ತೇರದಾಳದ ಜಮಖಂಡಿ ಕಾಗವಾಡ ರಸ್ತೆಯ ಮೇಲೆ ತಮದಡ್ಡಿ ಗ್ರಾಮದ ಸಂತ್ರಸ್ಥರು ಬೇಡಿಕೆಗಳನ್ನು ಇಡೇರಿಸುವಂತೆ ಪ್ರತಿಭಟನೆ ನಡೆಸಿದರು.
ಬೇಡಿಕೆ ಇಡೇರಿಸುವಂತೆ ತಮದಡ್ಡಿ ಸಂತ್ರಸ್ಥರಿಂದ ಪ್ರತಿಭಟನೆ
ತೇರದಾಳ : ಪ್ರತಿವರ್ಷ ಕೃಷ್ಣಾ ನದಿ ಪ್ರವಾಹದಲ್ಲಿ ಮುಳುಗಡೆಯಾಗುತ್ತಿರುವ ತಮದಡ್ಡಿ ಗ್ರಾಮಸ್ಥರ ಬೇಡಿಕೆಗಳನ್ನು ಇಡೇರಿಸುವಂತೆ ತಮದಡ್ಡಿ ಗ್ರಾಮದ ಸಂತ್ರಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಹಿಪ್ಪರಗಿ ಆಣೆಕಟ್ಟು ಯೋಜನೆಯಿಂದಾಗಿ ಹಿನ್ನೀರಿನಿಂದ ಸುಮಾರು 2005 ರಿಂದ ತಮದಡ್ಡಿ ಗ್ರಾಮ ಹಾಗೂ ಜಮೀನುಗಳು ಮುಳುಗಡೆಯಾಉತ್ತಿದ್ದು, ಗ್ರಾಮದ ಜನರು ಸಂತ್ರಸ್ಥರಾಗಿದ್ದು, ಪ್ರವಾಹದ ಸಂದರ್ಭದಲ್ಲಿ ಪ್ರತಿವರ್ಷ ರೈತರ ಬೆಳೆಗಳು ಹಾನಿಯಾಗುತ್ತಿವೆ. ಗ್ರಾಮವು ಮುಳುಗಡೆಯಾಗಿ ಸುಮಾರು 16ವರ್ಷ ಕಳೆದರೂ ಇದುವರೆಗೂ ಗ್ರಾಮಸ್ಥರಿಗೆ ಪುನರ್‍ವಸತಿ ಕಲ್ಪಿಸದೇ ಇರುವುದರಿಂದ ನಾವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೇ ನಮ್ಮ ಬೇಡಿಕೆಗಳನ್ನು ಇಡೇರಿಸಬೇಕು ಎಂದು ಪ್ರತಿಭಟನೆ ನಡೆಸಿದರು.
ತಮದಡ್ಡಿ ಗ್ರಾಮದ ಪುನರ್ ವಸತಿಗಾಗಿ ಗುರುತಿಸಲಾದ ಹಳಿಂಗಳಿ ಗ್ರಾಮದ ರಿ.ಸ.ನಂ.142/ಅ ಪೈಕಿ 89ಎಕರೆ 34ಗುಂ. ಜಾಗೆಯಲ್ಲಿ ಕೂಡಲೇ ನಿವೇಶನಗಳನ್ನು ರಚಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಂತ್ರಸ್ಥರಿಗೆ ವಾಸಿಸಲು ಅನುಕೂಲ ಮಾಡಿಕೊಡಬೇಕು. ಕೃಷ್ಣಾ ನದಿ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತಿರುವ ಎಲ್ಲ ಜಮೀನುಗಳಿಗೆ ಮತ್ತು ತೋಟದ ಮನೆಗಳಿಗೆ ಕೂಡಲೇ ಪರಿಹಾರ ಕೊಡಬೇಕು. ಪ್ರವಾಹದಿಂದಾಗಿ ಹಾನಿಗೊಳಗಾದ ರೈತರ ಬೆಳೆಗಳಿಗೆ ಗರಿಷ್ಠ ಮಟ್ಟದ ಬೆಳೆ ಪರಿಹಾರ ನೀಡಬೇಕು. ಗ್ರಾಮವು ಸಂಪೂರ್ಣವಾಗಿ ಮುಳಗಡೆಯಾಗಿರುವುದರಿಂದ ಪ್ರತಿ ಕುಟುಂಬಗಳಿಗೆ 50.000(ಐವತ್ತುಸಾವಿರ ರೂ.) ತಾತ್ಕಾಲಿಕ ಪರಿಹಾರವನ್ನು ಕೊಡಬೇಕು. ಕಳೆದ 16ವರ್ಷಗಳಿಂದ ನಿರಂತರವಾಗಿ ಪ್ರವಾಹದಿಂದಾಗಿ ಗ್ರಾಮದ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ಜಲಾವೃತವಾಗುತ್ತಿರುವುದರಿಂದ ರೈತರು ಬ್ಯಾಂಕಿನಲ್ಲಿ ಪಡೆದ ಸಾಲವನ್ನು ಮರು ಪಾವತಿಸಲು ಆಗುತ್ತಿಲ್ಲ, ಆದ್ದರಿಂದ ತಮದಡ್ಡಿ ಗ್ರಾಮದ ರೈತರ ಸಾಲವನ್ನು ಮನ್ನಾ ಮಾಡಬೇಕು. ಬೀಳಗಿ ತಾಲೂಕು ಗಲಗಲಿ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಾಣ ಮಾಡಿದ್ದು, ತಳಪಾಯ ಎತ್ತರಿಸಿರುವುದರಿಂದ ಪ್ರವಾಹದ ಸಂದರ್ಭದಲಲಿ ನೀರು ಹರಿದು ಹೋಗದೆ ತಳಪಾಯ ಮಟ್ಟದವರೆಗೆ ನೀರು ನಿಂತು ಜಮಖಂಡಿ ಮತ್ತು ರಬಕವಿ-ಬನಹಟ್ಟಿ ತಾಲೂಕಿನ ಗ್ರಾಮಗಳು ಪ್ರತಿವರ್ಷ ಪ್ರವಾಹಕ್ಕೆ ತುತ್ತಾಗುತ್ತಿವೆ. ಆದ್ದರಿಂದ ಆ ಆಣೆಕಟ್ಟು ತಳಪಾಯವನ್ನು ಕಡಿಮೆ ಮಾಡಿ ಗೇಟಗಳನ್ನು ಅಳವಡಿಸಬೇಕು ಎಂದು ಮನವಿಯಲ್ಲಿ ತಮ್ಮ ಬೇಡಿಕೆಗಳನ್ನು ಕಾಣಿಸಿದ್ದಾರೆ.
ಈ ಸಂದರ್ಭದಲ್ಲಿ ಸುಕುಮಾರ ಪಾಟೀಲ, ಬಾಬು ಶಿರಗಾರ, ಸುರೇಶ ಅಕ್ಕಿವಾಟ, ನೇಮಣ್ಣಾ ಜಮಖಂಡಿ, ಜಗದೇಶ ಚೌರಿ ಸೇರಿದಂತೆ ತಮದಡ್ಡಿ ಗ್ರಾಮದ ನೂರಾರು ಜನ ಸಂತ್ರಸ್ಥರು ಇದ್ದರು.
ಪಿಎಸ್‍ಐ ರಾಜು ಬೀಳಗಿ ಹಾಗೂ ಹೆಚ್ಚುವರಿ ಪಿಎಸ್‍ಐ ಎಸ್.ಕೆ. ಸೂರ್ಯವಂಶಿ ನೇತೃತ್ವದಲ್ಲಿ ಪೋಲಿಸ್ ಬಿಗಿ ಬಂದೂಬಸ್ತ್‍ಗೆ ಕ್ರಮ ಕೈಗೊಂಡಿದ್ದರು.
Social Plugin