ತೇರದಾಳ ಪಟ್ಟಣದ ಪುರಸಭೆ ಅವರಣದಲ್ಲಿ ಬಯಲು ರಂಗ ಮಂಟಪದಲ್ಲಿ ಪೌರಕಾರ್ಮಿಕರ ದಿನೋತ್ಸವವನ್ನು ಯೋಜನಾ ನಿದೇರ್ಶಕ ಕೆ.ಮಾಯಣ್ಣಗೌಡ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ತೇರದಾಳ : ಪುರಸಭಾ ನಿಧಿಯಿಂದ ನೇರವಾಗಿ ಪೌರ ಕಾರ್ಮಿಕರ ಬ್ಯಾಂಕ್ ಖಾತೆಗೆ ವೇತನ ಜಮಾ ಆಗಬೇಕು ಎಂದು ಸರಕಾರ ತೀರ್ಮಾಣ ಕೈಗೊಂಡಿರುವುದು ಶ್ಲಾಘನೀಯ ಎಂದು ಬಾಗಲಕೋಟ ಜಿಲ್ಲಾ ನಗರಾಭಿಅವೃದ್ಧಿ ಕೋಶ ಯೋಜನಾ ಅಧಿಕಾರಿ ಕೆ.ಮಾಯಣ್ಣಗೌಡ ಹೇಳಿದರು.
ಪಟ್ಟಣದ ಪುರಸಭೆ ಅವರಣದಲ್ಲಿ ಬಯಲು ರಂಗ ಮಂಟಪದಲ್ಲಿ ಪೌರಕಾರ್ಮಿಕರ ದಿನೋತ್ಸವವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪೌರಕಾರ್ಮಿಕರ ಕಷ್ಟಗಳನ್ನು ಸಹಾನುಭೂತಿಯಿಂದ ಕಾಣಬೇಕು. ಪೌರಕಾರ್ಮಿಕರು ಸುರಕ್ಷಾಕವಚಗಳನ್ನು ಹಾಕಿಕೊಂಡು ಕಾರ್ಯದಲ್ಲಿ ತೊಡಗಬೇಕು. ಅಧಿಕಾರಿಗಳು ಕಾರ್ಮಿಕರಿಗೆ ಸುರಕ್ಷಾ ಕವಚಗಳನ್ನು ಕೊಡುವಾಗ ಎಣಿಕೆ ಹಾಕಿ ಕೊಡಬೇಡಿ. ಏಕೆಂದರೆ ಪೌರ ಕಾರ್ಮಿಕರು ಸುರಕ್ಷಾಕವಚಗಳನ್ನು ಉಪಯೋಗಿಸುವ ತೀವೃತೆಯಿಂದ ಅವುಗಳು ಬೇಗನೆ ಹಾಳಾಗಬಹುದು. ಸರಕಾರದ ಆದೇಶವಿಲ್ಲದಿದ್ದರೂ ಅಧಿಕಾರಿಗಳು ಮಾನವೀಯತೆಯ ಆಧಾರದ ಮೇಲೆ ಅವರಿಗೆ ಸುರಕ್ಷಾ ಕವಚಗಳನ್ನು ಕೊಡಬೇಕು ಎಂದು ಕಿವಿ ಮಾತು ಹೇಳಿದರು. ನೇರ ಪಾವತಿ ಪೌರ ಕಾರ್ಮಿಕರನ್ನು ಖಾಯಂ ಪೌರ ಕಾರ್ಮಿಕರೆಂದು ಪರಿಗಣಿಸಲು ಸರಕಾರದ ನಿಯಮಗಳ ಪ್ರಕಾರ ಕ್ರಮಕೈಗೊಳ್ಳಲು ಪ್ರಯತ್ನಿಸುತ್ತೇನೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಾಂತವ್ವ ಕಾಲತಿಪ್ಪಿ, ಸ್ಥಾಯಿ ಸಮೀತಿ ಚೇರಮನ್ ಹಾಫೀಜಮೌಲಾಲಿ ಚಿತ್ರಬಾನುಕೋಟಿ, ಎಇಇ ಬೆಳಕೂಡ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು, ಪೌರ ಕಾರ್ಮಿಕರು ಇದ್ದರು.
ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯೆ ರೂಪಾ ಶಂಕರ ಕುಂಬಾರ ಇವರು ಪೌರ ಕಾರ್ಮಿಕರ ದಿನಾಚರಣೆ ನಿಮಿತ್ಯ ಪುರಸಭೆ ಆರೋಗ್ಯ ವಿಭಾಗದ 34ಜನ ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ ಮಾಡಿದರು.
Social Plugin