ತೇರದಾಳ: ದೇಶಕ್ಕಾಗಿ ತನ್ನ ಪ್ರಾಣವನ್ನು ಬಲಿದಾನ ಮಾಡಿದ ಕ್ರಾಂತಿವೀರ ಸಂಗೋಳ್ಳಿ ಬ್ಯಾನರ್ ವಿರೂಪಗೊಳಿಸಿದ ಪ್ರಸಂಗ ಸಮೀಪದ ಸಸಾಲಟ್ಟಿಯಲ್ಲಿ ನಡೆದಿದೆ.
ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಗ್ರಾಮದ ಹಾಲುಮತಸ್ಥ ಸಮುದಾಯದವರು ಪ್ರತಿಭಟಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತೇರದಾಳ ಠಾಣಾಧಿಕಾರಿ ಆರ್.ವಾಯ್.ಬೀಳಗಿ ತಪ್ಪಿತಸ್ಥರನ್ನು ಆದಷ್ಟು ಬೇಗ ಪತ್ತೆಹಚ್ಚಿ ಕಾನೂನಿನ ಪ್ರಕಾರ ಕ್ರಮವಹಿಸುವ ಭರವಸೆ ನೀಡಿ ಪ್ರತಿಭಟನಾಕಾರರ ಮನವೊಲಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಗುರುವಾರ ರಾತ್ರಿಯಿಡಿ ಪೊಲೀಸರು ಗ್ರಾಮದಲ್ಲಿ ಕಾವಲಿದ್ದು, ಯಾವುದೇ ಅಹಿತರಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆವಹಿಸಿದ್ದರು.
ಈ ಸಂಬಂಧ ಇಂದು ಗ್ರಾಮ ಪಂಚಾಯ್ತಿ ಸಭಾ ಭವನದಲ್ಲಿ ಗ್ರಾಮದ ವಿವಿಧ ಸಮುದಾಯಗಳ ಮುಖಂಡರ ಶಾಂತಿ ಸಭೆಯನ್ನು ಅಯೋಜಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಠಾಣಾಧಿಕಾರಿ ಆರ್.ವಾಯ್.ಬೀಳಗಿ ಗ್ರಾಮದಲ್ಲಿ ಜನರು ಪರಸ್ಪರ ಸಾಮರಸ್ಯದಿಂದ ಇರುವುದನ್ನು ಸಹಿಸದ ಕೆಲವು ಕಿಡಿಗೇಡಿಗಳು ಈ ರೀತಿಯ ಕೃತ್ಯವನ್ನು ಮಾಡಿದ್ದು, ತಪ್ಪಿತಸ್ಥರನ್ನು ಆದಷ್ಟು ಬೇಗ ಪತ್ತೆಹಚ್ಚಿ ಕಾನೂನಿನ ವ್ಯಾಪ್ತಿಯಲ್ಲಿ ಕ್ರಮವಹಿಸಲಾಗುವುದು, ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಕಾನೂನನ್ನು ಕೈಗೆತ್ತಿಕೊಳ್ಳದೆ ತಾಳ್ಮೆಯಿಂದ ಇರಬೇಕೆಂದು ಸೂಚಿಸಿದ ಅವರು ಸರ್ಕಾರ ಕೋವಿಡ್-19 ಮಾನದಂಡಗಳನ್ನು ಜಾರಿಗೊಳಿಸಿದ್ದು ಹೆಚ್ಚಿಗೆ ಜನರು ಸೇರುವುದು ಕಾನೂನು ಭಾಹಿರವಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮಸ್ಥರು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
ಶಾಂತಿ ಪಾಲನಾ ಸಭೆಯಲ್ಲಿದ್ದ ಪಿಡಿಒ ಸಂತೋಷ ಪೂಜೇರಿ ಮಾತನಾಡಿ, `ನಿನ್ನೆಯ ಘಟನೆ ಬಗ್ಗೆ ವಿಷಾದವಿದ್ದು, ಈಗಾಗಲೇ ಗ್ರಾಮದಲ್ಲಿ ತಲೆಯೆತ್ತಿರುವ ಬೇರೆ ಬೇರೆ ನಾಯಕರ ಹೆಸರಿನಲ್ಲಿರುವ ಸರ್ಕಲ್‍ಗಳ ಸ್ಥಾಪನೆಗೆ ಗ್ರಾಮ ಪಂಚಾಯ್ತಿಯಲ್ಲಿ ಠರಾವು ಆಗಿಲ್ಲ. ಈಗ ಅವುಗಳ ಕುರಿತಾಗಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಾಲೋಚಿಸಿ ಕ್ರಮವಹಿಸಲಾಗುವುದೆಂದು ತಿಳಿಸಿದರು.
ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಖವಟಕೊಪ್ಪ ಮಾತನಾಡಿ, ಗ್ರಾಮದಲ್ಲಿರುವ ಎಲ್ಲ ಸಾರ್ವಜನಿಕ ವಸ್ತು, ಸ್ಥಳಗಳ ರಕ್ಷಣೆ ಕೇವಲ ಪಂಚಾಯತಿಯ ಜವಾಬ್ದಾರಿ ಮಾತ್ರವಲ್ಲ ಬದಲಾಗಿ ಸಾರ್ವಜನಿಕರ ಸಹಕಾರವು ಕೂಡ ಮುಖ್ಯವಾಗಿದ್ದು, ನಾಯಕರ ಪುಥ್ಥಳಿಗಳನ್ನು ಸ್ಥಾಪಿಸುವುದು ಮಾತ್ರ ನಮ್ಮ ಜವಾಬ್ದಾರಿಯಲ್ಲ ಎಲ್ಲರೂ ಗೌರವಿಸಿದಾಗ ಮಾತ್ರ ಅವುಗಳ ಅಸ್ಥಿತ್ವ ಉಳಿಯಲು ಸಾಧ್ಯವೆಂದು ತಿಳಿಸಿದರು.
ಪ್ರಮುಖ ಸರ್ಕಲ್‍ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ:
ಘಟನೆಯ ಕುರಿತು ತನಿಕೆ ಕೈಗೊಂಡ ಠಾಣಾಧಿಕಾರಿಗಳು ಪ್ರಮುಖ ಸರ್ಕಲ್‍ಗಳಲ್ಲಿ ಸಿಸಿ ಕ್ಯಾಮರಾಗಳು ಅಳವಡಿಸದಿರುವುದನ್ನು ಗಮನಿಸಿ ಸ್ಥಳದಲ್ಲಿದ್ದ ಪಂಚಾಯತ ಅಭಿವೃದ್ಧಿ ಅಧಿಕಾರಿಗೆ ಗ್ರಾಮ ಪಂಚಾಯತ ಅನುದಾನದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಅವಕಾಶವಿದ್ದು ಕೂಡಲೇ ಕ್ರಮವಹಿಸಲು ಸೂಚಿಸಿದರು. ಸಭೆಯಲ್ಲಿದ್ದ ಮುಖಂಡರು ಧ್ವನಿಗೂಡಿಸಿ ಒಂದು ವೇಳೆ ಅನುದಾನ ಲಭ್ಯವಿಲ್ಲದಿದ್ದಲ್ಲಿ ಗ್ರಾಮಸ್ಥರಿಂದ ಚಂದಾ ಹಣ ಸಂಗ್ರಹಿಸಿ ಮುಂದೆ ಈ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಸಿಸಿ ಕ್ಯಾಮರಾ ಅಳವಡಿಕೆ ಅವಶ್ಯವಾಗಿದೆಯಂದು ಸೂಚಿಸಿದರು.
ಮುಖಂಡರಾದ ಶಿವಲಿಂಗ ನಿರ್ವಾಣಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಸಿದ್ದು ಬೀರಪ್ಪ ಶೇಗುಣಸಿ, ಮುತ್ತು ಭದ್ರಶೆಟ್ಟಿ, ಶಿವಲಿಂಗ ಮಾಲಗಾಂವಿ, ಮಾದೇವ ಹುಕ್ಕೇರಿ, ದುಂಡಪ್ಪ ಸರಿಕರ, ಮುಖಂಡರಾದ ಜಿ.ಆರ್.ಶೇಗುಣಸಿ, ಮಹೇಶ ಹುಕ್ಕೇರಿ, ಭೀಮಪ್ಪ ಎರಡತ್ತಿ, ಕಮಾಲ ಪಠಾಣ, ಅಶೋಕ ಸಂತಿ, ಶಿವಲಿಂಗ ದಳವಾಯಿ, ಮಹಾಂತೇಶ ಹುಂಡೆಕಾರ, ಕೆಂಚಪ್ಪ ಶೇಗುಣಸಿ, ಶ್ರೀಮಂತ ಶೇಗುಣಸಿ ಸೇರಿದಂತೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ರಾಘವೇಂದ್ರ ಕೋಲಾರ, ಮಾರುತಿ ಶೇಗುಣಸಿ, ಅಡಿವೆಪ್ಪ ಪೂಜೇರಿ ಹಾಗೂ ಆರಕ್ಷಕ ಸಿಬ್ಬಂದಿ ಇದ್ದರು.
Social Plugin