ತೇರದಾಳ : ನಾವುಗಳೆಲ್ಲಾ ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಅಭಿಮಾನ ಹೊಂದಿರಬೇಕು. ಈ ನಾಡಿನಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ,ಜಾನಪದ ಮೈದಳೆದು ನಿಂತಿದೆ. ಕರ್ನಾಟಕದ ಭಾಷೆ, ನೆಲ, ಜಲಕ್ಕೆ ಕುತ್ತು ಬರದಂತೆ ಸರಕಾರಗಳೂ ಕೂಡಾ ಮಹತ್ವಪೂರ್ಣ ಯೋಜನೆಗಳ ಹಾಕಿಕೊಂಡು ಕಾರ್ಯ ಮಾಡಿವೆ, ಮಾಡುತ್ತಿವೆ ಎಂದು ಮಾಜಿ ಸಚಿವರು, ಸ್ತ್ರೀ ಶಕ್ತಿ ಸಂಘದ ರಾಜ್ಯಾಧ್ಯಕ್ಷರೂ ಆದ ಶ್ರೀಮತಿ ಉಮಾಶ್ರೀ ಹೇಳಿದರು.
ಶ್ರೀಕುವೆಂಪು ಕನ್ನಡ ಯುವಕ ಸಂಘದ ಆಶ್ರಯದಲ್ಲಿ ಸೋಮವಾರ ಸಂಜೆ ಸರಕಾರಿ ಕನ್ನಡ ಶಾಲೆ ಹತ್ತಿರ ನಡೆದ ಕರ್ನಾಟಕ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸುವಲ್ಲಿ ನಮ್ಮ ನಾಡು ಮುಂಚೂಣಿಯಲ್ಲಿದೆ ಎಂದರು.
ವಿರಕ್ತಮಠದ ಶ್ರೀಶಿವಕುಮಾರ ದೇವರು ಸಾನಿಧ್ಯ ವಹಿಸಿದ್ದರು.
ಶಿಕ್ಷಕ-ಸಾಹಿತಿ ಮ.ಕೃ.ಮೇಗಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಶ್ರೀಕುವೆಂಪು ಕನ್ನಡ ಯುವಕ ಸಂಘದಲ್ಲಿ ಕ್ರಿಯಾಶೀಲ ಯುವಕರಿದ್ದಾರೆ. ಊರಿನ ಬಗ್ಗೆ ಅಪಾರ ಅಭಿಮಾನ ಹೊಂದಿ ಜನಹಿತ ಕಾರ್ಯಗಳನ್ನು ಮಾಡುತ್ತಾ ಜನತೆಯ ಪ್ರೀತಿ-ವಿಶ್ವಾಸ ಪ್ರಶಂಸೆಗೆ ಪಾತ್ರರಾಗಿದ್ದಾರೆ. 2023ರಲ್ಲಿ ಸಂಘದ ಬೆಳ್ಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ನಡೆಸಲು ಸಿದ್ಧತೆ ಈಗಿನಿಂದಲೇ ಆಗಲಿ ಎಂದರು. ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರು ಇರು ಎಂತಾದರು ಇರು ಎಂದೆದಿಗೂ ನೀ ಕನ್ನಡವಾಗಿರು ಎಂಬ ಗೀತೆಯನ್ನು ಹಾಡಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದರ ರಾಯಪ್ಪ ಕುಂಬಾರ, ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಜೆ.ಪಿ.ದೊಡಮನಿ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ ಪಿ. ನಾಡಗೌಡ, ತೇರದಾಳ ತಾಲೂಕಾ ಹೋರಾಟ ಸಮಿತಿ ಅಧ್ಯಕ್ಷ ಭುಜಬಲಿ ಕೆಂಗಾಲಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ವಿದ್ಯಾಧರ ಸವದಿ, ಮಹಾಲಿಂಗಪುರದ ವೈದ್ಯ ಡಾ. ಎ.ಆರ್.ಬೆಳಗಲಿ, ತೇರದಾಳ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ, ಮಾಜಿ ಸದಸ್ಯ ಸಿದ್ದು ಅಮ್ಮಣಗಿ, ಹೆಚ್ಚುವರಿ ಪಿಎಸ್‍ಐ ಎಸ್.ಕೆ.ಸೂರ್ಯವಂಶಿ, ಸದಾಶಿವ ಹೊಸಮನಿ, ಮಹಾತ್ಮಾ ಜ್ಯೋತಿಬಾ ಪುಲೆ ಸೌಹಾರ್ಧ ಸಂಘದ ಅಧ್ಯಕ್ಷ ಕೇದಾರಿ ಪಾಟೀಲ, ನೇಮಣ್ಣಾ ಸಾವಂತನವರ, ಅಶೋಕ ಅಳಗೊಂಡ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.
ಸಂಘದ ಅಧ್ಯಕ್ಷ ಮಲ್ಲು ಬಾಳಿಕಾಯಿ ಸಂಘದ ಕಾರ್ಯಚಟುವಟಿಕೆಗಳು, ಧ್ಯೇಯೋಧ್ಧೇಶಗಳು, ಸಂಘ ನಡೆದು ಬಂದ ದಾರಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ರತ್ನ, ಯುವರತ್ನ ಖ್ಯಾತ ಚಿತ್ರನಟ ಪುನೀತ ರಾಜಕುಮಾರ್ ಅವರ ಅಗಲಿಕೆಗೆ ಮೇಣದ ಬತ್ತಿಗಳನ್ನು ಬೆಳಗಿ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಲಾಯಿತು.
ಸಂಗೀತ ಶಿಕ್ಷಕ ಯಲ್ಲಪ್ಪ ಇಮಡೆನ್ನವರ ಪ್ರಾರ್ಥಿಸಿದರು. ರವಿ ಸಲಬಣ್ಣವರ ಸ್ವಾಗತಿಸಿದರು. ಬಸವರಾಜ ಖವಾಶಿ ನಿರೂಪಿಸಿದರು. ಲಕ್ಷ್ಮಣ ಮಾನಕಾಪುರ ವಂದಿಸಿದರು.
ನಂತರ ಸ್ಥಳೀಯ ಶ್ರೀ ಪ್ರಭುಲಿಂಗೇಶ್ವರ ಮೆಲೊಡಿಯಸ್ ಆರ್ಕೆಸ್ಟ್ರಾ ಅವರಿಂದ ರಸಮಂಜರಿ, ಸಸಾಲಟ್ಟಿಯ ಚಿತ್ರನಟ, ಕಲಾವಿದ ಎಸ್.ಪಿ.ಹೊಸಪೇಟಿಯವರಿಂದ ಹಾಸ್ಯ ರಸಾಯನ ನಗೆಗಡಲಲ್ಲಿ ತೇಲಿಸಿತು.
ಫೋಟೊ ವಿವರ :
ಶ್ರೀಕುವೆಂಪು ಕನ್ನಡ ಯುವಕ ಸಂಘದ ಆಶ್ರಯದಲ್ಲಿ ಸೋಮವಾರ ಸಂಜೆ ಸರಕಾರಿ ಕನ್ನಡ ಶಾಲೆ ಹತ್ತಿರ ನಡೆದ ಕರ್ನಾಟಕ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸ್ತ್ರೀ ಶಕ್ತಿ ಸಂಘದ ರಾಜ್ಯಾಧ್ಯಕ್ಷರೂ ಆದ ಶ್ರೀಮತಿ ಉಮಾಶ್ರೀ ಸನ್ಮಾನ ಸ್ವೀಕರಿಸಿದರು.

Social Plugin