*ಶ್ರೀ ಕ್ಷೇತ್ರ ಇಂಚಗೇರಿ ಮಠ* (ಭಾಗ 2 ) 


ಶ್ರೀ ಕ್ಷೇತ್ರ ಇಂಚಗೇರಿ ಮಠದ ಪ್ರಥಮ ಗುರುಗಳು ಶ್ರೀ ಗುರುಲಿಂಗ ಜಂಗಮ ಮಹಾರಾಜರು ಜೀವಿತಾವಧಿಯಲ್ಲಿ ಕೇವಲ ನಾಮಸ್ಮರಣೆ, ನಾಮಸಾಧನದ ಬಲದಿಂದ ಆತ್ಮಸಾಕ್ಷಾತ್ಕಾರವನ್ನು ಸಂಪಾದಿಸಿದ ಮಹಾಮಹಿಮರು. ಅದ್ಭುತವಾಗಿ ಅತೀಂದ್ರಿಯ ಶಕ್ತಿಯನ್ನು ಮೆರೆದರೆಂದು ಪ್ರತೀತಿ ಇದೆ. ಅವರ ಶಿಷ್ಯ ಶ್ರೀ ಭಾವೂಸಾಹೇಬ ಮಹಾರಾಜರು ಇಂದ್ರಿಯಾತೀತ ಅನುಭವ ಸಂಪನ್ನರಾಗಿದ್ದರು. ಲೌಕಿಕ ಪರಮಾರ್ಥಗಳೆರಡನ್ನೂ ಸಮಾನವಾಗಿ ತೂಗಿ ತಮ್ಮ ಹಾಗೂ ಸುತ್ತಲಿನ ಜನರ ಬಾಳನ್ನು ಆಧ್ಯಾತ್ಮಿಕತೆಯ ಪ್ರಕಾಶದಿಂದ ಉಜ್ವಲಗೊಳಿಸಿದರು. ತಮ್ಮ ಬದುಕಿನಲ್ಲಿ ಎದುರಾದ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಅನೇಕರು ಅವರಲ್ಲಿಗೆ ಬರುತ್ತಿದ್ದರು. ಮೂಲತಃ ಉಮದಿಯ ಭಾವೂಸಾಹೇಬ ಮಹಾರಾಜರು ವೃತ್ತಿಯಿಂದ ಸ್ಟಾಂಪ್ ವೆಂಡರ್ ಆಗಿದ್ದರು. ಸರ್ಕಾರಿ ಕಾಗದಪತ್ರಗಳನ್ನು ಬರೆದುಕೊಟ್ಟು ಜನರಿಂದ ಅಲ್ಪಸಂಭಾವನೆ ಪಡೆಯುತ್ತಿದ್ದರು. ಒಮ್ಮೆ ತೀವ್ರವಾಗಿ ಕಜ್ಜಿಯ ರೋಗಕ್ಕೆ ಗುರಿಯಾಗಿ ಬಹಳ ಕಷ್ಟ ಅನುಭವಿಸಿದರು. ಆತ್ಮಾವಲೋಕನ ಮಾಡಿಕೊಂಡಾಗ ಗುರುಗಳಾದ ಗುರುಲಿಂಗಜಂಗಮ ಮಹಾರಾಜರು ಹೀಗೆ ಹೇಳಿದ್ದನ್ನು ಜ್ಞಾಪಿಸಿಕೊಂಡರು. ಅವರು, ‘ಒಂದು ಮುಳ್ಳು ನೆಟ್ಟರೂ ಅದು ನಿನ್ನ ಯಾವ್ಯಾವ ಗುಣಕ್ಕಾಗಿ ನೆಟ್ಟಿರಬಹುದು ಎಂದು ವಿಚಾರಿಸಿಕೋ’ ಎಂದಿದ್ದರು. ತಾನು ಯಾವುದೋ ಅಪಕೃತ್ಯವೆಸಗಿದುದ್ದಕ್ಕಾಗಿ ಈ ರೋಗ ತನ್ನನ್ನು ಕಾಡುತ್ತಿದೆ ಎಂಬುದು ಮನವರಿಕೆಯಾಯಿತು. ಅನಂತರದ ದಿನಗಳಲ್ಲಿ ಅವರು ತಮ್ಮ ವೃತ್ತಿಯನ್ನು ತ್ಯಜಿಸಿದರು. ಕಜ್ಜಿ ವಾಸಿಯಾಯಿತು.

1903ರಲ್ಲಿ ಗುಣವಾಗದ ಕಾಯಿಲೆ ಕಾಡಿತು. ನನ್ನ ಆಯಸ್ಸು ಅರವತ್ತು ವರ್ಷ. 1903ಕ್ಕೆ ಅರವತ್ತು ತುಂಬಿತು. ಇನ್ನು ದೇಹತ್ಯಾಗ ಮಾಡುವೆ ಎಂದರು. ಆಗ ಶಿಷ್ಯರು, ನೀವಿನ್ನೂ ದೀರ್ಘಕಾಲ ಬದುಕಬೇಕೆಂದು ಬೇಡಿಕೊಂಡರಂತೆ. ಅನಂತರ ಭಾವೂಸಾಹೇಬರು ತಮ್ಮ ಆಯುಷ್ಯವನ್ನು 10 ವರ್ಷ ವರ್ಧಿಸಿಕೊಂಡು 1913ರಲ್ಲಿ ದೇಹತ್ಯಾಗ ಮಾಡಿದರು. ಇವರ ತರುವಾಯ ಬಂದವರು ಶ್ರೀ ಗಿರಿಮಲ್ಲೇಶ್ವರ ಮಹಾರಾಜರು. ಜಮಖಂಡಿಯ ಇವರು ಹುಬ್ಬಳ್ಳಿ, ಜಮಖಂಡಿ, ಬನಹಟ್ಟಿ, ಹಿಪ್ಪರಗಿ, ಜತ್ತ, ಜುನೋನಿ, ನಂದೇಶ್ವರ, ಸಾಂಗಲಿ ಮುಂತಾದೆಡೆ ಸಂಚರಿಸಿ ಭಕ್ತಿಪ್ರಚಾರ ಕೈಕೊಂಡು 1934ರಲ್ಲಿ ಲಿಂಗೈಕ್ಯರಾದರು. ಶ್ರೀ ಗುರುಪುತ್ರೇಶ್ವರ ಮಹಾರಾಜರು ದೇಶ-ವಿದೇಶಗಳಲ್ಲೆಲ್ಲ ಅಧ್ಯಾತ್ಮ ತತ್ವಬೋಧನೆ ಮಾಡಿಸಿ 1996ರಲ್ಲಿ ಲಿಂಗೈಕ್ಯರಾದರು. ಶ್ರೀ ಜಗನ್ನಾಥ ಮಹಾರಾಜರು ಗುರುಪುತ್ರೇಶ್ವರ ಮಹಾರಾಜರ ಜತೆಗೂಡಿ ದೇಶಾದ್ಯಂತ ಸಂಚರಿಸಿ ಹಲವು ವಿಧಾಯಕ ಕಾರ್ಯಗಳನ್ನು ಪ್ರಚುರಪಡಿಸಿದ್ದಾರೆ........ 🙏🚩ಮುಂದು ವರೆಯುವದು - (ಸಂಗ್ರಹ ಲೇಖನ)

------------------