ಬಾಗಲಕೋಟೆಯಲ್ಲಿ ನಿಲ್ಲದ ಕಬ್ಬು ಬೆಳೆಗಾರರ ಹೋರಾಟ, ಡಿಸಿ ಸಭೆ...
ಬಾಗಲಕೋಟೆ (ಅ.21): ಅವರೆಲ್ಲಾ ಕಷ್ಟಪಟ್ಟು ಬೆಳದಿದ್ದ ಕಬ್ಬಿನ ಬೆಳೆಗೆ ಸರ್ಕಾರ ಬೆಲೆ ನಿಗದಿ ಮಾಡಿದೆ. ಆದರೆ ಅವರಿಗೆ ನಿಗದಿಯಾದ ಬೆಲೆ ಕೊಡಲು ಆ ಕಾರ್ಖಾನೆಗಳು ಮೀನಾ ಮೇಷ ಎನಿಸುತ್ತಿವೆ. ಇದರಿಂದ ಆಕ್ರೋಶಗೊಂಡ ಆ ರೈತರು ಹೋರಾಟದ ಎಚ್ಚರಿಕೆ ಕೊಟ್ಟು, ಬೆಲೆ ನಿಗದಿ ನಂತರ ಕಾರ್ಖಾನೆ ಶುರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಇವುಗಳ ಮಧ್ಯೆ ಕಾರ್ಖಾನೆಯೊಂದು ರೈತರನ್ನ ವಿರೋಧಿಸಿ ಕಬ್ಬು ನುರಿಸುವಿಕೆ ಮಾಡಿದ್ದಕ್ಕೆ ಕಲ್ಲು ತೂರಾಟ ನಡೆದ ಪ್ರಸಂಗ ಸಹ ನಡೆದಿದ್ದು, ಇವುಗಳ ಮಧ್ಯೆ ರೈತರ ಹೋರಾಟ ಮುಂದುವರೆದಿದೆ. ಈ ಕುರಿತ ವರದಿ ಇಲ್ಲಿದೆ. ಒಂದೆಡೆ ವಿವಿಧ ಬೇಡಿಕೆಗೆ ಆಗ್ರಹಿಸಿದ ಕಬ್ಬು ಬೆಳೆಗಾರರು ಹಾಗೂ ಅಧಿಕಾರಿಗಳ ಮಧ್ಯೆ ನಡೆದ ಸಭೆ, ಮತ್ತೊಂದೆಡೆ ಸರ್ಕಾರದ ವಿರುದ್ಧ ಘೋಷಣೆ ಗುಡುಗಿದ ಬೆಳೆಗಾರರು. ಇವುಗಳ ಮಧ್ಯೆ ಅಲ್ಲಲ್ಲಿ ಬೀದಿ ಹೋರಾಟಕ್ಕೆ ಮುಂದಾದ ರೈತರು, ಅಂದ್ಹಾಗೆ ಈ ದೃಶ್ಯಗಳು ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ. ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಾಗಿ ರೈತರು ಕಬ್ಬು ಬೆಳೆ ಬೆಳೆಯುತ್ತಿದ್ದು, ಇದಕ್ಕೆ ಕಾರಣ ಇಲ್ಲಿರುವ ನೀರಾವರಿ ಸೌಲಭ್ಯ. ಅದರಂತೆ ಕಬ್ಬು ಬೆಳೆಗಳಿಗೆ ಅನುಗುಣವಾಗಿ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭ ಆಗುತ್ತವೆ. ಅದ್ರಂತೆ ಪ್ರಸಕ್ತ ಕಬ್ಬಿನ ಹಂಗಾಮು ಶುರುವಾಗಿದ್ದು, ಜಿಲ್ಲೆಯಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ಪ್ರಾರಂಭ ಆಗಿವೆ. ಆದ್ರೆ ಕಬ್ಬು ಬೆಳೆಗೆ ಬೆಲೆ ಘೋಷಣೆ ಮಾಡದೇ ಪ್ರಾರಂಭ ಮಾಡಿರೋದಕ್ಕೆ ಬೆಳೆಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

Social Plugin