ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿನ ಎಲ್ಲೆಂದರಲ್ಲಿ ಅಂಗಡಿ, ಮನೆಗಳಲ್ಲಿ ಅಕ್ರಮವಾಗಿ ಕಳಪೆ ಸಾರಾಯಿ ಮಾರಾಟ ಮಾಡುತ್ತಿದ್ದು, ಇವರ ಮೇಲೆ ಕಾನೂನು ಕ್ರಮ ಜರುಗಿಸುವಲ್ಲಿ ಅಬಕಾರಿ ಇಲಾಖೆ ಹಿಂದೇಟು ಹಾಕುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಕ್ಕಯ್ಯ ದೇವಸ್ಥಾನ, ನಾವಲಗಿ ಪ್ಲಾಟ್‌ಗಳಲ್ಲಿ ಅಕ್ರಮವಾಗಿ ಕಳಪೆ ಸಾರಾಯಿ ಮಾರಾಟ ಮಾಡುತ್ತಿದ್ದರೆ, ಗ್ರಾಮಗಳಿಗೆ ಅಂಟಿಕೊಂಡಿರುವ ಧಾಬಾಗಳಲ್ಲಿಯೂ ಇದೇ ಚಟುವಟಿಕೆ ನಡೆಯುತ್ತಿದೆ. ಇದರಿಂದ ಕುಟುಂಬಗಳು ಬೀದಪಾಲಾಗುತ್ತಿವೆ. ಮಹಿಳೆಯರು, ಕೂಲಿ ಕಾರ್ಮಿಕರು, ಕಷ್ಟ ಪಟ್ಟು ದುಡಿದ ಹಣವನ್ನು ಮನೆಯ ಯಜಮಾನರುಗಳು ಬೀದಿ ಪಾಲಾಗುತ್ತಿದ್ದರೆ, ಅಕ್ರಮ ಸಾರಾಯಿ ಮಾರಾಟದಿಂದ ಕುಟುಂಬಗಳಲ್ಲಿ ಆಗಾಗ್ಗೆ ಗಲಾಟೆಗಲು ನಡೆಯುತ್ತಿರುತ್ತವೆ.
ವ್ಯಸನಕ್ಕೆ ಅಂಟಿಕೊಂಡ ಮಕ್ಕಳು
ಮನೆ-ಮನೆಗಳಲ್ಲಿ ದೊರಕುವ ಸಾರಾಯಿಯಿಂದ ಚಿಕ್ಕ ಮಕ್ಕಳೂ ಸಹಿತ ಕುಡಿತದ ಚಟಕ್ಕೆ ಅಂಟಿಕೊಂಡಿದ್ದಾರೆಂದು ಗ್ರಾಮದ ರಾಜು ಕದಮ ಬಲವಾಗಿ ಆರೋಪಿಸಿದ್ದಾರಲ್ಲದೆ, ಕಕ್ಕಯ್ಯ ದೇವಸ್ಥಾನ ಹತ್ತಿರ ಬೆಳಗಿನ ಜಾವದಿಂದಲೇ ಸಿಕ್ಕ ಸಿಕ್ಕ ಮನೆಗಳಿಗೆ ಕುಡುಕರು ಬಾಗಿಲು ಬಾರಿಸುತ್ತ ಎಲ್ಲ ಮನೆಗಳಲ್ಲಿಯೂ ಕಿರಿಕಿರಿಯುಂಟು ಮಾಡುತ್ತಿದ್ದು, ಈ ಭಾಗದ ಕುಟುಂಬಸ್ಥರಿಗೆ ತೀವ್ರ ತಲೆನೋವಾಗಿದೆ.
ಅಧಿಕಾರಿಗಳಿಗೆ ಘೇರಾವ್: ಅಕ್ರಮ ಸಾರಾಯಿಯಿಂದ ಬೇಸತ್ತ ಗ್ರಾಮಸ್ಥರು ಅಬಕಾರಿ ಇಲಾಖೆ ಅಧಿಕಾರಿಗಳನ್ನು ಘೇರಾವ್ ಹಾಕಿದ ಪ್ರಸಂಗ ಶುಕ್ರವಾರ ನಡೆಯಿತು. ತಕ್ಷಣವೇ ಅಂಥಹ ವ್ಯಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ,ಗ್ರಾಮಸ್ಥರಲ್ಲಿರುವ ಭಯವನ್ನು ಹೋಗಿಸಬೇಕು. ಅಲ್ಲದೆ ಚಿಕ್ಕ ಮಕ್ಕಳೂ ಸಹಿತ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿ ಮನವಿ ಅರ್ಪಿಸಿದರು.ಕಾಟಾಚಾರಕ್ಕೆ ಬಂಧನ: ಈ ಪ್ರಕರಣಕ್ಕೆ ಸಂಬಂಧ ಇಬ್ಬರನ್ನು ಕಳೆದೊಂದು ವಾರದಿಂದ ಬಂಧಿಸಿದರೂ ಅಕ್ರಮ ಸಾರಾಯಿ ಮಾರಾಟ ಮಾತ್ರ ನಿಂತಿಲ್ಲ. ಗ್ರಾಮದ ಮಹಿಳೆಯರು ಹಾಗು ಗ್ರಾಮ ಪಂಚಾಯಿತಿ ಸದಸ್ಯರು ಅಬಕಾರಿ ಇಲಾಖೆಗೆ ಮಾಹಿತಿಒದಗಿಸಿದರೂ ಯಾವದೇ ಪ್ರಯೋಜನವಾಗಿಲ್ಲ. ಕಾಟಾಚಾರಕ್ಕೆಂಬಂತೆ ಗ್ರಾಮಕ್ಕೆ ಬಂದು ಯಾರೂ ಸಾರಾಯಿ ಮಾರಾಟ ಮಾಡೊಲ್ಲ. ಅಂತಹ ವ್ಯಕ್ತಿಗಳು ಕಂಡು ಬಂದರೆ ಎಂದು ಹೇಳಿ ಹೋಗುತ್ತಾರೆ. ಶುಕ್ರವಾರ ಅಧಿಕಾರಿಗಳ ತಂಡ ಬರುತ್ತಿದ್ದಂತೆ ಅಕ್ರಮ ಸಾರಾಯಿ ಮಾರಾಟಗಾರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹೀಗೆ ಗ್ರಾಮದಲ್ಲಿನ ಅಕ್ರಮ ಸಾರಾಯಿ ಮಾರಾಟಗಾರರು ಗ್ರಾಮಸ್ಥರಿಗೆ ತೀವ್ರ ತಲೆನೋವಾಗಿದ್ದು, ಗ್ರಾಮದ ಜನತೆ ನಿರಾಳವಾಗಿ ಬದುಕು ಅಬಕಾರಿ ಇಲಾಖೆ ಅಧಿಕಾರಿಗಳು ಪ್ರಾಮಾಣಿಕ ಕಾರ್ಯ ಮಾಡಬೇಕಿದೆ. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವದೆಂದು ಮಹಾದೇವ ಅಮ್ಮಜಿಗೋಳ, ದಾವಲಸಾಬ ಮುಲ್ತಾನಿ, ರಾಜು ಕದಮ, ರಮೇಶ ನಾವಿ, ಸೋಮಯ್ಯ ಹಿಪ್ಪರಗಿ ಎಚ್ಚರಿಸಿದ್ದಾರೆ.`ಅಕ್ರಮ ಸಾರಾಯಿ ನಿರಂತರವಾಗಿದೆ. ಅಧಿಕಾರಿಗಳು ದಾಳಿ ನಡೆಸಿದ ಕೆಲ ದಿನಗಳಷ್ಟೇ ಬಂದ್ ಆಗುತ್ತದೆ. ಮತ್ತೇ ಈ ಅಕ್ರಮ ದಂಧೆ ನಿರಂತರ. ಇದಕ್ಕೆ ಶಾಶ್ವತ ಪರಿಹಾರವಾಗಲಿ ಎಂದು ಗ್ತಾಮ ಪಂಚಾಯಿತಿ ಅಧ್ಯಕ್ಷ ಸುಭಾಷ ಕಾಂತಿ ತಿಳಿಅಇದ್ದಾರೆ.
ಅಕ್ರಮ ಸಾರಾಯಿಗೆ ಸಂಬಧ ಈಗಾಗಲೇ ಕೆಲವರ ಮೇಲೆ ಪ್ರಕರಣ ದಾಖಲಾಗಿದೆ. ಎಂತಹ ವ್ಯಕ್ತಿಗಳೇಯಿರಲಿ ಅನುಮತಿಯಿಲ್ಲದೆ ಸಾರಾಯಿ ಮಾರಾಟ ಮಾಡಿದ್ದಲ್ಲಿ ಕಠಿಣ ಶಿಕ್ಷೆ ನಿಶ್ಚಿತವೆಂದು ಅಬಕಾರಿ ಇಲಾಖೆ ಅಧಿಕಾರಿ ಆದಿನಾಥ ನರಸಗೊಂಡ ಎಚ್ಚರಿಸಿದ್ದಾರೆ.

Social Plugin