ತೇರದಾಳ ಸಮೀಪದ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿನ ಗಿಡಮರಗಳನ್ನು ಜೆಸಿಬಿ ಮೂಲಕ ಸವರಿ ಪುನರ್ವಸತಿ ಕೇಂದ್ರದ ಕಾಮಗಾರಿ ನಡೆಸುತ್ತಿರುವುದು.
ಬೋಳಾಗುತ್ತಿದೆ ಹಳಿಂಗಳಿ ಭದ್ರಗಿರಿ ಬೆಟ್ಟ : ಜೈನ ಮುನಿಗಳ ಆಕ್ರೋಶ
ತೇರದಾಳ : ಜೈನರ ಕಾಶಿಯಂದೇ ಸಂಬೋಧಿಸಲ್ಪುಡುವ ಸಮೀಪದ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಜೈನಮುನಿ ಆಚಾರ್ಯ 1008 ಕುಲರತ್ನಭೂಷಣ ಮುನಿ ಮಹಾರಾಜರ ಸಂಕಲ್ಪದ ಫಲಶೃತಿಯಾಗಿ ಜಿನಭಕ್ತರ ನಿಸರ್ಗ ಸೇವೆಯಿಂದ ಬಾನೆತ್ತರವಾಗಿ ಬೆಳೆದ ಸಾವಿರಾರು ಗಿಡ ಮರಗಳು ಇಂದು ತಮದಡ್ಡಿ ನಿರಾಶ್ರಿತರಿಗಾಗಿ ನಿರ್ಮಿಸುತ್ತಿರುವ ಪುನರ್ವಸತಿ ಕೇಂದ್ರದ ಕಾಮಗಾರಿಯಲ್ಲಿ ಧರೆಗುರುಳುತ್ತಿರುವುದು ವಿಪರ್ಯಾಸ.
ಕಲ್ಲು ಮಣ್ಣಿನಿಂದ ಕೂಡಿದ ಗುಡ್ಡಕ್ಕೆ ಪ್ರಕೃತಿಯ ಸ್ಪರ್ಶವನ್ನು ನೀಡಿ ಸಾವಿರಾರು ಗಿಡಮರಗಳನ್ನು ನೆಟ್ಟ ಮಹಾರಾಜರು, ಪ್ರತಿ ದಿನ ಬಿಂದೆಗೆಗಳಲ್ಲಿ ನೀರು ಹೊತ್ತು ಹಾಕಿ ಬೆಳೆಸಿದ ಜಿನ ಭಕ್ತರ ಪರಿಶ್ರಮ ಇಂದು ಯಂತ್ರಗಳ ಬಾಯಿಗೆ ಸಿಲುಕಿ ನೆಲಸಮಗೊಳಿಸಿ ಸನ್ಯಾಸಿಗಳು ಮಾಡಿದ ತಪಸ್ಸನ್ನು ಭಂಗಗೊಳಿಸುತ್ತಿರುವುದು ಅಮಾನವೀಯ ಎಂದು ವಿಷಾಧ ವ್ಯಕ್ತಪಡಿಸಿದ ಮದ್ಯಪ್ರದೇಶದಲ್ಲಿ ಚಾತುರ್ಮಾಸವನ್ನು ಆಚರಿಸುತ್ತಿರುವ ಕುಲರತ್ನ ಭೂಷಣ ಮಹಾರಾಜರು ಉಸಿರನ್ನು ಕೊಡುವ ಹಸಿರನ್ನು ಹಾಳುಮಾಡುತ್ತಿರುವ ಜನಪ್ರತಿನಿಧಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು ರಾಜಕಾರಣಿಗಳು ಒಬ್ಬರ ಮೇಲೊಬ್ಬರು ಪ್ರತ್ಯಾರೋಪಗಳನ್ನು ಮಾಡುತ್ತಾ ಇಂದು ಐತಿಹಾಸಿಕ ಹಿನ್ನೆಲೆಯುಳ್ಳ ಭದ್ರಗಿರಿ ಬೆಟ್ಟಕ್ಕೆ ಕಂಟಕ ತಂದಿರುವುದು ವಿಷಾಧನೀಯ, ಎಲ್ಲವನ್ನು ತೊರೆದು ಜಗತ್ ಕಲ್ಯಾಣಕ್ಕಾಗಿ ಸನ್ಯಾಸಿಗಳಾದ ನಮ್ಮವರ ಪರಿಶ್ರಮಕ್ಕೆ ಕೊಳ್ಳಿ ಇಡುವುದು ಶೋಭಿತವಲ್ಲ, ಆಡಳಿತ ಪಕ್ಷದ ಸಿದ್ದು ಸವದಿಯವರಿಗೆ ಈ ಕುರಿತು ನಾನೇ ಸ್ವತ: ಅವರ ಮನೆಗೆ ತೆರಳಿ ಮನವಿ ಸಲ್ಲಿಸಿದಾಗ ಈ ಸ್ಥಳವನ್ನು ಬಿಟ್ಟು ಬೇರೆ ಸ್ಥಳವನ್ನು ಗುರುತಿಸಲಾಗುವುದೆಂದು ಸುಳ್ಳು ಭರವಸೆಗಳನ್ನು ನೀಡಿ ಇಂದು ನಮ್ಮ ಬೆನ್ನಿಗೆ ಚೂರಿ ಹಾಕಿರುವುದು ಭವಿಷ್ಯದಲ್ಲಿ ಇದಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸಬೇಕಾಗುತ್ತದೆಯಂದು ಹಿಡಿ ಶಾಪ ಹಾಕಿದ ಅವರು ನಿಸರ್ಗ ಬೋಳಾದರೆ ಬದುಕು ಗೋಳಾದೀತು ಎಂದು ಎಚ್ಚರಿಸಿದರು.
ಚಕ್ರವರ್ತಿ ಸೂಲೆಬೇಲೆಯವರನ್ನು ಸ್ಮರಿಸಿದ ಮಹಾರಾಜರು: ಯುವಬ್ರಿಗೇಡ್ ಸಹಯೋಗದಲ್ಲಿ ಸ್ವತ: ಸೂಲಿಬೇಲೆಯವರೇ ಶಾಸಕರ ಅಮೃತ ಹಸ್ತದಿಂದ 2000 ಗಿಡಗಳನ್ನು ನೆಟ್ಟಿರುವುದನ್ನು ಸ್ಮರಿಸಿದ ಅವರು, ಸಾಲುಮರದ ತಿಮ್ಮಕ್ಕ ಲಕ್ಷಾಂತರ ಗಿಡಮರಗಳನ್ನು ನೆಟ್ಟು ಈ ನಾಡಿನ ಹಸಿರನ್ನು ಉಳಿಸಿದ್ದಾರೆ. ಎಲ್ಲರಿಗೂ ಆಶೀರ್ವಾದವಿದೆ ಪಾಪ ಕಾರ್ಯಕ್ಕೆ ಅವಕಾಶ ಮಾಡದೆ ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿ ಹಾಳು ಮಾಡಿದ ಬದಲಾಗಿ ದುಪ್ಪಟ್ಟು ಗಿಡಗಳನ್ನು ನೆಟ್ಟು ನಮ್ಮ ಐತಿಹಾಸಿಕ ಹಿನ್ನೆಲೆಯುಳ್ಳ 100 ಎಕರೆ ನೆಲವನ್ನು ನಮಗೇ ಬಿಟ್ಟು ಕೊಡಬೇಕೆಂದು ಆಗ್ರಹಿಸಿದರು.
Social Plugin