ ಯಾರಿಂದಲೂ ರಚಿಸಲು ಅಥವ ಹೊರುವುದು ಸಾಧ್ಯವಿರದ ಮಾತು. ಇದು ನಮಗೆಲ್ಲಾ ಪ್ರಭುವಿನ ಸ್ಥಾನದಲ್ಲಿದ್ದು ನಿಯಾಮಕವಾಗಿ ನಮ್ಮನ್ನು ಶ್ರೇಯಸ್ಸಿನತ್ತ ಕೊಂಡೊಯ್ಯಲಿ ಎಂದು ಅಗ್ನಿಯನ್ನು ಪ್ರ್ರಾರ್ಥಿಸುವುದು. ಕಂಡುಬರುತ್ತದೆ.

#ಗಂಧವತೀ_ಪೃಥಿವೀ