ಬುದ್ದಯ್ಯಾಸ್ವಾಮಿ ಪುರಾಣಿಕ ಕೃತಿ "ಶ್ರೀಅಲ್ಲಮಪ್ರಭು ಪುರಾಣ" ಗ್ರಂಥ ದಾಸೋಹ ಸಮಾರಂಭ
ಮಕ್ಕಳು ನಮ್ಮ ಸಂಸ್ಕೃತಿಯಲ್ಲಿ ಬೆಳೆಯಬೇಕಾದರೆ ಕನ್ನಡ ಭಾಷೆ ಅಗತ್ಯ-ಸಿದ್ಧರಾಮ ಶ್ರೀಗಳು 
ತೇರದಾಳ : ಮೊದಲು ಮಕ್ಕಳಿಗೆ ಕನ್ನಡವನ್ನು ಕಲಿಸಬೇಕು. ನಮ್ಮ ಮಕ್ಕಳು ನಮ್ಮ ಸಂಸ್ಕೃತಿಯಲ್ಲಿ ಬೆಳೆಯಬೇಕಾದರೆ ಕನ್ನಡ ಭಾಷೆಯಿಂದ ಅವರು ಹೊರಗೆ ಹೋಗಬಾರದು. ಕನ್ನಡದಲ್ಲಿಯೇ ಸಂಸ್ಕೃತಿಯಿರಬೇಕು, ನಮ್ಮ ಧರ್ಮ ಕನ್ನಡದ ಧರ್ಮವಾಗಿರಲಿ. ಬಸವಾದಿ ಶರಣರು ಕನ್ನಡದಲ್ಲಿಯೇ ವಚನಗಳನ್ನು ಬರೆದರು ಎಂದು ಗದಗ ಡಂಬಳದ ಎಡೆಯೂರು ಶ್ರೀಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು. 
   ಪಟ್ಟಣದ ಶ್ರೀಅಲ್ಲಮಪ್ರಭು ದೇವಸ್ಥಾನದ ಸಭಾ ಭವನದಲ್ಲಿ ನಡೆದ ಬುದ್ದಯ್ಯಾಸ್ವಾಮಿ ಪುರಾಣಿಕ ಕೃತಿ "ಶ್ರೀಅಲ್ಲಮಪ್ರಭು ಪುರಾಣ" ಗ್ರಂಥ ದಾಸೋಹ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು ಮಕ್ಕಳ ಭವಿಷ್ಯ ಬಹಳ ಮುಖ್ಯವಾದುದು ಕನ್ನಡವನ್ನು ಕಲಿಸಿ ಬೇರೆ ಎನನ್ನಾದರೂ ಕಲಿಸಿ. ಸಂಸ್ಕೃತಿಯನ್ನು ಬಿಟ್ಟು ಬೇರೆ ಎನನ್ನಾದರೂ ಕಲಿತರೂ ಅದು ನಿರರ್ಥಕ. ಇಂದು ನಮ್ಮ ಮಕ್ಕಳು ಸಂಸ್ಕೃತಿಯಿಂದ ಏಕೆ ದೂರು ಸರಿಯುತ್ತಿದ್ದಾರೆ ಎಂದರೆ ಅವರಿಗೆ ಕನ್ನಡ ಭಾಷೆಯ ತಿಳುವಳಿಕೆ ಇಲ್ಲ, ಅವರು ಇಂತಹ ಕನ್ನಡ ಭಾಷೆಯ ಗ್ರಂಥಗಳನ್ನು ಓದುವುದಿಲ್ಲ, ಗುರು ಕೃಪೆಯಾಗಬೇಕಾದರೆ ಭಕ್ತಿ, ಶೃದ್ಧೆ, ವಿಶ್ವಾಸದಿಂದ ಅವರು ಓದಿದರೆ ಗುರು ಕೃಪೆಯಾಗುವುದು ಎಂದರು.
   ನಿವೃತ್ತ ಪೋಲಿಸ್ ಮಹಾನಿದೇರ್ಶಕ ಶಂಕರ ಬಿದರಿ, ಗಂಗಾವತಿ ಶಾಸಕ ಪರಣ್ಣಾ ಮುನವಳ್ಳಿ ಹಾಗೂ ಅಥಣಿ ಶಾಸಕ ಮಹೇಶ ಕುಮಟೊಳ್ಳಿ ಮಾತನಾಡಿ 21ನೇ ಶತಮಾನದಲ್ಲಿ ನಾವು ಎಷ್ಟೇ ವಿದ್ಯೆಯನ್ನು ಕಲಿತರು ಅದರಲ್ಲಿ ಧರ್ಮ, ಸಂಸ್ಕೃತಿ , ಸಂಸ್ಕಾರ ಇದ್ದಿಲ್ಲದಿದ್ದರೆ ಎಲ್ಲವೂ ವ್ಯರ್ಥ. 12ನೇ ಶತಮಾನದಲ್ಲಿ ಶರಣರು ವಚನ ಸಾಹಿತ್ಯಗಳ ಮೂಲಕ ಅದ್ಭುತವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಬುದ್ದಯ್ಯಾಸ್ವಾಮಿ ಪುರಾಣಿಕರವರ ಸೇವೆ ನಿಶ್ವಾರ್ಥವಾದುದು ಹಾಗೂ ಅದು ಅನನ್ಯ ಎಂದರು.
   ಶೇಗುಣಸಿ ವಿರಕ್ತ ಮಠದ ಡಾ. ಮಹಾಂತ ಸ್ವಾಮಿಗಳು, ಚಿಮ್ಮಡ ವಿರಕ್ತ ಮಠದ ಪ್ರಭು ಸ್ವಾಮಿಗಳು, ಸ್ಥಳೀಯ ವಿರಕ್ತ ಮಠದ ಶಿವುಕುಮಾರ ದೇವರು, ಶ್ರೀಪ್ರಭುಲಿಂಗೇಶ್ವರ ಶುಗರ್ಸ್‍ನ ಅಧ್ಯಕ್ಷ ಜಗದೀಶ ಗುಡಗುಂಟಿ ಮಾತನಾಡಿದರು.
  ಸಮಾರಂಭದಲ್ಲಿ ವಿಜಯಕುಮಾರ ತೋರಗಲ್ಲ, ಬಿ.ಎಮ್. ಪೂರ್ವಿಮಠ, ಗುಹೇಶ್ವರ ಪುರಾಣಿಕ, ನಿರಂಜನ ಪುರಾಣಿಕ ಸೇರಿದಂತೆ ಇನ್ನಿತರರು ಇದ್ದರು. ಗ್ರಂಥ ಕೃತಿ ಪರಿಚಯ ಮಾಧವಾನಂದ ಶೇಗುಣಸಿ. ಶ್ವೇತಾ ಪುರಾಣಿಕ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಶ್ರೀನಿವಾಸ ವಡಪಿ ಸ್ವಾಗತಿಸಿದರು. ಪ್ರವೀಣ ನಾಡಗೌಡ ವಂದಿಸಿದರು.