ಸನ್ಮಾನ್ಯ ಯಡಿಯೂರಪ್ಪನವರು ಅದೇ ತಾನೆ ಹೆಣಗಾಡಿ ಮತ್ತೆ ಮುಖ್ಯಮಂತ್ರಿಗಳಾಗಿದ್ದರು. ಆದರೆ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ನೀಡಿರಲಿಲ್ಲ. ನೆರೆ ಪೀಡಿತ 10 ಜಿಲ್ಲೆಗಳಲ್ಲಿ ಒಬ್ಬನೇ ಒಬ್ಬ ಉಸ್ತುವಾರಿ ಮಂತ್ರಿ ಇರಲಿಲ್ಲ. ರಾಜಕಾರಣ ಮತ್ತು ಬದುಕು ಎರಡರಲ್ಲೂ ಇಳಿಸಂಜೆಯ ವಯಸ್ಸಿನಲ್ಲಿರುವ ಯಡಿಯೂರಪ್ಪನವರು ಏಕಾಂಗಿಯಾಗಿ ನೆರೆ ಬಂದ ಜಿಲ್ಲೆಗಳ ಮಾಹಿತಿ ಪಡೆದುಕೊಂಡು, ಪರಿಹಾರ ಕಾರ್ಯಾಚರಣೆಗಳಿಗೆ ಆದೇಶ ನೀಡುತ್ತಾ ಓಡಾಡಿದ್ದರು. ಅವತ್ತು ಯಡಿಯೂರಪ್ಪ ಸಲ್ಲಿಸಿದ್ದ ನೆರೆ ಪರಿಹಾರದ ಅರ್ಧ ಹಣವನ್ನೂ ಕೇಂದ್ರ ಇವತ್ತಿಗೂ ನೀಡಿಲ್ಲ. ತುಮಕೂರಿಗೆ ಪ್ರಧಾನಿಗಳು ಬಂದಿದ್ದಾಗ, ತೆರೆದ ಸಭೆಯ ಬಹಿರಂಗ ವೇದಿಕೆಯಲ್ಲಿ ಯಡಿಯೂರಪ್ಪನವರು ನೆರೆ ಪರಿಹಾರ ಹಣದ ಪ್ರಸ್ತಾವನೆಯನ್ನು ಪ್ರಧಾನಿಗಳ ಮುಂದಿಟ್ಟಿದ್ದರು ಎಂಬ ನೆನಪು. ಈಗ ಮತ್ತೊಮ್ಮೆ ಪುನರ್ವಸು ಮತ್ತು ಪುಷ್ಯಾ ಮಳೆಗಳ ರೌದ್ರಾವತಾರ ಮಲೆನಾಡು ಹಾಗೂ ಕರಾವಳಿಗಳಲ್ಲಿ ಪ್ರವಾಹದ ಭೀತಿ ಹುಟ್ಟಿಸಿದೆ. ಈಗ ಯಡಿಯೂರಪ್ಪನವರ ಸಚಿವ ಸಂಪುಟ ಮತ್ತು ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರ ಗ್ಯಾಂಗ್ ಸಮರ್ಥವಾಗಿದೆ. ಆದ್ರೆ ಪ್ರವಾಹಕ್ಕಿಂತ ಹೆಚ್ಚಿನ ಭೀತಿ ಖುದ್ದು ಯಡಿಯೂರಪ್ಪನವರಿಗೇ ಎದುರಾಗಿದೆ. ಅವರು ಕೂತ ಖುರ್ಚಿ ಕಾಲುಗಳ ಸ್ಕ್ರೂ ಕಳಚಿಕೊಳ್ಳುತ್ತಿದೆ. ರಾಜ್ಯ ಸಂಕಷ್ಟದ ದಿನಗಳಿಗೆ ಅಣಿಯಾಗಬೇಕಿದೆ. ಆದರೆ ಮುನ್ನಡೆಸುವ ನಾಯಕ ಯಾರು? ಮುನ್ನಡೆಸುವ ಕ್ಷಮತೆ ಮುಂದೆ ಬರುವ ನಾಯಕರಿಗೆ ಇರುತ್ತದಾ? ಯಡಿಯೂರಪ್ಪ ಇಳಿದ ಗಾಧಿಗೆ ಏರುವ ನಾಯಕ ನೆರೆ ಸಂಕಷ್ಟಕ್ಕೆ ಹೆಗಲಾಗುತ್ತಾರಾ? ಎಲ್ಲವೂ ಯಕ್ಷಪ್ರಶ್ನೆಗಳೆ! ಸಂತ್ರಸ್ತರಾಗಬಹುದಾದ ಜನರನ್ನು ಸರ್ಕಾರ ಕಾಪಾಡುವುದಿಲ್ಲ ಅಂದಾದರೇ ಪ್ರಕೃತಿಯೇ ಪೊರೆಯಬೇಕಷ್ಟೆ; ಅನಾಥೋ ದೈವ ರಕ್ಷಕಃ...

Social Plugin