ತೇರದಾಳ: 12 ಅಭ್ಯರ್ಥಿಗಳು ಕಣದಲ್ಲಿ, 7 ನಾಮಪತ್ರ ಹಿಂದಕ್ಕೆ
ಕಚೇರಿ ಮುಂದೆ ಕಾಂಗ್ರೆಸ್ ಹಾಗು ನಾಡಗೌಡ ಕಾರ್ಯಕರ್ತರ ಜಮಾವಣೆ
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 19 ಸದಸ್ಯರ ನಾಮಪತ್ರಗಳು ಊರ್ಜಿತಗೊಂಡಿದ್ದವು. ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಸೋಮವಾರದಂದು ಯಾರೂ ನಾಮಪತ್ರ ಹಿಂಪಡೆದುಕೊಂಡಿರಲಿಲ್ಲ.
 ಕೊನೆಯ 30 ನಿಮಿಷಗಳಲ್ಲಿ ಏಳು ಜನ ನಾಮಪತ್ರ ಹಿಂಪಡೆಯುವಲ್ಲಿ ಕಾರಣವಾಗಿ, 12 ಜನ ಸದಸ್ಯರು ಕಣದಲ್ಲಿದ್ದಾರೆ.
ಸಿದ್ದು ಸವದಿ(ಬಿಜೆಪಿ), ಸಿದ್ದು ಕೊಣ್ಣೂರ(ಕಾಂಗ್ರೆಸ್), ಡಾ. ಪದ್ಮಜೀತ ನಾಡಗೌಡ ಪಾಟೀಲ(ಪಕ್ಷೇತರ), ಸುರೇಶ ಮಡಿವಾಳರ(ಜೆಡಿಎಸ್),ಅರ್ಜುನ ಹಲಗಿಗೌಡರ(ಆಪ್), ವಿಠ್ಠಲ ಗುಣದಾಳ(ಎಸ್‌ಡಿಪಿಐ), ಧರೆಪ್ಪ ದಾನಗೌಡ(ಕೆಆರ್‌ಎಸ್), ಅಂಬಾದಾಸ ಕಾಮೂರ್ತಿ(ಪಕ್ಷೇತರ), ಸಂತೋಷ ಹನಗಂಡಿ, ಅಬ್ಬಾಸಲಿ ಮುಲ್ಲಾ(ಆರ್‌ಪಿಐ), ಮಹಾಲಿಂಗ ಹ್ಯಾಗಾಡಿ(ಪಕ್ಷೇತರ), ಅಡಿವೆಪ್ಪ ಉದ್ದಪ್ಪಗೋಳ ಕಣದಲ್ಲುಳಿದವರಾಗಿದ್ದಾರೆ.
ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷಗಳಿಗೆ ಬಂಡಾಯದ ಬಿಸಿ ಹೆಚ್ಚಾಗಿತ್ತು. ಈ ಬಾರಿ ಚುನಾವಣೆ ಕಣದಲ್ಲಿ ಬಿಜೆಪಿ ಬಂಡಾಯದ ಎಲ್ಲ ಅಭ್ಯರ್ಥಿಗಳೂ ನಾಮಪತ್ರ ಹಿಂಪಡೆಯುವಲ್ಲಿ ಕಾರಣವಾದರೆ, ಕಾಂಗ್ರೆಸ್‌ನಿಂದ ಡಾ. ಪದ್ಮಜಿತ ನಾಡಗೌಡ ಪಾಟೀಲಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕೆ ಸಿದ್ಧರಾಗಿದ್ದಾರೆ.
19 ಸದಸ್ಯರ ಪೈಕಿ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ರಾಜೇಂದ್ರ ಅಂಬಲಿ, ಬಸವರಾಜ ಬಾಳಿಕಾಯಿ, ಕಿರಣಕುಮಾರ ದೇಸಾಯಿ ಹಿಂಪಡೆದರೆ, ಮಠಾಧೀಶರಾಗಿ ಕಣಕ್ಕಿಳಿದು ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಹಳೇ ಹುಬ್ಬಳ್ಳಿಯ ವೀರ ಭಿಕ್ಷಾವ್ರತಿ ಮಠದ ಶಿವಶಂಕರ ಸ್ವಾಮೀಜಿ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಡಾ. ಎ.ಆರ್. ಬೆಳಗಲಿ, ಎಸ್‌ಡಿಪಿಐ ಎರಡನೇ ಅಭ್ಯರ್ಥಿಯಾದ ಪರಶುರಾಮ ಮೈತ್ರಿ ಹಾಗು ರಾಜು ಬೀಳಗಿ ನಾಮಪತ್ರ ವಾಪಸ್ ಪಡೆಯುವಲ್ಲಿ ಕಾರಣವಾಯಿತು.
ಕಚೇರಿ ಮುಂದೆ ನಾಟಕೀಯ ಬೆಳವಣಿಗೆ
ಚುನಾವಣಾಧಿಕಾರಿ ಕಚೇರಿ ಮುಂಭಾಗದಲ್ಲಿ ನೂರಾರು ಕಾಂಗ್ರೆಸ್ ಹಾಗು ನಾಡಗೌಡ ಬೆಂಬಲಿಗರು ಜಮಾವಣೆಗೊಂಡು ಅಭ್ಯರ್ಥಿಗಳ ಹಿಂಪಡೆಗೆ ಮನವಿ ಸೇರಿದಂತೆ ಹಲವಾರು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿ, ಕೆಲ ಕಾಲ ಗೊಂದಲ ಸೃಷ್ಟಿಯಾಗುವಲ್ಲಿ ಕಾರಣವಾಯಿತು.
ಇದೇ ಸಂದರ್ಭ ಕಾಂಗ್ರೆಸ್ ಜಿಲ್ಲಾ ಮುಖಂಡರಾದ ವೀಣಾ ಕಾಶಪ್ಪನವರ ಆಗಮಿಸಿ ಡಾ. ನಾಡಗೌಡ ಪಾಟೀಲರನ್ನು ಕೊನೆಯ ಗಳಿಗೆಯಲ್ಲಿ ವಿನಂತಿಸಿದ ಘಟನೆಯೂ ನಡೆಯಿತು. 
ಈ ಸಂದರ್ಭ ಮಾತನಾಡಿದ ಕಾಶಪ್ಪನವರ, ಎಐಸಿಸಿ ಸೇರಿದಂತೆ ರಾಜ್ಯದ ಎಲ್ಲ ಮುಖಂಡರು ಡಾ. ನಾಡಗೌಡರಿಗೆ ನಾಮಪತ್ರ ಹಿಂಪಡೆದು ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. 
ಇದ್ಯಾವದಕ್ಕೂ ಸ್ಪಂದಿಸದ ಕಾರಣ ಮುಂದಿನ ನಿರ್ಧಾರ ಪಕ್ಷದ ವರಿಷ್ಠರಂತೆ ನಡೆಯಲಿದೆ ಎಂದರು.