-ಬನಹಟ್ಟಿ ಗಾಂಧಿ ವೃತ್ತದ ಬಳಿ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯಲ್ಲಿ ಬೈಕ್ ಸವಾರರನ್ನು ತಡೆದು ಪರಿಶೀಲಿಸುತ್ತಿರುವ ಪೊಲೀಸರು.

ರಸ್ತೆಗಿಳಿದ ಬೈಕ್‍ಗಳು ಪೊಲೀಸ್ ವಶಕ್ಕೆ
*ಪರೀಕ್ಷೆಗೆ ಕಳಿಸಲಾದ 10 ಜನರು ನೆಗೆಟಿವ್
ರಬಕವಿ-ಬನಹಟ್ಟಿ,ಏ30: ಗುರುವಾರದಂದು ರಬಕವಿ-ಬನಹಟ್ಟಿ, ಮಹಾಲಿಂಗಪೂರ ಹಾಗು ತೇರದಾಳ ಸೇರಿದಂತೆ ಅನೇಕ ಗ್ರಾಮಗಳ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆಯಿತು.

ವಿನಾಕಾರಣ ರಸ್ತೆಗಿಳಿದು ಲಾಕ್‍ಡೌನ್ ನಿಯಮ ಮುರಿಯುತ್ತಿದ್ದವರಿಗೆ ಶಾಕ್ ನೀಡಿದ ತಾಲೂಕಾಡಳಿತ ಹಾಗು ಪೊಲೀಸ್ ಇಲಾಖೆ ಜನರು ಬೀದಿಗಿಳಿಯದಂತೆ ಎಚ್ಚರಿಕೆ ವಹಿಸಿದ್ದರು.
ನೆಗೆಟಿವ್: ಜಮಖಂಡಿಯಲ್ಲಿ ಒಂದೇ ಕುಟುಂಬದ ತಾಯಿ, ಮಗಳಿಗೆ ಕೊರೊನಾ ಪೊಸಿಟಿವ್ ಬಂದಿದ್ದ ಕಾರಣ ಮಗಳ ಗಂಡ ಸೇರಿದಂತೆ 10 ಜನರ ಗಂಟಲು ದ್ರವ ಪರೀಕ್ಷೆಗೆಂದು ಕಳಿಸಲಾಗಿತ್ತು. ಎಲ್ಲರದ್ದೂ ನೆಗೆಟಿವ್ ಬಂದಿದ್ದಕ್ಕೆ ಯಾವದೇ ಪ್ರಕರಣ ಕಾಣಿಸಿಕೊಂಡಿಲ್ಲ ಆದ್ದರಿಂದ ತಾಲೂಕಿನಾದ್ಯಂತ ಜನತೆ ನಿಟ್ಟುಸಿರು ಬಿಡುವಲ್ಲಿ ಕಾರಣವಾಗಿದೆ.
ಇದಕ್ಕೆ ಸಂಬಂಧ ವೆಂಕಟೇಶ ನಿಂಗಸಾನಿ ಎಂಬುವರ ಪೆಟ್ರೋಲ್ ಬಂಕ್‍ನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಅವರಲ್ಲಿ ಕೆಲಸಕ್ಕಿದ್ದ ಏಳೆಂಟು ಜನರನ್ನು ಹೋಂ ಕ್ವಾರೆಂಟೈನ್ ಮಾಡಲಾಗಿದೆ. ಸದ್ಯ ಇವರ ಗಂಟಲು ದ್ರವ ಪರೀಕ್ಷೆಯೂ ಶನಿವಾರದಂದು ಬರಲಿದ್ದು, ಅಲ್ಲಿಯವರೆಗೆ ಇವರ ಮೇಲೆ ಆರೋಗ್ಯ ಇಲಾಖೆ, ತಾಲೂಕಾಡಳಿತ ಹಾಗು ಪೊಲೀಸರು ನಿಗಾ ವಹಿಸಿದ್ದಾರೆ.
ಬೈಕ್‍ಗಳ ತಪಾಸಣೆ: ರಬಕವಿ-ಬನಹಟ್ಟಿ ನಗರಾದ್ಯಂತ ಬೈಕ್‍ಗಳು ಸಂಚರಿಸುತ್ತಿದ್ದ ಸಂದರ್ಭ ಬೈಕ್‍ಗಳ ತಪಾಸಣೆಯನ್ನು ಪೊಲೀಸರು ನಡೆಸಿದರು. ವಿನಾಕಾರಣ ಸಂಚರಿಸುತ್ತದ್ದ ಬೈಕ್‍ಗಳನ್ನು ವಶಕ್ಕೆ ಪಡೆದು ಅಗತ್ಯ ಹಾಗು ಸರ್ಕಾರಿ ಸಿಬ್ಬಂದಿಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.