ತೇರದಾಳ ಪಟ್ಟಣದ ಗ್ರಾಮೀಣ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ ಜರುಗಿದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಿಎಸ್‍ಐ ರಾಜು ಬೀಳಗಿ ಅವರನ್ನು ಸನ್ಮಾನಿಸಿದರು.
ತೇರದಾಳದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಸಮಾರಂಭ, ಆಯುಷ ಜಾಗೃತಿ ಅಭಿಯಾನ
ಉತ್ತಮ ಆರೋಗ್ಯವೇ ಬದುಕಿನ ಮೂಲ ಸಂಪತ್ತು: ರಾಜು ಬೀಳಗಿ  
ತೇರದಾಳ : ಮನುಷ್ಯ ತನ್ನ ಬದುಕಿನಲ್ಲಿ ಉತ್ತಮ ಆರೋಗ್ಯವನ್ನು ಹೊಂದುವದರೊಂದಿಗೆ ಧೀರ್ಘಾಯುಷಿಗಳಾಗಿ ಜಗತ್ತಿನ ಅನುಭವವನ್ನು ಸವಿಯುವುದೇ ನಾವು ನಮ್ಮ ಬದುಕಿನಲ್ಲಿ ಸಂಪಾದಿಸಿದ ಮೂಲ ಸಂಪತ್ತಾಗಿದೆಯಂದು ಸ್ಥಳೀಯ ಪೋಲೀಸ ಠಾಣಾಧಿಕಾರಿ ರಾಜು ವೈ ಬೀಳಗಿ ಹೇಳಿದರು. 
    ಪಟ್ಟಣದ ಶ್ರೀ ಬಾಹುಬಲಿ ವಿದ್ಯಾಪೀಠದ ಶ್ರೀಜಿನಸೇನಾಚಾರ್ಯ ವಿದ್ಯಾ ಮಂಡಳಿಯ ಗ್ರಾಮೀಣ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯ, ಭಾರತ ಸರಕಾರದ ಆಯುಷ ಮಂತ್ರಾಲಯ 75 ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಸಂಯುಕ್ತ ಆಶ್ರಯದಲ್ಲಿ ಜರುಗಿದ ಅಜಾದಿ ಕಾ ಅಮೃತ ಮಹೋತ್ಸವ ಸಮಾರಂಭದ ಉದ್ಘಾಟಣೆಯನ್ನು ನೆರವೇರಿಸಿ ಮಾತನಾಡಿದ ಅವರು ಮನುಷ್ಯನ ಬದುಕಿನಲ್ಲಿ ಉತ್ತಮ ಆರೋಗ್ಯವೇ ಮೂಲ ಸಂಪತ್ತು ಇದನ್ನು ಕಾಪಾಡಿಕೊಂಡು ಹೋಗಲು ಸತ್ವಯುತ ಆಹಾರ ವ್ಯವಸ್ಥೆ, ನಿತ್ಯ ವ್ಯಾಯಾಮ, ಯೋಗ ಹಾಗೂ ಕ್ರಮಬದ್ಧವಾದ ಜೀವನ ವಿಧಾನಗಳನ್ನು ಅಳವಡಿಸಿಕೊಂಡು ಎಲ್ಲರೂ ಉತ್ತಮ ಆರೋಗ್ಯವನ್ನು ಸಾಧಿಸಬೇಕೆಂದು ತಿಳಿಸಿದ ಅವರು ಈ ನಿಟ್ಟಿನಲ್ಲಿ ನಮ್ಮ ಭಾರತ ಸರಕಾರ ಹಮ್ಮಿಕೊಂಡಿರುವ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಅಭಿಯಾನ ಯಶಸ್ವಿಯಾಗಿ ದೇಶದ ಪ್ರತಿಯೊಬ್ಬರು ಆರೋಗ್ಯ ಜಾಗ್ರತಿಯನ್ನು ಹೊಂದುವಂತಾಗಲೆಂದು ಹಾರೈಸಿದರು.
      ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ಕಾಯಾಧ್ಯಕ್ಷ ಡಿ.ಆರ್ ಪಾಟೀಲ ಮಾತನಾಡಿ ನಮ್ಮ ಬದುಕಿನಲ್ಲಿ ದುಡ್ಡು ಮುಖ್ಯವಲ್ಲ ಬದಲಾಗಿ ಉತ್ತಮ ಆರೋಗ್ಯವೇ ಪ್ರಮುಖವಾಗಿದ್ದು ನಮ್ಮ ಜೀವನದಲ್ಲಿ ನಾವು ಗಳಿಸುವ ಎಲ್ಲಾ ಸಂಪತ್ತಿಗಿಂತ ಆರೋಗ್ಯವಂತ ಬದುಕು ಮೂಲ ಸಂಪತ್ತಾಗಿದ್ದು ಹಣ ಕೇವಲ ನಮ್ಮನ್ನು ಶ್ರೀಮಂತರನ್ನಾಗಿಸಬಹುದು ವಿನಹ: ಬಹುಕಾಲ ಬದುಕಿಸಲಾರದು ಆರೋಗ್ಯವೇ ನಮ್ಮ ಬದುಕಿಗೆ ದೇವರು ಕೊಟ್ಟ ಸೌಭಾಗ್ಯವೆಂದು ತಿಳಿಸಿದರು.
    ಸಂಸ್ಥೆಯ ಪ್ರಾಚಾರ್ಯ ಡಾ.ಲಿಂಗಾರೆಡ್ಡಿ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ ಭಾರತ ಸರಕಾರದ ಆಯುಷ ಮಂತ್ರಾಲಯ ನಮ್ಮ ದೇಶದ 75 ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ದೇಶದ ಪ್ರತಿ ನಾಗರಿಕರು ವಿಶೇಷವಾಗಿ ಮಕ್ಕಳಲ್ಲಿ ಆರೋಗ್ಯ ಜಾಗ್ರತಿಯನ್ನು ಮೂಡಿಸುವುದಕ್ಕಾಗಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಪ್ರತಿ ತಿಂಗಳು ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಶಿಬಿರದ ಅಡಿಯಲ್ಲಿ 10 ಹಿರಿಯ ಪ್ರಾಥಮಿಕ ಶಾಲೆಗಳನ್ನು ಆಯ್ದು ಮಕ್ಕಳಿಗೆ ಆಯುಷ ಜಾಗ್ರತಿ ಕುರಿತು ತಿಳಿಸಿ ಉತ್ತಮ ಆರೋಗ್ಯದ ರಕ್ಷಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಕುರಿತು ಮಾಹಿತಿ ನೀಡಿ ಮಕ್ಕಳಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸುವುದರೊಂದಿಗೆ ಉತ್ತಮ ಆರೋಗ್ಯವನ್ನು ಹೊಂದುವಂತೆ ಪ್ರೇರೇಪಿಸುವುದು ಈ ಆಜಾದಿ ಕಾ ಅಮೃತ ಮಹೋತ್ಸವ ಅಭಿಯಾನದ ಮೂಲ ಉದ್ದೇಶವಾಗಿದ್ದು ನಮ್ಮ ದೇಶದಲ್ಲಿ ಸುಮಾರು 750 ಅಯುಷ ಮಹಾವಿದ್ಯಾಲಯಗಳಿದ್ದು ಪ್ರತಿ ವಿದ್ಯಾಲಯದಲ್ಲಿ 100 ರಂತೆ ವೈದ್ಯ ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದು ದೇಶಾದ್ಯಂತ ಪ್ರತಿ ತಿಂಗಳು 75000 ಶಿಬಿರಗಳು ಆಯೋಜಿಸುವ ಗುರಿಯನ್ನು ಹೊಂದಲಾಗಿದ್ದು ಜೊತೆಯಲ್ಲಿ ಪ್ರತಿ ಶಾಲೆಯಲ್ಲಿ ಆಯುರ್ವೇದಿಕ ಗಿಡಗಳನ್ನು ಹಾಗೂ ರಾಷ್ಟ್ರೀಯ ಔಷಧೀಯ ಸಸ್ಯಗಳ ಪರಿಷತ್ ಅಡಿಯಲ್ಲಿ ರೈತರಿಂದ 75 ಸಾವಿರ ಹೆಕ್ಟೇರ್ ಔಷಧೀಯ ಗಿಡಮೂಲಿಕೆಗಳನ್ನು ನೆಡುವ ಕ್ರೀಯಾ ಯೋಜನೆಯನ್ನು ರೂಪಿಸಿದ್ದು ನಮ್ಮ ಗ್ರಾಮೀಣ ಆಯುರ್ವೇದಿಕ ಮಹಾವಿದ್ಯಾಲಯ ಸಂಸ್ಥಾಪಿಸಿ ಬರುವ ಅಕ್ಟೋಬರ ತಿಂಗಳಿಗೆ 25 ವಸಂತಗಳನ್ನು ಪೂರೈಸುತ್ತಿದ್ದು ಬೆಳ್ಳಿ ಸಂಭ್ರಮದ ಸವಿನೆನಪಿನ ಸ್ಮರಣಿಕೆಯಾಗಿ ಈ ಅಭಿಯಾನದೊಂದಿಗೆ ಇಂದು ಅನಾವರಣ ಸಮಾರಂಭವನ್ನು ಆಯೋಜಿಸಲಾಗಿದ್ದು ಮುಂದಿನ ದಿನಗಳಲ್ಲಿ ಸರಕಾರ ಸೂಚಿಸಿದ ಮಾರ್ಗಸೂಚಿಗಳನ್ವಯ ದೇಶದ ಪ್ರತಿ ಪ್ರಜೆ ಉತ್ತಮ ಆರೋಗ್ಯ ಸಾಧಿಸುವಂತೆ ಕೆಲಸ ಮಾಡುವುದು ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆಯಂದು ತಿಳಿಸಿದರು.
   ಉಪನ್ಯಾಸಕರಾಗಿ ಆಗಮಿಸಿದ ಡಾ.ಅಥಣಿ,ಡಾ.ಶಿವಲೀಲಾ,ಡಾ.ರಾಜೂರ ಮಾತನಾಡಿ ಆರೋಗ್ಯ ರಕ್ಷಣೆ ಹಾಗೂ ಗಿಡಮೂಲಿಕೆಗಳ ಉಪಯೋಗ ಮತ್ತು ಅನಾರೋಗ್ಯದ ಕುರಿತು ಮಾತನಾಡಿದರು.
   ಡಾ.ಭಾರತಿ ಕುಂಬಾರ ಅಭಿಯಾನದ ರೂಪರೇಷಗಳನ್ನು ಕುರಿತು ಸವಿಸ್ತಾರವಾಗಿ ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಟಿ.ಸಿ ಪಡಸಲಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಶಾಧ್ಯಕ್ಷರಾದ ಡಾ.ಜೆ.ಬಿ ಆಲಗೂರ, ಕಾರ್ಯದರ್ಶಿಗಳಾದ ನಿಲೇಶ ದೇಸಾಯಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಂತೋಷ ಕುಳ್ಳಿ ಸೇರಿದಂತೆ ಆಯುರ್ವೇದಿಕ ಮಹಾವಿದ್ಯಾಲಯದ ವೈದ್ಯ ಸಿಬ್ಬಂದಿ ಮತ್ತು ಕಲಿಕಾ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ.ಉಷಾಕಲಾ ಪಾಟೀಲ ಹಾಗೂ ಶ್ರೀಮತಿ ಬಂಡಿ ಕಾರ್ಯಕ್ರಮ ನಿರೂಪಿಸಿದರು. ಡಾ.ಶಿವಪ್ರಸಾದ ಹೊಸಮನಿ ವಂದಿಸಿದರು.
___________