ನಾಮಪತ್ರ ಸಲ್ಲಿಸಿದ ಸಿದ್ದು ಸವದಿ
ರಬಕವಿ-ಬನಹಟ್ಟಿ,ಏ13: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಶಾಸಕ ಸಿದ್ದು ಸವದಿ ಮೊದಲ ದಿನವಾದ ಗುರುವಾರ ಮೊದಲಿಗರಾಗಿ ನಾಮಪತ್ರ ಸಲ್ಲಿಸಿದರು.
 ರಬಕವಿ-ಬನಹಟ್ಟಿಯ ತಹಶೀಲ್ದಾರ ಕಚೇರಿಯಲ್ಲಿ ಅವರು ನಾಮತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಾಲ್ಕನೇ ಬಾರಿ ವಿಧಾನಸೌಧ ಪ್ರವೇಶಿಸಲು ನಾಮಪತ್ರ ಸಲ್ಲಿಸುತ್ತಿದ್ದು ಅತ್ಯಧಿಕ ಬಹುಮತದಿಂದ ಗೆಲ್ಲುವ ವಿಶ್ವಾಸ ನನಗಿದೆ ಎಂದರು.
 ತೇರದಾಳ ಕ್ಷೇತ್ರದ ಜನತೆಗೂ ನನಗೂ ಅವಿನಾಭಾವ ಸಂಬಂಧವಿದೆ. ಈ ಸಂಬಂಧವನ್ನು ಕಡೆಗಣಿಸಲು ಯಾವ ಶಕ್ತಿಗೂ ಸಹ ಸಾಧ್ಯವಿಲ್ಲ. ನನಗೆ ಪ್ರತಿಸ್ಪರ್ಧೆ ಕಾಣುತ್ತಿಲ್ಲವೆಂದರು.
 ತೇರದಾಳ ಕ್ಷೇತ್ರದಿಂದ ಎರಡು ಬಾರಿ ಶಾಸಕನಾಗಿ 20 ವರ್ಷಗಳಿಂದ ಸ್ಥಳೀಯನಾಗಿಯೇ ಇದ್ದೇನೆ. ನೇಕಾರರ ಶಾಸಕನಾಗಿ ಕೆಲಸ ಮಾಡಿದ್ದೇನೆ. ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದ ಗೆಲುವು ನನ್ನದಾಗಿದೆ ಎಂದು ಸವದಿ ವಿಶ್ವಾಸ ವ್ಯಕ್ತಪಡಿಸಿದರು.
 ಕಳೆದ 5 ವರ್ಷಗಳ ಅವಧಿಯಲ್ಲಿ ಕ್ಷೇತ್ರಾದ್ಯಂತ ಹೆಚ್ಚಿನ ಕಾರ್ಯಗಳು ನಡೆದಿವೆ. ಇವೇ ನನಗೆ ಶ್ರೀರಕ್ಷೆಯಾಗಲಿದ್ದು, ಜನತೆ ನನಗೆ ಆಶೀರ್ವಾದ ಮಾಡಲಿದ್ದಾರೆಂದರು.
ಪ್ರಚಾರ ನಿರಾಯಾಸ: ಈಗಾಗಲೇ ಒಂದು ಹಂತದ ಪ್ರಚಾರವನ್ನು ನಾಮಪತ್ರ ಸಲ್ಲಿಸುವ ಮೊದಲೇ ನಡೆಸಿದ್ದೇನೆ. ಇಡೀ ಕ್ಷೇತ್ರದ ಎಲ್ಲ ಪಟ್ಟಣ ಹಾಗು ಗ್ರಾಮಗಳಿಗೆ ಸಂಚರಿಸಿದ್ದು, ಇನ್ನೇನಿದ್ದರೂ ಮನೆ-ಮನೆ ಪ್ರಚಾರ, ಸಮುದಾಯ ಹಾಗು ಗಲ್ಲಿಗಳಲ್ಲಿ ಸಭೆ ಮಾತ್ರವಿದ್ದು, ಮತ್ತೊಮ್ಮೆ ಬಿಜೆಪಿ ಕ್ಷೇತ್ರದಲ್ಲಿ ನಿಶ್ಚಿತವೆಂದರು.
 ಬಸವರಾಜ ಕೊಣ್ಣೂರ, ಪುಂಡಲೀಕ ಪಾಲಭಾಂವಿ, ರಮೇಶ ಎಕ್ಸಂಬಿ, ಬಸವಪ್ರಭು ಹಟ್ಟಿ ಇದ್ದರು.
ಸವದಿ ಸ್ಥಿರ-ಚರಾಸ್ಥಿ ವಿವರ:
 ತೇರದಾಳದಿಂದ ಸ್ಪರ್ಧಿಸಲಿರುವ ಸಿದ್ದು ಸವದಿ ಲೆಕ್ಕಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಚರಾಸ್ಥಿಯಲ್ಲಿ ಸವದಿ ಕುಟುಂಬದಿಂದ ಸಿದ್ದು ಸವದಿ-1.73 ಕೋಟಿ, ಪತ್ನಿ ಮೀನಾಕ್ಷಿ-28.67 ಲಕ್ಷ, ಮಕ್ಕಳಾದ ವಿಶ್ವನಾಥ-1.04 ಕೋಟಿ ಹಾಗು ವಿದ್ಯಾಧರರಿಂದ 63.67 ಲಕ್ಷ ಇದ್ದು ಸ್ಥಿರಾಸ್ಥಿಯು ಸಿದ್ದು ಸವದಿ ಹೆಸರಿನಲ್ಲಿ 2.47 ಕೋಟಿ ರೂ.ಗಳ 23 ಎಕರೆ ಭೂಮಿ, ಮೀನಾಕ್ಷಿ ಸವದಿ ಹೆಸರಿಗೆ 1.06 ಕೋಟಿ ರೂ.ಗಳ ಮನೆ, ಮಕ್ಕಳಾದ ವಿಶ್ವನಾಥ ಹೆಸರಿಗೆ 3.7 ಕೋಟಿ ರೂ.ಗಳ 22 ಎಕರೆ 09 ಗುಂಟೆ ಹಾಗು ವಿದ್ಯಾಧರರಿಂದ 40 ಎಕರೆ 18 ಗುಂಟೆಯ 2.90 ಕೋಟಿ ರೂ.ಗಳ ಸ್ಥಿರಾಸ್ಥಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.