ತೇರದಾಳ : ಪಟ್ಟಣದ ಕೂಲಿ ಕಾರ್ಮಿಕರಾದ ನಾಗಪ್ಪ ದೊಡಮನಿ, ಚಂದ್ರಕಾಂತ ದೊಡಮನಿ, ಕುಮಾರ ಘಟ್ಟೆನ್ನವರ ಇವರು ದಿನ ನಿತ್ಯ ಕೂಲಿ ಕೆಲಸ ಮಾಡಿ ಕೂಡಿಟ್ಟ ಹಣದಲ್ಲಿ ಸ್ವಲ್ಪ ಭಾಗವನ್ನು ಕೊರೊನಾ -19 ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುವಂತೆ ಭಾಜಪ ನಗರ ಘಟಕ ಅಧ್ಯಕ್ಷ ಪ್ರಭು ಬಾಗಿ ಇವರ ಮೂಲಕ ಕೊಟ್ಟು ಇತರರಿಗೆ ಮಾದರಿಯಾಗಿದ್ದಾರೆ.
  ಕೊರೊನಾ ವೈರಸ್ ದೇಶದಲ್ಲಿ ತನ್ನ ಕಬಂದ ಬಾಹುವನ್ನು ಚಾಚುವ ಮೂಲಕ ದೇಶದಲ್ಲಿ ಸಾಕಷ್ಟು ನಷ್ಟವನ್ನುಂಟು ಮಾಡಿದೆ. ಇದರಿಂದ ಸರಕಾರಿ ನೌಕರರು, ಶಾಸಕ ಸಚಿವರು ಕೊರೊನಾ-19 ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ದಿನದ ವೇತನ, ವೇತನದ ಶೇ.30ರಷ್ಟು ವೇತನವನ್ನು ಹೀಗೆ ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತಿರುವುದನ್ನು ನೋಡಿ ಈ ಕೂಲಿ ಕಾರ್ಮಿಕರು ಸಹ ತಮ್ಮ ವೇತನದಲ್ಲಿ ಕೂಡಿಟ್ಟ ಹಣದಲಿ ಸ್ವಲ್ಪ ಭಾಗವನ್ನು ಕೊಟ್ಟು ಇತರರಿಗೆ ಮಾದರಿಯಾಗಿದ್ದಾರೆ.
   ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಉಳ್ಳವರು ಯಾವುದೋ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಸರಕಾರ ಮೂರು ತಿಂಗಳ ಪಡಿತರ ಧಾನ್ಯವನ್ನು ಮುಂಗಡವಾಗಿ ಹಂಚುತ್ತಿದೆ. ಜನ್ ಧನ್ ಖಾತೆಗಳಿಗೆ ಸರಕಾರದಿಂದ ಸಹಾಯ ಧನವನ್ನು ಕೊಡುತ್ತಿದೆ. ಎಲ್ಲರೂ ಸರಕಾರದಿಂದ ಸಹಾಯ ಪಡೆದುಕೊಳ್ಳುವವರೆ ಇದ್ದಾರೆ. ನಾವು ಬಡವರಿದ್ದೇವೆ ಆದರೂ ನಮ್ಮ ಕೈಲಾದಷ್ಟು ಸಹಾಯ ಮಾಡುವ ದಯಾಳು ಗುಣ ಪಟ್ಟಣದ ಕೂಲಿ ಕಾರ್ಮಿಕರಲ್ಲಿದೆ ಎಂಬುವುದನ್ನು ತೋರಿಸಿದ್ದಾರೆ. ನಾಗಪ್ಪ ದೊಡಮನಿ 3500ರೂ.ಗಳನ್ನು, ಚಂದ್ರಕಾಂತ ದೊಡಮನಿ 1000ರೂ. ಗಳನ್ನು, ಕುಮಾರ ಘಟ್ಟೆನ್ನವರ 500ರೂ.ಗಳನ್ನು ಪಟ್ಟಣದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಪ್ರತಿಮೆಯ ಮುಂಬಾಗದಲ್ಲಿ ಕೊಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಭಾಜಪ ನಗರ ಘಟಕದ ಅಧ್ಯಕ್ಷ ಪ್ರಭು ಬಾಗಿ ಇದ್ದರು.