ಇಲ್ಲಸಲ್ಲದ ಆರೋಪ ಸಹಿಸೋಲ್ಲ
ಕಳೆದೇಳೆಂಟು ತಿಂಗಳಿಂದ ಪಕ್ಷದಲ್ಲಿ ನನ್ನನ್ನು ತೀವ್ರ ಕಡೆಗಣಿಸುತ್ತ ವಿನಾಕಾರಣ ಕಾಂಗ್ರೆಸ್ ಮುಖಂಡರ ಸಂಪರ್ಕದೊಂದಿಗೆ ಕಾಂಗ್ರೆಸ್‌ಗೆ ತೆರಳಲಿದ್ದೇನೆಂದು ಇಲ್ಲಸಲ್ಲದ ಆರೋಪವೆಸಗುತ್ತಿರುವ ಹಾಲಿಶಾಸಕ ಸಿದ್ದು ಸವದಿಯವರು ಕೇವಲ ತೇರದಾಳ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷಿಯೆಂಬ ಕಾರಣಕ್ಕೆ ನಮ್ಮನ್ನು ಪಕ್ಷದಿಂದ ದೂರವಿಡುವ ಪಿತೂರಿ ನಡೆಸುತ್ತಿರುವದು ಖಂಡನೀಯವೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ತೇರದಾಳ ಕ್ಷೇತ್ರ ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜೇಂದ್ರ ಅಂಬಲಿ ಶಾಸಕರ ವಿರುದ್ಧ ಗಂಭೀರ ಆರೋಪವೆಗಿದ್ದಾರೆ.
ಬನಹಟ್ಟಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹಟಗಾರ ಸಮುದಾಯ ದೊಡ್ಡದು. ಅದರಂತೆ ಎಲ್ಲ ಪಕ್ಷಗಳಲ್ಲಿಯೂ ರಕ್ತಸಂಬಂಧಿಗಳಿದ್ದಾರೆ. ಅವರೊಂದಿಗೇಕೆ ಬೆರೆಯುತ್ತೀರೆಂದು ವಾದ ಮಾಡುವದು ಎಷ್ಟು ಸಮಂಜಸ?. ಹಾಲಿ ಶಾಸಕರೇ ಎಲ್ಲ ಪಕ್ಷಗಳ ಮುಖಂಡರೊಂದಿಗೆ ಬೆರೆಯುವದಿಲ್ಲವೇ? ಎಂದು ಹೀಗೆ ಪ್ರಶ್ನೆಗಳ ವಾಗ್ದಾಳಿ ನಡೆಸಿ ಈಗಾಗಲೇ ನೇಕಾರ ಸಮುದಾಯದ ಪ್ರಬಲ ವ್ಯಕ್ತಿಯಾಗಿದ್ದ ಶಂಕರ ಸೊರಗಾಂವಿಯವರನ್ನು ಪಕ್ಷದಿಂದ ಹೊರಹಾಕಲಾಗಿದ್ದು, ಇದೀಗ ನನ್ನನ್ನೂ ಹೊರದೂಡುವ ಪ್ರಯತ್ನಗಳು ನಡೆಯುತ್ತಿವೆ. ಇದ್ಯಾವದಕ್ಕೂ ಹಿಂಜರಿಯದೆ ಪಕ್ಷನಿಷ್ಠೆಯಿಂದ ಬಿಜೆಪಿಯಲ್ಲಿಯೇ ಉಳಿಯುವದಾಗಿ ಅಂಬಲಿ ಸ್ಪಷ್ಟಪಡಿಸಿದರು.
ನೇಕಾರ ಸಮುದಾಯಕ್ಕೆ ಅನ್ಯಾಯ
ಕಳೆದ 2018 ರಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕರಾಗಿರುವ ಸಿದ್ದು ಸವದಿಯವರು ಇದೊಂದು ಬಾರಿ ಅವಕಾಶ ನೀಡಿ ಗೆಲ್ಲಿಸಿ ಕೊಡಿ ಮುಂದಿನ ಚುನಾವಣೆಗೆ ನೇಕಾರರಿಗೆ ಪ್ರಾಧಾನ್ಯತೆ ನಾನೇ ಕೊಡಿಸುವದಾಗಿ ಪ್ರಮಾಣ ಮಾಡಿದ್ದರು. ಇದೀಗ ನೇಕಾರ ಸಮುದಾಯದಿಂದ ಕಣಕ್ಕಿಳಿಯುವ ಇಚ್ಛೆಯಿದ್ದವರನ್ನು ಪಕ್ಷದಿಂದ ದೂರವಿಟ್ಟು ಕಚೇರಿಗೆ ಬರಬೇಡಿಯೆಂದು ಹೇಳುತ್ತಿದ್ದಾರೆ.
ನೇಕಾರ ಸಮುದಾಯಕ್ಕೆ ಸ್ವಾತಂತ್ರ್ಯಾ ನಂತರದ ದಿನಗಳಿಂದಲೂ ಅನ್ಯಾಯವಾಗುತ್ತಾ ಬಂದಿದ್ದು, 3 ಬಾರಿ ಗೆಲುವಿಗೆ ಶ್ರಮಿಸಿದ ನೇಕಾರ ಸಮುದಾಯಕ್ಕೆ ಈ ಸಲ ಪ್ರತ್ಯುಪಕಾರವಾಗಿ ತ್ಯಾಗ ಮಾಡಿ ನೇಕಾರರಿಗೆ ಬಿಜೆಪಿಯಿಂದ ಟಿಕೆಟ್ ದೊರಕುವಂತೆ ಶಾಸಕ ಸಿದ್ದು ಸವದಿಯವರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ಬಾರಿ ನೇಕಾರರಿಂದ ಕಣಕ್ಕಿಳಿಯಬೇಕೆಂಬುದು ಹಿರಿಯರ ಸಂದೇಶವೂ ಆಗಿದೆ ಎಂದು ರಾಜೇಂದ್ರ ಅಂಬಲಿ ತಿಳಿಸಿದರು.

Social Plugin