ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಜರುಗಿದ ಸ್ಥಳೀಯ ಮತ್ತು ನೇಕಾರ ಅಭ್ಯರ್ಥಿ ಕೂಗಿನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಹಿರಿಯ ಧುರೀಣ ಭೀಮಶಿ ಮಗದುಮ್ ಮಾತನಾಡಿದರು.
ಸವದಿ ಬದಲಿಸಿ ಸ್ಥಳೀಯರಿಗೆ ಟಿಕೆಟ್ ನೀಡಿದ್ದಲ್ಲಿ ಮಾತ್ರ ಗೆಲವು
ರಬಕವಿ-ಬನಹಟ್ಟಿ ಸ್ಥಳೀಯರ ಭಾವನೆಗಳಿಗೆ ಈ ಬಾರಿಯಾದರೂ ಬಿಜೆಪಿ ವರಿಷ್ಠರು ಮನ್ನಣೆ ನೀಡುತ್ತಾರೆಂಬ ಭರವಸೆ ಹುಸಿಯಾಗಿದ್ದು, ಸ್ಥಳೀಯರ ಸಹನೆಯ ಕಟ್ಟೆಯೊಡೆದಿದೆ. ಕಾರ್ಯಕರ್ತರು ಬೆಳೆದರೆ ಪ್ರತಿಸ್ಪರ್ಧಿಯಾದಾರೆಂದು ಪಕ್ಷದಿಂದ ಉಚ್ಛಾಟಿಸುವ, ಸುಳ್ಳು ಪ್ರಕರಣಗಳನ್ನು ಹಾಕಿ ಬೆದರಿಸುವ ಮೂಲಕ ಕ್ಷೇತ್ರದ ಅಭಿವೃದ್ದಿಗಿಂತ ತಮ್ಮ ಸ್ವಂತ ಲಾಭವನ್ನೇ ಮುಖ್ಯವಾಗಿಸಿಕೊಂಡು ಶಾಸಕ ಸಿದ್ದು ಸವದಿ ನಿರಂಕುಶ ಮತ್ತು ದುರಾಡಳಿತ ನಡೆಸುತ್ತಿದ್ದಾರೆ. ಕಾರಣ ಹೊಸದಾಗಿ ಸ್ಥಳೀಯ ಅಭ್ಯರ್ಥಿಗೆ ಮನ್ನಣೆ ನೀಡಬೇಕೆಂದು ಬಿಜೆಪಿ ಹಿರಿಯ ನಾಯಕ ಭೀಮಶಿ ಮಗದುಮ್ ಬಿಜೆಪಿ ವರಿಷ್ಠರನ್ನು ಆಗ್ರಹಿಸಿದರು.
ಆಕಾಂಕ್ಷಿಗಳಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ನೇಕಾರ ನಾಯಕ ರಾಜೇಂದ್ರ ಅಂಬಲಿ, ಕಿರಣಕುಮಾರ ದೇಸಾಯಿ, ಬಸವರಾಜ ಬಾಳಿಕಾಯಿ ಮಾತನಾಡಿ ನೇಕಾರ ಸಮುದಾಯ ಒಗ್ಗಟ್ಟಾಗಿ ಬಿಜೆಪಿ ವರಿಷ್ಠರ ಗಮನ ಸೆಳೆಯುವಂತೆ ಹೋರಾಟಕ್ಕಿಳಿಯಬೇಕಿದೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀವ್ರಗೊಳ್ಳಲಿದ್ದು, ವರಿಷ್ಠರು ಪ್ರಮಾದ ಸರಿಪಡಿಸಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದರು. ರಾಮಣ್ಣಾ ಹುಲಕುಂದ ಮತ್ತು ಶ್ರೀಶೈಲ ದಬಾಡಿ ಮಾತನಾಡಿ ಕ್ಷೇತ್ರದಲ್ಲೇ ದೊಡ್ಡ ಸಂಖ್ಯೆಯಲ್ಲಿರುವ ಹಟಗಾರ ಸಮಾಜದ ನೇಕಾರರಿಗೆ ಸತತ ಅನ್ಯಾಯವಾಗುತ್ತಿರುವದು ಬೇಸರವಾಗಿದೆ.
ವೇದಿಕೆಯಲ್ಲಿ ಹಳೇಹುಬ್ಬಳ್ಳಿಯ ವೀರಭಿಕ್ಷಾವರ್ತಿಮಠದ ಜಗದ್ಗುರು ಶಿವಶಂಕರಶ್ರೀ, ಆಳಂದದ ಚನ್ನಬಸವಶ್ರೀ, ಬನಹಟ್ಟಿಯ ಮಹಾಂತಶ್ರೀ ಸಾನಿಧ್ಯ ವಹಿಸಿದ್ದರು. ಬಸವರಾಜ ದಲಾಲ, ದೇವಲ ದೇಸಾಯಿ, ಮಹಾದೇವ ಮಾರಾಪುರ, ಬ್ರಿಜ್‍ಮೋಹನ ಢಾಗಾ, ರಾಜಶೇಖರ ಮಾಲಾಪುರ, ಅಜೀತ ಮಗದುಂ, ಶಶಿಕಾಂತ ಹುನ್ನೂರ, ಕುಮಾರ ಕದಮ, ರಾಜು ಬಾಣಕಾರ ಮುಂತಾದವರಿದ್ದರು. 
ಗೊಂದಲ: ಸಭೆ ನಡೆಸಲು ಮಾತ್ರ ಅನುಮತಿ ಇರುವ ಕಾರಣ ಮುಖ ್ಯರಸ್ತೆಗಳಲ್ಲಿ ಪಾದಯಾತ್ರೆ ಕೈಗೊಂಡಲ್ಲಿ ನೀತಿಸಂಹಿತೆ ನಿಯಮದ ಪ್ರಕಾರ ಪ್ರಕರಣ ದಾಖಲಿಸಬೇಕಾಗುತ್ತದೆಯೆಂದು ಸಿಪಿಐ ಪಾಟೀಲ ಶ್ರೀಗಳಿಗೆ ವಿವರಿಸುತ್ತಿದ್ದಂತೆ ಕೆರಳಿದ ಶ್ರೀಗಳು ತಮ್ಮನ್ನು ಬಂಧನ ಮಾಡಿದರೂ ತಾವು ಪಾದಯಾತ್ರೆ ನಡೆಸುವುದಾಗಿ ಉತ್ತರಿಸಿದರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮೂಲಕ ನೇಕಾರ ಅಭ್ಯರ್ಥಿ ಪರ ಘೋಷಣೆ ಕೂಗುತ್ತ ಜನತೆ ಪ್ರತಿಭಟನೆ ನಡೆಸಿದರು.