ಉಮಾಶ್ರೀ ಹಠಾವೋ..! ತೇರದಾಳ ಬಚಾವೋ...!
ಕಾರ್ಯಕರ್ತರಿಂದ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಸ್ವಪಕ್ಷಿಯರೇ ತಿರುಗಿಬಿದ್ದಿದ್ದಾರೆ. ಮೇ.10 ರಂದು ರಾಜ್ಯ ವಿಧಾನಸಭಾ ಚುನಾವಣೆ ಜರುತ್ತಿದ್ದು, ಮತ್ತೊಮ್ಮೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಉಮಾಶ್ರೀಯವರು ಅಣಿಯಾಗುತ್ತಿದ್ದಂತೆಯೇ ಅವರ ವಿರುದ್ಧ ಕಾಂಗ್ರೆಸ್ ನಾಯಕರು ಹಾಗು ಕಾರ್ಯಕರ್ತರು ಹೋರಾಟ ಆರಂಭಿಸಿದ್ದಾರೆ. 
ಈ ಸಂಬಂಧ ಸೋಮವಾರ ಉಮಾಶ್ರೀ ಹಠಾವೋ, ತೇರದಾಳ ಬಚಾವೋ ಚಳುವಳಿ ಆರಂಭಿಸಿ, ಸ್ಥಳೀಯ ಆಕಾಂಕ್ಷಿಗಳಿಗೆ ಟಿಕೆಟ್ ನೀಡಲು ಪಕ್ಷದ ವರಿಷ್ಠರನ್ನು ಆಗ್ರಹಿಸಿದರು.
ಇಂದು ನಗರದ ಎಂ.ಎಂ. ಬಂಗ್ಲೆ ಮುಂಭಾಗದ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿ ಮಧ್ಯೆ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರುತೇರದಾಳ ಕ್ಷೇತ್ರದಲ್ಲಿ ಮಾಜಿ ಸಚಿವೆ ಉಮಾಶ್ರೀ ನಿಷ್ಠಾವಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ಪಕ್ಷ ಸೋಲುವುದು ಖಚಿತವೆಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.
ಸ್ಥಳೀಯ ಅಭ್ಯರ್ಥಿಗಳಾದ ಡಾ. ಪದ್ಮಜಿತ ನಾಡಗೌಡ ಪಾಟೀಲ, ಡಾ. ಎ.ಆರ್. ಬೆಳಗಲಿ, ಸಿದ್ದು ಕೊಣ್ಣೂರ, ಡಾ. ದಡ್ಡೇನವರ ಸೇರಿದಂತೆ ಹಲವಾರು ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡಿದ್ದಲ್ಲಿ ತೇರದಾಳ ಕ್ಷೇತ್ರದ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರು, ಸ್ವಾಭಿಮಾನಿ ಪಡೆ ನೂರಕ್ಕೆ ನೂರರಷ್ಟು ಗೆಲ್ಲಿಸಿಕೊಂಡು ಬರುತ್ತದೆಯೆಂದು ಅವರು ಭರವಸೆ ನೀಡಿದರು.
ಮಾಜಿ ಸಚಿವೆ ಉಮಾಶ್ರೀಯವರು ತಮ್ಮ ಕಾಲಾವಧಿಯಲ್ಲಿ ಕ್ಷೇತ್ರದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯದೆ ದೂರ ಉಳಿದಿದ್ದರು. ಅಲ್ಲದೆ ಕ್ಷೇತ್ರದ ಜನತೆಯ ವಿಶ್ವಾಸ ಗಳಿಸದ ಕಾರಣ ಕಳೆದ ಬಾರಿ ಚುನಾವಣೆಯಲ್ಲಿ ಸೋಲುಣಬೇಕಾಯಿತು.
 ಅಲ್ಲದೆ ಕಳೆದೈದು ವರ್ಷಗಳಿಂದ ಕ್ಷೇತ್ರದಲ್ಲಿ ಯಾವದೇ ಪಕ್ಷದ ಅಥವಾ ಜನಸಾಮಾನ್ಯರ ಮಧ್ಯೆ ಚಟುವಟಿಕೆಗಳನ್ನು ನಡೆಸದೆ ದೂರ ಉಳಿದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರವಿ ಬಾಡಗಿ ತಿಳಿಸಿದರು.
ಪರ್ಯಾಯ ವ್ಯವಸ್ಥೆಯಾಗಿ ಸ್ಥಳೀಯ ಮುಖಂಡರು ಪಕ್ಷದೊಂದಿಗೆ ಜನತೆಯ ವಿಶ್ವಾಸಕ್ಕೆ ಪಾತ್ರರಾಗಿದ್ದು, ಕಟ್ಟಕಡೆಯ ಮತದಾರನ ಬೇಡಿಕೆಯೂ ಸ್ಥಳೀಯ ಅಭ್ಯರ್ಥಿಗೆಂಬ ಕೂಗಿದೆ. ಇದೆಲ್ಲವನ್ನು ವರಿಷ್ಠರು ಗಮನಿಸಿ, ಮಾಜಿ ಸಚಿವೆ ಉಮಾಶ್ರೀಯವರಿಗೆ ಟಿಕೆಟ್ ನೀಡಿದ್ದೇಯಾದರೆ ಸೋಲು ಕಟ್ಟಿಟ್ಟ ಬುತ್ತಿ. ಕಾರಣ ಸ್ಥಳೀಯ ಅಭ್ಯರ್ಥಿಯ ಆಯ್ಕೆ ಅನಿವಾರ್ಯವೆಂದು ಬಾಡಗಿ ತಿಳಿಸಿದರು.