ಭದ್ರಗಿರಿ ಬೆಟ್ಟಕ್ಕೆ ಪುರಾತತ್ವ ಆಧಿಕಾರಿಗಳ ತಂಡ : ಕಾಮಗಾರಿ ನಿಲ್ಲಿಸಲು ಆಗ್ರಹ
ತೇರದಾಳ : ಹಳಿಂಗಳಿ ಹಾಗೂ ತಮದಡ್ಡಿ ಗ್ರಾಮಸ್ಥರ ನಡುವೆ ಕಗ್ಗಂಟಾಗಿರುವ ಪುನರ್ವಸತಿ ಕೇಂದ್ರ ಹೊಸ ತಿರುವನ್ನು ಪಡೆದುಕೊಂಡಿದ್ದು, ಕಂದಾಯ ಹಾಗೂ ಪುರಾತತ್ವ ಇಲಾಖೆಯ ನಡುವೆ ಕಾನೂನು ಸಂಘರ್ಷಕ್ಕೆಡೆಮಾಡಿಕೊಡುವ ಲಕ್ಷಣಗಳು ಗೋಚರಿಸುತ್ತಿದ್ದು ಈ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿರುವ ಸಮೀಪದ ಹಳಿಂಗಳಿ ಭದ್ರಗಿರಿ ಬೆಟ್ಟಕ್ಕೆ ಪುರಾತತ್ವ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಶೇಜೇಶ್ವರ ಆರ್ ಉಪನಿರ್ದೇಶಕರು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಧಾರವಾಡ ಇವರ ನೇತೃತ್ವದ ತಂಡ ಇಂದು ತಮದಡ್ಡಿ ಪುನರ್ವಸತಿ ಕಾಮಗಾರಿ ನಡೆಯುತ್ತಿರುವ ಹಳಿಂಗಳಿ ಭದ್ರಗಿರಿ ಬೆಟ್ಟಕ್ಕೆ ಭೇಟಿ ನೀಡಿ ಕ್ರಿಸ್ತ ಪೂರ್ವ ಶಿಲಾಯುಗದ ಇತಿಹಾಸವನ್ನು ಹೋಲುವ ಮಾದರಿಗಳು ಇಲ್ಲಿ ಲಭ್ಯವಿದ್ದು, ಸಂಶೋಧನೆಯ ನಂತರ ಇವುಗಳ ಪೂರ್ವ ಇತಿಹಾಸವನ್ನು ತಿಳಿಯಲು ಸಾಧ್ಯ ಈ ಸಂಧರ್ಭದಲ್ಲಿ ಇವುಗಳನ್ನು ನಾಶ ಮಾಡುವುದರಿಂದ ಅಧ್ಯಯನಕ್ಕೆ ಅಡಚಣೆಯಾಗಲಿದ್ದು, ಕೂಡಲೇ ಕಾಮಗಾರಿಯನ್ನು ನಿಲ್ಲಿಸಿ ಅಗತ್ಯ ಸಂಶೋಧನೆಗೆ ಅವಕಾಶ ಮಾಡಿಕೊಂಡಬೇಕೆಂದು ಕಾಮಗಾರಿಯನ್ನು ನಿರ್ವಹಿಸುತ್ತಿರುವ ಸ್ಥಳದಲ್ಲಿದ್ದ ರಬಕವಿ ಬನಹಟ್ಟಿ ತಾಲೂಕಾ ನಿರಾವರಿ ನಿಗಮ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಉಪವಿಭಾಗದ ಸಹಾಯಕ ಅಭಿಯಂತರರಾದ ಆರ್.ಕೆ ಕುಲಕರ್ಣಿಯವರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಸಮಜಾಯಿಸಿ ನೀಡಿದ ಸಹಾಯಕ ಅಭಿಯಂತರ ಆರ್.ಕೆ ಕುಲಕರ್ಣಿ ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಪ್ರದೇಶವು ಕಂದಾಯ ಇಲಾಖೆಯಿಂದ ಅಧಿಕೃತವಾಗಿ ನಮಗೆ ಹಸ್ತಾಂತರವಾಗಿದ್ದು, ಈ ಕುರಿತು ಮೇಲಾಧಿಕಾರಿಗಳ ಆದೇಶವಿಲ್ಲದೇ ಯಾವುದೇ ಕಾರಣಕ್ಕೂ ಕಾಮಗಾರಿಯನ್ನು ನಿಲ್ಲಿಸಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು.
ಪುರಾತತ್ವ ಇಲಾಖೆಯ ಜಾಗವೆಂದು ದೃಢಪಟ್ಟಲ್ಲಿ ಸಾರ್ವಜನಿಕರಿಗಾಗುವ ತೊಂದರೆಗಳನ್ನು ಸ್ಪಷ್ಟ ಪಡಿಸಿದ ತಂಡದವರು: ಐತಿಹಾಸಿಕ ಸ್ಥಳಗಳಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವುದು ಕಾನೂನು ಭಾಹಿರ ಒಂದು ವೇಳೆ ನಿವೇಶನಗಳನ್ನು ನಿರ್ಮಿಸುವ ಸಂಧರ್ಭದಲ್ಲಿ ಯಾವುದಾರು ಐತಿಹಾಸಿಕ ಕುರಹುಗಳು ಪತ್ತೆಯಾದಲ್ಲಿ ಆ ಸ್ಥಳ ಸಂಪೂರ್ಣವಾಗಿ ನಮ್ಮ ಇಲಾಖೆಯ ಸುಪರ್ದಿಗೆ ಒಳಪಡಲಿದ್ದು, ನಿವೇಶನ ಪಡೆದವರಿಗೆ ಸರಕಾರದಿಂದ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ ಹಾಗೂ ಈ ಕುರಿತು ಅಂತವರ ಮೇಲೆ ಕೇಸನ್ನೂ ಕೂಡ ದಾಖಲಿಸಬಹುದಾಗಿದ್ದು,ಹಂಚಿಕೆ ಮಾಡಿದ ನಿವೇಶನಗಳನ್ನು ಪುನ: ಇಲಾಖೆಯ ಸುಪರ್ದಿಗೆ ಪಡೆದುಕೊಳ್ಳುವ ಅವಕಾಶಗಳಿರುವುದಾಗಿ ತಿಳಿಸಿದ ಅವರು ಇದು ಸರ್ಕಾರಿ ಕಾಮಗಾರಿಯಾಗಿದ್ದರೂ ಕೂಡ ನಮ್ಮ ಪುರಾತತ್ವ ಇಲಾಖೆಯ ವ್ಯಾಪ್ತಿಗೊಳಪಡುವ ಸ್ಮಾರಕಗಳನ್ನು ನಾಶಪಡಿಸುವುದು ಆಕ್ಷೇಪನಾರ್ಹವಾಗಿದೆಯಂದು ತಿಳಿಸಿ ಸ್ಥಳದಲ್ಲಿ ಲಭ್ಯವಾದ ಐತಿಹಾಸಿಕ ಕುರುಹುಗಳನ್ನು ಸಂಗ್ರಹಿಸಿಕೊಂಡ ತಂಡದವರು ಹೆಚ್ಚಿನ ತನಿಕೆಗಾಗಿ ಈ ಕುರಿತು ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಕ್ರಮವಹಿಸಲಾಗುವುದೆOದು ತಿಳಿಸಿದರು.
ಈ ಸಂಧರ್ಭದಲ್ಲಿ ತಂಡದವರು ಕಾಮಗಾರಿ ನಡೆಯುವ ಸ್ಥಳದಲ್ಲಿ ಧರಣಿ ನಿರತ ಜೈನಮುನಿ ಶಾಂತಿ ಧರ್ಮಭೂಷನ ಮಹಾರಾಜರಿಂದ ಕೆಲವು ಮಾಹಿತಿಗಳನ್ನು ಪಡೆದುಕೊಂಡರು.
ತಂಡದಲ್ಲಿ ಪುರಾತತ್ವ ಇಲಾಖೆಯ ವಿಶ್ರಾಂತ ಪುರಾತತ್ವ ತಜ್ಞ ಡಾ.ಎಸ್.ಜಿ ಸಾಮಕ,ಪುರಾತ್ವ ಇಲಾಖೆಯ ಅಭಿಯಂತರ ವಿಜಯಕುಮಾರ ಇದ್ದರು. ನಂತರ ತಂಡದವರು ತೇರದಾಳ ಪೋಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಿ ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯಕ್ಕೆ ತೆರಳಿ ಪ್ರಕರಣದ ಕುರಿತು ಚರ್ಚಿಸದರು. ತೇರದಾಳ ಠಾಣೆಯ ಹೆಚ್ಚುವರಿ ಪಿಎಸ್‍ಐ ಎಸ್.ಕೆ.ಸೂರ್ಯವಂಶಿ ಹಾಗೂ ಪೊಲೀಸ ಸಿಬ್ಬಂದಿ ಸೂಕ್ತ ಪೋಲೀಸ್ ಭದ್ರತೆಯನ್ನು ಕೈಗೊಂಡಿದ್ದರು.
-----------------------------------------


Social Plugin