ಖ್ಯಾತ ವೈದ್ಯ ದಾನಿಗೊಂಡ ಅಭಿಮತ : ಹಾಸ್ಯ ಕಲಾವಿದ ಪ್ರಾಣೇಶ ವಿರುದ್ಧವೂ ಹರಿಹಾಯ್ದ ಜೈನರು
ತೇರದಾಳ : 4 ನೇ ಶತಮಾನದ ಪರಂಪರೆಯನ್ನೊಳಗೊಂಡ ಜಗತ್ತಿನ ಸನಾತನ ಧರ್ಮ ಜೈನ ಧರ್ಮದ ವೈರಾಗ್ಯ ಮೂರ್ತಿ ಭಗವಾನ ಬಾಹುಬಲಿಯರ ಕುರಿತು ಅನಾಗರಿಕ ಪ್ರಜ್ಞೆಯಲ್ಲಿ ಅವಹೇಳನವಾಗಿ ಮಾತನಾಡಿರುವುದು ಖಂಡನೀಯ, ಒಂದಾನೊಂದು ಕಾಲದಲ್ಲಿ ಇಡೀ ದೇಶವನ್ನಾಳಿದ ನಾವುಗಳು ಧರ್ಮತತ್ವದಂತೆ ಶಾಂತಿಪ್ರೀಯತೆಯನ್ನು ಮೈಗೂಡಿಸಿಕೊಂಡು ಒಂದು ಸುಕ್ಷ್ಮಾಣು ಜೀವಿಯನ್ನು ಕೂಡ ಗಮನದಲ್ಲಿರಿಸಿ ಯಾವೊಂದು ಜೀವ ಸಂಕುಲಕ್ಕೆ ಹಿಂಸೆಯಾಗದಂತೆ ಪ್ರತಿಯೊಂದು ಜೀವರಾಶಿಗಳಿಗೆ ಆದ್ಯತೆಯನ್ನು ನೀಡಿ ಬದುಕು-ಬದುಕಲು ಬಿಡಿ ತತ್ವವನ್ನು ಅಳವಡಿಸಿಕೊಂಡಿರುವ ಶಾಂತಿಪ್ರೀಯ ಜೈನ ಧರ್ಮೀಯರ ಮನಸ್ಸು ಘಾಸಿಗೊಳ್ಳುವಂತಹ ಮಾತನಾಡಿರುವ ಮೂರ್ಖ ಪ್ರತಿಪಾದಕರ ಹೇಳಿಕೆ ಅಮಾನವೀಯ ಜೈನರು ಸರ್ವರಂಗಗಳಲ್ಲಿ ಬಲಾಡ್ಯರಾಗಿದ್ದು, ಸಹನೆಗೂ ಸಿದ್ಧ-ಸಮರಕ್ಕೂ ಸಿದ್ಧವೆಂದು ತೇರದಾಳ ಪದ್ಮಾ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಮಹಾವೀರ ಎಸ್ ದಾನಿಗೊಂಡ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ನ್ಯಾಶನಲ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಅಯೂಬಖಾನ ಇವರು ಟಿ.ವಿ ವಾಹಿನಿ ಸಂದರ್ಶನದಲ್ಲಿ ಜೈನ ಧರ್ಮದ ವೈರಾಗ್ಯ ಮೂರ್ತಿ ಭಗವಾನ ಬಾಹುಬಲಿ ಮಹಾರಾಜರ ಕುರಿತು ಆಡಿದ ಅವಹೇಳನಕಾರಿ ಹೇಳಿಕೆ ಹಾಗೂ ರಬಕವಿಯ ಪ್ರಕಾಶ ಸುಡಾಳ ಭಗವಾನ ಬಾಹುಬಲಿ ಕುರಿತು ಅಸಭ್ಯವಾಗಿ ಬಿತ್ತರಿಸಿದ ಪೇಸ್ ಬುಕ್ ಸಂದೇಶದ ವಿರುದ್ಧ ಕೂಡಲೇ ಆರೋಪಿಗಳನ್ನು ಬಂಧಿಸಿ ಹಾಗೂ ಪ್ರಕರಣ ದಾಖಲಿಸಿ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಬೇಕೆಂದು ಆಗ್ರಹಿಸಿ ಶನಿವಾರ ಪಟ್ಟಣದ ಮಹಾವೀರ ವೃತ್ತದಿಂದ ನಾಡಕಛೇರಿಯವರೆಗೆ ಆಯೋಜಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು ಧಾರ್ಮಿಕ ಸಹಿಷ್ಣತೆಗೆ ಇಡೀ ಪ್ರಪಂಚದಲ್ಲಿಯೇ ಹೆಸರುವಾಸಿಯಾದ ನಮ್ಮ ಭರತ ಖಂಡದಲ್ಲಿ ಕೆಲವು ಕಿಡಗೇಡಿಗಳು ಸಾಮಾಜಿಕ ಶಾಂತಿಯನ್ನು ಕದಡುತ್ತಿದ್ದು,ಇಂತವರಿಗೆ ಸರ್ಕಾರ ತಕ್ಕಶಾಸ್ತಿ ಮಾಡಿದ್ದಲ್ಲಿ ಮಾತ್ರ ಇಂತಹ ಘಟನೆಗಳು ಮರುಕಳಿಸುವುದಿಲ್ಲ, ಜೈನರು ಧರ್ಮಮಾರ್ಗದಲ್ಲಿ ಮುಗ್ದರಿದ್ದು ಧರ್ಮಕ್ಕೆ ಕುತ್ತುಬರುವಂತೆ ಯಾರಾದರು ವರ್ತಿಸಿದರೆ ಸಮರಕ್ಕೂ ಸಿದ್ಧವೆಂದು ಕಿಡಗೇಡಿಗಳ ವಿರುದ್ದ ಹರಿಹಾಯ್ದರು.
ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಕಿಸಾನ ಕಾಂಗ್ರೆಸ್ ಘಟಕದ ರಾಜ್ಯ ಸಂಚಾಲಕರಾದ ಖ್ಯಾತ ನೇತ್ರ ತಜ್ಞ ಡಾ.ಪದ್ಮಜೀತ ನಾಡಗೌಡ ಮಾತನಾಡಿ ಪೂರ್ವದಿಂದಲೂ ನಮ್ಮ ನಾಡು ಶಾಂತಿ ಮತ್ತು ಸೌಹಾರ್ಧತೆಗೆ ಹೆಸರುವಾಸಿಯಾಗಿದ್ದು, ನಮ್ಮ ನಾಡಿನಲ್ಲಿ ಸರ್ವಧರ್ಮಿಯರು ಅನೂನ್ಯವಾಗಿದ್ದು ಎಲ್ಲರೂ ಏಕತಾ ಭಾವದಿಂದ ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿರುವ ಭವ್ಯ ಭಾರತದಲ್ಲಿ ಕೆಲವು ಕಿಡಗೇಡಿಗಳು ಮಾಡಿದ ಇಂತಹ ಹೀನ ಕೃತ್ಯದಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದ್ದು ಸರ್ವಧರ್ಮದ ಬಣ್ಣಗಳನ್ನು ಒಳಗೊಂಡಿರುವ ನಮ್ಮ ಜೈನಧರ್ಮದ ಲಾಂಛನ ಇದಕ್ಕೆ ಸೂಕ್ತ ಉದಾಹರಣೆಯಾಗಿದ್ದು ಸಕಲ ಜೀವರಾಶಿಗಳ ಲೇಸನ್ನು ಬಯಸುವ ಪ್ರಾಚೀನ ಜೈನಧರ್ಮದ ಆರಾಧ್ಯ ಭಗವಾನ ಬಾಹುಬಲಿಯವರ ಬಗ್ಗೆ ಅವಹೇಳನ ಖಂಡನೀಯ ಈ ನಿಟ್ಟಿನಲ್ಲಿ ಕಿಡಗೇಡಿಗಳ ವಿರುದ್ದ ಪ್ರಕರಣದಾಖಲಿಸಿ ಬಂಧಿಸುವಂತೆ ಮನವಿಯನ್ನು ಸಲ್ಲಿಸಿದ್ದು ಸ್ವ ಹಿತಾಸಕ್ತಿಗಾಗಿ ನಮ್ಮ ಧರ್ಮವನ್ನು ಹಿಯಾಳಿಸಿದ ಕಿಡಗೇಡಿಗಳ ವಿರುದ್ಧ ನಮ್ಮ ಸಮುದಾಯದಿಂದ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಎಚ್ಚರಿಸಿದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಯುವ ಮುಖಂಡ ರಾಜು ನಂದೆಪ್ಪನವರ ಮಾತನಾಡಿ ಸರ್ವಧರ್ಮಗಳನ್ನು ಸಮನಾಗಿ ಆರಾಧಿಸಿ ಪ್ರತಿಯೊಂದು ಧರ್ಮಕ್ಕೆ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ದೇಣಿಗೆಯನ್ನು ನೀಡಿ ಸೌಹಾರ್ಧ ಬದುಕಿಗೆ ಮುನ್ನುಡಿ ಬರೆದ ನಮ್ಮ ಜೈನ ಧರ್ಮದ ಬಗ್ಗೆ ಅಸಭ್ಯವಾಗಿ ಮಾತನಾಡಿರುವುದು ಇಡೀ ಜೈನ ಸಮುದಾಯವನ್ನು ಕೆರಳಿಸಿದ್ದು ಸರ್ವರಂಗಗಳಲ್ಲಿ ಪ್ರಬಲರಾಗಿರುವ ಜೈನ ಧರ್ಮೀಯರು ಸಂದಾನ ಹಾಗೂ ಸಮರಗಳೆರಡಕ್ಕೂ ಸಿದ್ಧರಿದ್ದು ಇಡೀ ಭರತಖಂಡವನ್ನೆ ಗೆದ್ದರು ಲೋಕಕಲ್ಯಾಣಾರ್ಥವಾಗಿ ವೈರಾಗ್ಯ ತಾಳಿ ಇಡೀ ವಿಶ್ವಸಮುದಾಯದ ಸಂರಕ್ಷಣೆಗೆ ನಿಂತಿರುವ ಭಗವಾನ ಬಾಹುಬಲಿಯವರ ಬಗ್ಗೆ ಅಸಡ್ಡೆ ಭಾವ ಸಲ್ಲದು ಸರ್ವಧರ್ಮಗಳನ್ನು ಸಮನಾಗಿ ಗೌರವಿಸುವ ನಮ್ಮವರನ್ನು ಕೆರಳಿಸಿದರೆ ಮುಂದೆ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆಯಂದು ಎಚ್ಚರಿಸಿದರು.
ಹಾಸ್ಯ ಕಲಾವಿದ ಪ್ರಾಣೇಶಗೆ ಎಚ್ಚರಿಕೆ : ತಮ್ಮ ಹಾಸ್ಯಗಳಲ್ಲಿ ಜೈನ ಸಮುದಾಯದ ಬಗ್ಗೆ ಹಾಗೂ ಭಗವಾನ ಬಾಹುಬಲಿಯವರ ಬಗ್ಗೆ ಅವಹೇಳನವಾಗಿ ಉದಾಹರಿಸುತ್ತಿದ್ದು,ಅವರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಅವರ ವಿರುದ್ಧ ರಾಜ್ಯಾಧ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಸಮಾಜದ ಪ್ರಮುಖರಾದ ಡಿ.ಆರ್ ಪಾಟೀಲ,ಪ್ರಸನ್ನ ದೇಸಾಯಿ.ಪ್ರವೀಣ ನಾಡಗೌಡ,ಸುರೇಶ ಅಕ್ಕಿವಾಟ, ಸಾಗರ ಚವಜ,ಮಹಾವೀರ ಕೊಕಟನೂರ ಮಾತನಾಡಿ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಏಕೈಕ ಧರ್ಮ ನಮ್ಮ ಜೈನ ಧರ್ಮವಾಗಿದ್ದು, ದೇವರು ಮತ್ತು ಧರ್ಮದ ಸಾರವನ್ನು ಅರಿಯದೇ ವೈರಾಗ್ಯ ಮೂರ್ತಿ ಭಗವಾನ ಬಾಹುಬಲಿಯವರ ಬಗ್ಗೆ ಅಸಭ್ಯವಾಗಿ ಮಾತನಾಡಿರುವವರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನುಕ್ರಮವಹಿಸಬೇಕೆಂದು ಆಗ್ರಹಿಸಿದರು.
ಪಟ್ಟಣದ ಮಹಾವೀರ ವೃತ್ತದಲ್ಲಿ ಬೆಳಿಗ್ಗೆ ಜಮಾಯಿಸಿದ ನೂರಾರು ಜೈನ ಧರ್ಮೀಯರು ನಾಡ ಕಛೇರಿಯವರೆಗೆ ಪಾದಯಾತ್ರೆಯಲ್ಲಿ ತೆರಳಿ ಶ್ರೀ 1008 ನೇಮಿನಾಥ ಗೊಂಕ ಜಿನಾಲಯ ಅತೀಶಯ ಕ್ಷೇತ್ರ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವ ಪರಮ ಪೂಜ್ಯ ಸ್ವಸ್ಥಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ ಮಹಾಸ್ವಾಮಿಗಳು ಸಂಸ್ಥಾನ ಮಠ ತೇರದಾಳ ಪ್ರತಿಷ್ಠಾನದ ವತಿಯಿಂದ ಮಾನ್ಯ ಉಪತಹಶೀಲ್ದಾರ ಶ್ರೀಕಾಂತ ಮಾಯನ್ನವರ ಇವರ ಮೂಲಕ ತಹಶೀಲ್ದಾರ ರಬಕವಿ ಬನಹಟ್ಟಿ ಇವರಿಗೆ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕೆಂದು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತೇರದಾಳ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ನಗರ ಹಾಗೂ ಗ್ರಾಮೀಣ ಪ್ರದೇಶದ ನೂರಾರು ಜೈನ ಶ್ರಾವಕರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.

Social Plugin