ಶ್ರೀಅಲ್ಲಮಪ್ರಭು ದೇವರು

ತೇರದಾಳದ ಶ್ರೀಅಲ್ಲಮಪ್ರಭು ದೇವಸ್ಥಾನದ ಆವರಣದಲ್ಲಿ ಸೇರಿದ ಶಾಂತಿ ಸಭೆಯಲ್ಲಿ ಪಿಎಸ್‍ಐ ರಾಜು ಬೀಳಗಿ ಮಾತನಾಡಿದರು.

ತೇರದಾಳ ಅಲ್ಲಮಪ್ರಭು ದೇವರ ಜಾತ್ರೆ ಹಾಗೂ ಕುಸ್ತಿ ರದ್ದು

ತೇರದಾಳ : ಕೊರೊನಾ ಎಂಬ ಮಹಾಮಾರಿಯನ್ನು ಹೊಡೆದೊಡುಸುವ ಸಲುವಾಗಿ ಹಾಗೂ ಮೂರನೆಯ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಮುಂದಾಲೋಚನೆ ಮಾಡಿ ಜನದಟ್ಟನೆ ಆಗುವಂತ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ಸರಕಾರ ಆದೇಶ ಹೊರಡಿಸಿದೆ ಎಂದು ಸ್ಥಳಿಯ ಠಾಣಾಧಿಕಾರಿ ರಾಜು ಬೀಳಗಿ ಹೇಳಿದರು.

  ಪಟ್ಟಣದ ಶ್ರೀಅಲ್ಲಮಪ್ರಭು ದೇವರ ಜಾತ್ರೆಯ ಸಲುವಾಗಿ ದೇವಸ್ಥಾನದ ಆವರಣದಲ್ಲಿ ಸೇರಿದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಶ್ರಾವಣ ಮಾಸದ ಕೊನೆಯ ಸೋಮವಾರ ಸೆ.06ರಂದು ನಡೆಯುವ ಶ್ರೀ ಅಲ್ಲಮಪ್ರಭು ದೇವರ ಜಾತ್ರೆಯನ್ನು ರದ್ದು ಗೊಳಿಸಲಾಗಿದೆ. ಜಾತ್ರೆಗಳು ಸೇರಿದಂತೆ ಬೃಹತ್ ಹಬ್ಬಗಳನ್ನು ನಿಷೇಧಕ್ಕೆ ಒಳಪಡಿಸಿ ಸರಕಾರ ಮಾರ್ಗಸೂಚಿಗಳನ್ನು ನೀಡಿದೆ. ಕೋವಿಡ್ ಅನ್ನುವ ಮಹಾಮಾರಿಯನ್ನು ಕಟ್ಟಿ ನಿಲ್ಲಿಸಬೇಕು. ಮಾನವ ಸಂಕುಲಕ್ಕೆ ಬಂದೊದಗಿದ ಈ ಕಷ್ಟವನ್ನು ನಿವಾರಿಸುವ ಉದ್ದೇಶದಿಂದ ಜಾತ್ರೆ ಹಬ್ಬಗಳನ್ನು ನಿಷೇಧ ಮಾಡಿದೆ. ಪ್ರಜ್ಞಾವಂತ ನಾಗರಿಕರಾದ ನಾವೆಲ್ಲ ಸರಕಾರ ಕೊಟ್ಟಿರುವ ಮಾರ್ಗಸೂಚಿಗಳನ್ನು ಅನುಸರಿಸುವ ಜೊತೆಗೆ ನಮ್ಮ ಪ್ರಜ್ಞಾವ್ಯವಸ್ಥೆಯನ್ನು ಇನ್ನಷ್ಟು ಜಾಗೃತೆಗೊಳಿಸುವ ದೃಷ್ಟಿಯಲ್ಲಿ ಜನದಟ್ಟನೆ ಮತ್ತು ಒಗ್ಗೂಡಿಕೆಯನ್ನು ನಿರ್ಭಂದಿಸಲು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ರಾಜ್ಯ ಸರಕಾರ ಅಗತ್ಯ ಮುಂಜಾಗೃತಾ ಕ್ರಮಗಳನ್ನು ತಗೆದುಕೊಂಡಿದೆ. ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಕೋವಿಡ್-19 ಸೋಂಕು ಹೆಚ್ಚಿನ ರೀತಿಯಲ್ಲಿ ಹರಡದಂತೆ ಸೋಂಕಿನ ಸರಪಳಿಯನ್ನು ಮುರಿಯುವಂತೆ ಇನ್ನು ಹೆಚ್ಚಿನ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅನಿವಾರ್ಯವಾಗಿದೆ. ಸಾಮಾಜಿಕ, ರಾಜಕೀಯ, ಮನೋರಂಜನೆ, ಕ್ರೀಡಾ, ಶೈಕ್ಷಣಿಕ, ಸಾಂಸ್ಕ್ರತಿಕ, ಧಾರ್ಮಿಕ ಮತ್ತು ಇತರೆ ಒಗ್ಗೂಡಿಕೆಗಳನ್ನು  ಹಾಗೂ ಬೃಹತ್ ಸಭೆ ಸಮಾರಂಭ ಮತ್ತು ಜಾತ್ರೆಗಳನ್ನು ನಿಷೇಧಿಸಿದೆ. ಶ್ರೀಅಲ್ಲಮಪ್ರಭು ದೇವರ ದರ್ಶನಕ್ಕೆ ಯಾವುದೇ ರೀತಿಯಾದ ತೊಂದರೆಯಿರುವುದಿಲ್ಲ. ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ದರ್ಶನ ಪಡೆಯಬಹುದು ಎಂದು ಅವರು ಹೇಳಿದರು.

  ಅಂತರಾಷ್ಟ್ರೀಯ ಕುಸ್ತಿ ರದ್ದು : ಪ್ರತಿ ವರ್ಷದಂತೆ ನಡೆಯುವ ಅಂತರಾಷ್ಟ್ರೀಯ ಐತಿಹಾಸಿಕ ಕುಸ್ತಿಯನ್ನು ಸಹ ರದ್ದು ಪಡಿಸಲಾಗಿದೆ. ಮತ್ತು ಜಾತ್ರೆಯ ಅಂಗವಾಗಿ ನಡೆಯುವ ಕಬ್ಬಡ್ಡಿ ಸೇರಿದಂತೆ ಯಾವುದೇ ರೀತಿಯ ಕ್ರೀಡೆಗಳು ಸಹ ನಡೆಯುವುದಿಲ್ಲ ಎಂದು ಅವರು ತಿಳಿಸಿದರು.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಇಲ್ಲ : ದೇವಸ್ಥಾನದಲ್ಲಿ ಹಾಗೂ ಮನೆಗಳಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆ ಮಾಡಬಹುದು ಆದರೆ ಈ ವರ್ಷ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾನೆ ಮಾಡುವಂತಿಲ್ಲವೆಂದು ಮುಖ್ಯಾಧಿಕಾರಿ ಅಶೋಕ ಗುಡಿಮನಿ ಹೇಳಿದರು.

   ಈ ಸಂದರ್ಭದಲ್ಲಿ ಪಟ್ಟಣದ ಧನಿಗಳಾದ ಪ್ರವೀಣ ನಾಡಗೌಡ ಮಾತನಾಡಿದರು. 

  ಈ ಸಂದರ್ಭದಲ್ಲಿ ಅಲ್ಲಯ್ಯ ದೊಡಮನಿ, ಮಗಯ್ಯ ಹಿತ್ತಲಮನಿ, ಕಲ್ಲಯ್ಯ ದೂಪಾರ್ತಿ, ಮಲ್ಲಯ್ಯ ಬೃಂಗಿ, ರೇವಣಯ್ಯ ಹಿರೇಮಠ, ಕುಸ್ತಿ ಕಮೀಟಿ ಅಧ್ಯಕ್ಷ ನಿಂಗಪ್ಪ ಮಾಲಗಾವಿ, ಪರಯ್ಯ ಮೇಲಿನಮನಿ, ಈರಪ್ಪ ಯಾದವಾಡ, ಸಂತೋಷ ತೆಳಗಿನಮನಿ, ಪರಯ್ಯ ಹಿತ್ತಲಮನಿ ಸೇರಿದಂತೆ ದೇವಸ್ಥಾನದ ಅರ್ಚಕರು ಇದ್ದರು. ಎಮ್.ಸಿ.ಕುಂಚಗನೂರ ಸ್ವಾಗತಿಸಿ ವಂದಿಸಿದರು.

--------------------------------