ಶ್ರೀ ಕ್ಷೇತ್ರ ಇಂಚಗೇರಿ ಮಠ*
ಭಾಗ (9)
ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಜರಗುವ ಧಾರ್ಮಿಕ ಕಾರ್ಯಕ್ರಮಗಳು. ಪ್ರತಿ ನಿತ್ಯ ನಾಲ್ಕು ಬಾರಿ ಭಜನೆ ಹಾಗೂ ಎರಡು ಬಾರಿ ಪೂಜೆ ನಡೆಯುತ್ತದೆ. ವರ್ಷಕ್ಕೆ 6 ಪ್ರಮುಖ ಸಪ್ತಾಹಗಳು ನಡೆಯುತ್ತವೆ. ವರ್ಷಕ್ಕೆ ಎರಡು ಬಾರಿ ದಿಂಡಿ ಪಲ್ಲಕ್ಕಿ ಪಾದಯಾತ್ರೆ ನಡೆಯತ್ತದೆ.
ಜನವರಿ-ಫೆಬ್ರವರಿಯಲ್ಲಿ 4 ದಿನಗಳ ಕಾಲ ಶ್ರೀ ಸದ್ಗುರು ಸಮರ್ಥ ಭಾವುಸಾಹೇಬ ಮಹಾರಾಜರ, ಶ್ರೀ ಸದ್ಗುರು ಸಮರ್ಥ ಐನಾಥ ಪ್ರಭು ಮಹಾರಾಜರ. ಶ್ರೀ ಸದ್ಗುರು ಸಮರ್ಥ ಗಿರಿಮಲ್ಲೇಶ್ವರ ಮಹಾರಾಜರ, ಶ್ರೀ ಸದ್ಗುರು ಸಮರ್ಥ ಗುರುಪುತ್ರೇಶ್ವರ ಮಹಾರಾಜರ ಹಾಗೂ ಶ್ರೀ ಸದ್ಗುರು ಸಮರ್ಥ ಜಗನ್ನಾಥ ಮಹಾರಾಜರ ಪುಣ್ಯತಿಥಿ ಅಂಗವಾಗಿ ಮಾಘ ಸಪ್ತಾಹ ಆಗಿರುತ್ತದೆ.
ಚೈತ್ರ ಮಾಸದಲ್ಲಿ ಶ್ರೀ ಸದ್ಗುರು ಸಮರ್ಥ ಗುರುಲಿಂಗ ಜಂಗಮ ಮಹಾರಾಜರ ಹಾಗೂ ಶ್ರೀ ಸದ್ಗುರು ಸಮರ್ಥ ಶಿವಪ್ರಭು ಮಹಾರಾಜರ ಪುಣ್ಯ ತಿಥಿ ಸಪ್ತಾಹ ಜರಗುವದು. ಎಪ್ರಿಲ್ ತಿಂಗಳ ದಿನಾಂಕ 10 ರಂದು ಶ್ರೀ ಸದ್ಗುರು ಸಮರ್ಥ ಗುರುಪುತ್ರೇಶ್ವರ ಮಹಾರಾಜರ ಜಯಂತಿ ಆಚರಣೆ ಜರಗುವದು
ಜೂನ ತಿಂಗಳಲ್ಲಿ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿ ಅವರ ಪುಣ್ಯತಿಥಿ ಸಪ್ತಾಹ ನಡೆಯುತ್ತದೆ.
ಜುಲೈ ತಿಂಗಳಲ್ಲಿ ಹುತಾತ್ಮರ ಸಪ್ತಾಹ ನಡೆಯುತ್ತದೆ.
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ 1 ತಿಂಗಳ ಕಾಲ ಸಾಧನ ಸಪ್ತಾಹ ನಡೆಯುತ್ತದೆ.
ಪ್ರತಿ ವರ್ಷ ಅಕ್ಟೋಬರ್ 2 ಗಾಂಧೀ ಜಯಂತಿ ದಿನದಂದು ಶ್ರೀ ಕ್ಷೇತ್ರ ಇಂಚಗೇರಿ ಮಠದಿಂದ ಪಾದಯಾತ್ರೆ ಆರಂಭಿಸಿ ನವೆಂಬರ್ 2 ರಂದು ಹುಬ್ಬಳ್ಳಿಯಲ್ಲಿ ನಡೆಯುವ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿ ಅವರ ಜನ್ಮದಿನದಂದು ಮಂಗಳಗೊಳ್ಳುತ್ತದೆ.
ಡಿಸೆಂಬರ್ ತಿಂಗಳಲ್ಲಿ ದತ್ತ ಜಯಂತಿ ಸಪ್ತಾಹ ನಡೆಯುತ್ತದೆ.
ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿಯುವ ದೇವಾಲಯಗಳು.
ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಒಟ್ಟು ನಾಲ್ಕು ಬೃಹದಾಕಾರದ ದೇವಾಲಯಗಳಿವೆ. ಶ್ರೀ ಗುರುಲಿಂಗ ಜಂಗಮ ಮಹಾರಾಜರ ಹಾಗೂ ಶ್ರೀ ಭಾವೂಸಾಹೇಬ ಮಹಾರಾಜರ ಎರಡು ಪ್ರತೇಕ ಗೋಪುರಗಳುಳ್ಳ ದೊಡ್ಡ ದೇವಸ್ಥಾನವಿದೆ. ಈ ಎರಡು ಗೋಪುರಗಳುಳ್ಳ ಗರ್ಭಗುಡಿಯ ಮಧ್ಯೆ ಶ್ರೀ ಐನಾಥ ಪ್ರಭು ಮಹಾರಾಜರ ಗದ್ದುಗೆ ಇದೆ. ಸುಮಾರು 80 ವರ್ಷಗಳ ಪುರಾತನ ಕಟ್ಟಡವಾಗಿದೆ.
ಶ್ರೀ ಸ.ಸ.ಗಿರಿಮಲ್ಲೇಶ್ವರ ಮಹಾರಾಜ ಹಾಗೂ ಶ್ರೀ ಸ.ಸ.ಶಿವಪ್ರಭು ಮಹಾರಾಜರ ಎರಡು ಪ್ರತ್ಯೇಕ ಮಂದಿರ ಹಾಗೂ ಗೋಪುರಗಳಿವೆ.
ಈ ಎರಡು ಮಂದಿರಗಳ ನಡುವಿನ ಭವ್ಯ ಪ್ರಾಂಗಣದಲ್ಲಿ ಮಾರ್ಬಲ್ನಲ್ಲಿ ನಿರ್ಮಿಸಿರುವ ಶ್ರೀ ಗುರುಪುತ್ರೇಶ್ವರ ಮಹಾರಾಜರ ಮಂದಿರವಿದೆ.
ಶ್ರೀ ಶಿವಪ್ರಭು ಮಹಾರಾಜರ ಮಂದಿರದ ಒಳಾಂಗಣದಲ್ಲಿ ಶ್ರೀ ಜಗನ್ನಾಥ ಮಹಾರಾಜರ ಗದ್ದುಗೆ ಇದೆ. ಶ್ರೀ ಸ.ಸ.ಮಾಧವಾನಂದ ಪ್ರಭುಜೀ ಅವರ ಭವ್ಯ ದೇವಾಲಯ ನಿರ್ಮಾಣ ಹಂತದಲ್ಲಿದ್ದು, ಇದನ್ನು ಕೆಂಪು ಕಲ್ಲಿನಲ್ಲಿ ನಿರ್ಮಿಸಲಾಗಿದೆ.
ನೂರಾರು ಹಸುಗಳನ್ನು ಸಾಕಬಲ್ಲ ದೊಡ್ಡ ಗೋಶಾಲೆಯೂ ಈ ಮಠದಲ್ಲಿದೆ. ಸಾವಿರಾರು ಭಕ್ತರು ಸೇರಿ ಪ್ರಸಾದ ಸ್ವೀಕರಿಸುವ ದಾಸೋಹ ನಿಲಯವು ಇದೆ. ಭಕ್ತರ ಆಶ್ರಯಕ್ಕಾಗಿ ನೂತನ ಯಾತ್ರಿ ನಿವಾಸಗಳು ನಿರ್ಮಾಣ ಗೊಳ್ಳುತ್ತಿವೆ......🙏🚩 ಮುಂದುವರಿಯುವದು

Social Plugin