ಬೆಳಗಾವಿ: 'ಸ್ಮಶಾನ ಭೂಮಿ ಒದಗಿಸಲು ಸರ್ಕಾರಿ ಜಮೀನು ಗುರುತಿಸಿ ಪ್ರಸ್ತಾವ ಸಲ್ಲಿಸುವಂತೆ ಎಲ್ಲ ತಹಶೀಲ್ದಾರ್‌ಗಳಿಗೆ ನಿರ್ದೇಶನ ನೀಡಲಾಗಿದ್ದು, ತಕ್ಷಣವೇ ಮಂಜೂರಾತಿ ಕೊಡಲಾಗುವುದು' ಎಂದು ಜಿಲ್ಲಾಧಿಕಾರಿ ಎಂಜಿ. ಹಿರೇಮಠ ತಿಳಿಸಿದರು.
ಇಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
'ಬೈಲಹೊಂಗಲ, ಅಥಣಿ ಹಾಗೂ ಇತರ ತಾಲ್ಲೂಕುಗಳಲ್ಲಿ ಸ್ಮಶಾನಕ್ಕೆ ಜಾಗ ನೀಡುವ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಪರೀಶಿಲನೆ ನಡೆಸಲಾಗಿದೆ. ಖಾಸಗಿ ಭೂ ಮಾಲೀಕರೂ ಸ್ವ ಇಚ್ಛೆಯಿಂದ ಜಾಗ ಕೊಡಬೇಕು' ಎಂದರು.
ಮದಕರಿ ನಾಯಕ ಪ್ರತಿಮೆ: 'ನಗರದ ಆರ್.ಪಿ.ಡಿ.ವೃತ್ತದಲ್ಲಿ ವೀರ ಮದಕರಿ ನಾಯಕ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ನಿಯಮಾವಳಿ ಪ್ರಕಾರ ಪ್ರಕ್ರಿಯೆ ಆರಂಭಿಸಬೇಕು' ಎಂದು ನಿರ್ದೇಶನ ನೀಡಿದರು.
'ನಿಪ್ಪಾಣಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯ ಭೂಮಿ ಖರೀದಿಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮುಂದಿನ ಸಭೆಗಳಿಗೆ ಡಿ.ಎಸ್.ಪಿ.ಗಳು ಕೂಡ ಕಡ್ಡಾಯವಾಗಿ ಹಾಜರಾಗಬೇಕು' ಎಂದು ಸೂಚಿಸಿದರು.
'ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ 2021ರ ಫೆಬ್ರುವರಿಯಿಂದ ಮೇವರೆಗೆ ₹ 69 ಲಕ್ಷ ಪರಿಹಾರ ಬಿಡುಗಡೆ ಮಾಡಲಾಗಿದೆ. ಬಾಕಿ ಇಲ್ಲ' ಎಂದರು.
ಸಮರ್ಪಕ ತನಿಖೆಗೆ ಕ್ರಮ: 'ನ್ಯಾಯಾಲಯದಲ್ಲಿ ದೌರ್ಜನ್ಯ ಪ್ರಕರಣಗಳನ್ನು ಸಮರ್ಪಕ ನಿರ್ವಹಣೆಗೆ ಒಬ್ಬ ಅಧಿಕಾರಿಯನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿದೆ' ಎಂದು ಎಎಸ್ಪಿ ಅಮರನಾಥ ರೆಡ್ಡಿ ತಿಳಿಸಿದರು.
ಡಿಸಿಪಿ ವಿಕ್ರಂ ಅಮಟೆ ಮಾತನಾಡಿ, 'ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನಿಯಮಾವಳಿ ಪ್ರಕಾರ ತನಿಖೆ ಕೈಗೊಂಡು ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತಿದೆ. ಯಾವುದೇ ಪ್ರಕರಣಗಳಲ್ಲಿ 'ಬಿ' ವರದಿ ಹಾಕುವುದು ಸುಲಭವಲ್ಲ; ಹಿರಿಯ ಅಧಿಕಾರಿಗಳು ಕೂಡ ಪರಿಶೀಲನೆ ನಡೆಸುತ್ತಾರೆ' ಎಂದು ಸದಸ್ಯರ ಗಮನಕ್ಕೆ ತಂದರು.
ಸಮಿತಿಯ ಸದಸ್ಯ ಅಶೋಕ ಅಸೋದೆ, 'ನೆರೆ ಮೊದಲಾದ ಕಾರಣದಿಂದ ನೂರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದರೂ ಉತಾರ ಇಲ್ಲದಿರುವ ಕಾರಣಕ್ಕೆ ಪರಿಹಾರ ಮತ್ತಿತರ ಸೌಲಭ್ಯ ಸಿಗುತ್ತಿಲ್ಲ. ಅಂತಹ ಕುಟುಂಬಗಳಿಗೆ ಉತಾರ ಒದಗಿಸಬೇಕು' ಎಂದು ಒತ್ತಾಯಿಸಿದರು.
ವಿದ್ಯಾರ್ಥಿವೇತನ ಬಾಕಿ ಇದೆ: 'ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ವಿದ್ಯಾರ್ಥಿವೇತನ ಬಾಕಿ ಇದ್ದು, ಬೇಗ ಬಿಡುಗಡೆ ಮಾಡಬೇಕು' ಎಂದು ಕೋರಿದರು. 'ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು' ಎಂದು ಜಿಲ್ಲಾಧಿಕಾರಿ ತಿಳಿಸಿದರು.

Social Plugin