ತೇರದಾಳ : ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಕರೆದಿರುವ ಕೆಡಿಪಿ ಸಭೆಯಲ್ಲಿ ತೇರದಾಳ ನೂತನ ತಾಲೂಕಿಗೆ ಹಳ್ಳಿಗಳ ಹಂಚಿಕೆಯನ್ನು ಮಾಡುವ ಸಲುವಾಗಿ ಸುತ್ತ ಮುತ್ತಲಿನ ಸುಮಾರು ನಾಲ್ಕೈದು ಹಳ್ಳಿಗಳ ಪಿಡಿಓಗಳನ್ನು ಸಭೆಗೆ ಬರಲು ತಿಳಿಸಿದ್ದು ಕಾಟಾಚಾರಕ್ಕೆ ಎಳೆಂಟು ಹಳ್ಳಿಗಳನ್ನು ಹಂಚಿಕೆ ಎಂಬುವುದು ನಮಗೆ ಗೊತ್ತಾಗಿದೆ. ಆದ್ದರಿಂದ ಸರಕಾರದ ನಿಯಮದಂತೆ ಒಂದು ಲಕ್ಷ ಜನಸಂಖ್ಯೆಯನ್ನು ಹಂಚಿಕೆ ಮಾಡುವುದಾದರೆ ನಮಗೆ ಹಳ್ಳಿಗಳ ವಿಂಗಡಣೆ ಮಾಡಲಿ ಅದನ್ನು ಬಿಟ್ಟು ಕಾಟಚಾರಕ್ಕೆ ಹಳ್ಳಿಗಳ ವಿಂಗಡಣೆ ಮಾಡುವುದಾದರೆ ಹಾಗೆಯೇ ಇರಲಿ ಮುಂದಿನ ಸರಕಾರ ಬಂದಾಗ ನಮಗೆ ಹಳ್ಳಿಗಳ ವಿಂಗಡಣೆ ಮಾಡಲಿ ಎಂದು ತಾಲೂಕಾ ಹೋರಾಟ ಸಮೀತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಹೇಳಿದರು.
ಪಟ್ಟಣದ ಹನುಮಾನ ದೇವಸ್ಥಾನದ ಆವರಣದಲ್ಲಿ ಬುಧವಾರ ಸಾಯಂಕಾಲ ಸೇರಿದ ತಾಲೂಕಾ ಹೋರಾಟ ಸಮೀತಿಯ ಸಭೆಯಲ್ಲಿ ಮಾತನಾಡಿದ ಅವರು ಹಳ್ಳಿಗಳ ವಿಂಗಡಣೆ ಕುರಿತು ಸ್ಥಳೀಯ ವಿಶೇಷ ತಹಶೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಸುಮಾರು 50-60ಮನವಿಗಳನ್ನು ಕೊಟ್ಟಿದ್ದರು ಅದಕ್ಕೆ ಒಂದು ಮನವಿಗೂ ಉತ್ತರವನ್ನು ಜಿಲ್ಲಾಧಿಕಾರಿಗಳು ಕೊಟ್ಟಿರುವುದಿಲ್ಲ. ಇದರಿಂದ ತಿಳಿಯುತ್ತದೆ ಜಿಲ್ಲಾಡಳಿತವು ಸಹ ನಮ್ಮ ಹೋರಾಟವನ್ನು ನಿರ್ಲಕ್ಷ ಮಾಡಿದೆ. ಕೆಡಿಪಿ ಸಭೆಗೆ ಎಲ್ಲ ಗ್ರಾಮ ಪಂಚಾಯತಿಯವರನ್ನು ಸಭೆಗೆ ಕರೆಯಬೇಕಾಗಿತ್ತು. ಸಭೆಯಲ್ಲಿ ಹಳ್ಳಿಗಳ ವಿಂಗಡಣೆ ಸಮಯದಲ್ಲಿ ಒಪ್ಪಿಗೆ ಕೊಡಲಿ ಕೊಡದೇ ಇರಲಿ. ಸಮನಾಗಿ ಅರ್ಧ ಭಾಗ ಮಾಡಿ ಹಳ್ಳಿಗಳ ವಿಂಗಡಣೆ ಮಾಡಲಿ, ಅದನ್ನು ಬಿಟ್ಟು ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣಿ ಮಾಡಿ ಇದರಲ್ಲಿಯೂ ತಾರತಮ್ಯ ಮಾಡುವುದು ಬೇಡ. ಹಾಗೇನಾದರೂ ಆದರೆ ನಾವು ಮತ್ತೇ ಹೋರಾಟಕ್ಕೆ ಸಿದ್ಧ ಎಂದರು. ತಾಲೂಕಾ ಹೋರಾಟಕ್ಕೆ ಬೆಲೆ ಕೊಡದೇ ಹತ್ತಿಕ್ಕುವ ಕಾರ್ಯ ನಡೆದಿದೆ. ಅರ್ಧ ಹಳ್ಳಿ, ಅರ್ಧ ಜನಸಂಖ್ಯೆ ಕೊಟ್ಟರೆ ಮಾತ್ರ ಜಿಲ್ಲಾಡಳಿತ ತಗೆದುಕೊಂಡ ನಿರ್ಣಯಕ್ಕೆ ನಮ್ಮ ಒಪ್ಪಿಗೆ ಇದೆ. ನಮ್ಮ ಹೇಳಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ನಾವೂ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ. ಹಾಗೇನಾದರೂ ಸಂದರ್ಭ ಬಂದರೆ ಮುಖ್ಯಮಂತ್ರಿ ನಿವಾಸಕ್ಕೂ ಘೇರಾವು ಹಾಕಲಾಗುವುದು ಎಂದರು.
ಈ ಸಂದರ್ಭದಲ್ಲಿ ಚಿಕ್ಕಪ್ಪ ಲೋಹಾರ, ಮಗೆಪ್ಪ ತಾರದಾಳ, ಕಲ್ಲಪ್ಪ ಕಬಾಡಗಿ, ಮುರಿಗೆಪ್ಪ ಹನಗಂಡಿ, ತುಳಜಪ್ಪ ಅಥಣಿ, ಯಾಶೀನ ಸಾತಬಚ್ಚೆ, ಯಲ್ಲಪ್ಪ ನಾಗರೆಡ್ಡಿ, ಸಿದ್ಧರಾಜ ಉಳಗೊಂಡ, ಗಂಗಪ್ಪ ಬಾಗಿ, ಮೃತ್ಯುಂಜಯ ತೆಳಗಿನಮನಿ, ಅವ್ವಪ್ಪ ನೀಲನ್ನವರ, ಸಿದ್ಧಪ್ಪ ಗಾಡಿವಡ್ಡರ, ಮಹ್ಮದ ಜಮಖಂಡಿ, ಸದಾಶಿವ ಮುದಕನ್ನವರ, ಬಾಬು ಪೆಂಡಾರಿ, ಬಸವರಾಜ ಲಕ್ಕಪ್ಪಗೊಳ, ಶಂಕರ ಕಬಾಡಗಿ ಸೇರಿದಂತೆ ಇನ್ನಿತರರು ಇದ್ದರು.

Social Plugin