ತೇರದಾಳ : ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನವರಾತ್ರಿ ಹಾಗೂ ವಿಜಯದಶಮಿಯ ಉತ್ಸವದ ಅಂಗವಾಗಿ ಪಟ್ಟಣದಲ್ಲಿ ಹಮ್ಮಿಕೊಂಡ ಶ್ರೀ ವೆಂಕಟೇಶ್ವರ ದೇವಸ್ಥಾನದ ರಥೋತ್ಸವ ಶ್ರದ್ಧಾ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಜರುಗಿತು.
ಅರ್ಚಕರ ವೇದ ಘೋಷ, ಮಂತ್ರಗಳೊಂದಿಗೆ ಜರುಗಿದ ರಥೋತ್ಸವಕ್ಕೆ ದಾರಿಯುದ್ದಕ್ಕೂ ಸೇರಿದ ಭಕ್ತರು ಸಾಕ್ಷಿಯಾದರು. ಶ್ರೀ ವೆಂಕಟೇಶ್ವರರ ಮೂರ್ತಿಯನ್ನು ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜಾಗಟೆ, ಘಂಟಾ ನಾದ ರಥೋತ್ಸವಕ್ಕೆ ಮೆರಗು ತಂದಿದ್ದವು. ಕಬ್ಬು, ಬಾಳೆ ಗೊನೆಯುಳ್ಳ ಬಾಳೆ ಗಿಡ ಹಾಗೂ ಹೂವಿನ ಹಾರಗಳಿಂದ ರಥವನ್ನು ಸಿಂಗರಿಸಲಾಗಿತ್ತು. ಹಗಲು ದಿವಟಿಗೆ ರಥಕ್ಕೆ ಮೆರಗು ನೀಡಿತ್ತು. ಶ್ರೀ ವೆಂಕಟರಮಣ ಗೋವಿಂದಾ ಗೋವಿಂದಾ ಎಂಬ ಜಯಘೋಷ ಮುಗಿಲು ಮುಟ್ಟಿತ್ತು. ತೆಂಗಿನಕಾಯಿ ಒಡೆದು ಕರ್ಪೂರ ಹಚ್ಚಿ, ಉದಬತ್ತಿ ಬೆಳಗಿ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಬುಧುವಾರ ಬೆಳಿಗ್ಗೆ ಆರಂಭವಾದ ರಥೋತ್ಸವ ಕಿಲ್ಲಾ ಭಾಗ, ಚಾವಡಿ ಸರ್ಕಲ್, ಪೇಠಭಾಗ, ನಡುಪೇಠ, ಜವಳಿ ಬಜಾರ ಮೂಲಕ ಶ್ರೀಸಿದ್ದೇಶ್ವರ ಗಲ್ಲಿ, ಮೋಪಗಾರ ಗಲ್ಲಿಯಲ್ಲಿರುವ ಮೂಲ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದ ನಂತರ ಕಿಲ್ಲಾ ಭಾಗದ ದೇವಸ್ಥಾನಕ್ಕೆ ಮರಳಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಗುರುರಾಜ ಕುಲಕರ್ಣಿ, ಬಾಳು ದೇಶಪಾಂಡೆ, ಗಿರೀಶ ದೇಶಪಾಂಡೆ, ಪ್ರಭಾಕರ ಪಾರಗಾಂವಕರ, ಡಾ.ಪ್ರಸಾದ ಕುಲಕರ್ಣಿ, ರಮೇಶ ಬೆಳಗಲಿ, ಅಚ್ಯುತ್ ಬೆಳಗಲಿ, ರಾಘು ಜೋಶಿ, ವಿರಾಜ ಬಂಕಾಪೂರ, ನ್ಯಾಯವಾದಿ ಶ್ಯಾಮ ಸತ್ತಿಕರ, ನ್ಯಾಯವಾದಿ ಸಾಗರ ಕುಲಕರ್ಣಿ, ಕಿರಣ ದೇಶಪಾಂಡೆ, ರಾಮ ಜೋಶಿ, ಅತುಲ್ ದೇಶಪಾಂಡೆ, ಅಮೀತ ಪಾರಗಾಂವಕರ, ಪ್ರಭಾಕರ ಪಾರಗಾಂವಕರ, ಸುರೇಶ ರೇಣಕೆ, ಮಲ್ಲಪ್ಪಣ್ಣ ದಾನಿಗೊಂಡ, ಪ್ರವೀಣ ನಾಡಗೌಡ, ಅಶೋಕ ಅಳಗೊಂಡ, ಚಿದಂಬರ ಬಂಕಾಪೂರ, ಜಿ.ಎಸ್.ದೇಶಪಾಂಡೆ, ಸೇರಿದಂತೆ ಸಮಾಜದ ಗಣ್ಯರು, ಮಾತೆಯರು, ಯುವಕರು, ಮಕ್ಕಳು ರಥೋತ್ಸವದಲ್ಲಿ ಭಾಗವಹಿಸಿದ್ದರು.

Social Plugin