*ನೇಕಾರ ಸಮಸ್ಯೆಗಳಿಗೆ ಡಿಕೆಶಿಯಿಂದ ಮಹತ್ವದ ಸಂವಾದ*
*ಪಕ್ಷ ಮರೆತು ಬೃಹತ್ ಧ್ವನಿಯೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲು ಉಮಾಶ್ರೀಮನವಿ*
ರಾಜ್ಯದ ನೇಕಾರ ಸಮುದಾಯದಲ್ಲಿ ಅನೇಕ ರೀತಿಯ ನೇಕಾರರಿದ್ದು, ವೃತ್ತಿಗೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳ ಕುರಿತು ದಿ.೧೮ ರವಿವಾರ ಬೆಳಿಗ್ಗೆ ೯ ಗಂಟೆಗೆ ಬನಹಟ್ಟಿಯ ಬಸವೇಶ್ವರ(ಬಿದರಿ) ಸಮುದಾಯ ಭವನದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರರಿಂದ ಸಂವಾದ ಕಾರ್ಯಕ್ರಮ ಜರುಗಲಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.


ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ
ಬನಹಟ್ಟಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿಭಿನ್ನ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ನೇಕಾರರು ಅತ್ಯಂತ ದಯನೀಯ ಸ್ಥಿತಿ ಎದುರಿಸುತ್ತಿದ್ದಾರೆ. ನೇಕಾರ ಮತ್ತು ಮಾಲಿಕರ ಏಳ್ಗೆಗೆ ಯಾವ ರೀತಿ ಸ್ಪಂದನೆ ಅಗತ್ಯವೆಂಬುದರ ಕುರಿತಾಗಿ ಹಾಗು ನೇಕಾರಿಕೆ ಸಂಪೂರ್ಣ ನಶಿಸಿ ಹೋಗುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಇದರ ಪುನಶ್ಚೇತನಕ್ಕೆ ಬೇಕಾದ ಅಗತ್ಯತೆಗಳ ಬಗ್ಗೆ ಸಂವಾದ ಪ್ರಾಮುಖ್ಯತೆ ಪಡೆಯಲಿದೆ ಎಂದು ಉಮಾಶ್ರೀ ಹೇಳಿದರು.

ಸಾಲ ಮನ್ನಾ, ಸಬ್ಸಿಡಿ ಇತರೆ ಯೋಜನೆಗಳು ನೇಕಾರರಿಗೆ ಸಾಲುತ್ತಿಲ್ಲ. ಇದರ ಸಂಪೂರ್ಣ ಪುನಶ್ಚೇತನವನ್ನು ಸರ್ಕಾರ ಯೋಜನೆಗಳ ಮೂಲಕ ರೂಪಿಸಬೇಕಿದೆ ಎಂದರು.

 ಸಾಲಮನ್ನಾ, ಕೆಎಚ್‌ಡಿಸಿ ನೇಕಾರ ಮನೆ ಸಾಲ ಮನ್ನಾ, ಹಕ್ಕು ಪತ್ರ ಕುಟುಂಬಗಳಿಗೆ ಮಾಲಿಕತ್ವ ಹಕ್ಕು, ವಿದ್ಯುತ್ ಸಬ್ಸಿಡಿಗಳನ್ನು ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನದೊಂದಿಗೆ ಯಶಸ್ವಿ ಕಂಡಿದ್ದೇನೆ. ಆದರೆ ಈಗಿನ ಸಕಾರ ಇದನ್ನು ಉಳಿಸಿಕೊಂಡು ಹೋಗುವ ಬದಲಾಗಿ ತೆರಿಗೆ ಹೆಚ್ಚಳದೊಂದಿಗೆ ವಿದ್ಯುತ್ ಹೊರೆ ಮಾಡುತ್ತಿರುವದು ತುಂಬಾ ಬೇಸರವಾಗಿದೆ ಎಂದರು.

ಒಟ್ಟಾರೆ ನೋಟು ಅಮಾನ್ಯ, ಜಿಎಸ್‌ಟಿ, ಕೊರೊನಾ, ಅತಿವೃಷ್ಠಿಯಿಂದ ಜವಳಿ ಉದ್ಯಮ ರಾಜ್ಯದಲ್ಲಿ ಅವನತಿಯತ್ತ ಸಾಗುತ್ತಿದೆ. ಸಣ್ಣ ತಾಂತ್ರಿಕ ಸಮಸ್ಯೆಗಳನ್ನೂ ಸಹಿತ ಪರಿಹರಿಸುವಲ್ಲಿ ಸರ್ಕಾರ ವೈಫಲ್ಯತೆ ಕಂಡಿದೆ. ಕಚ್ಚಾವಸ್ತುಗಳ ಮೇಲೆ ಬೆಲೆ ನಿಯಂತ್ರಣವಿಲ್ಲ ಬದಲಾಗಿ ತೆರಿಗೆ ಹೊರೆ ಇವೆಲ್ಲದರ ಕುರಿತು ಜವಳಿ ಉದ್ಯಮ ಉಳಿವಿಗಾಗಿ ಡಿ.ಕೆ. ಶಿವಕುಮಾರರಿಂದ ಚಿಂತನೆ ನಡೆಯಲಿದೆ ಕಾರಣ ನೇಕಾರರು ಪಕ್ಷಬೇಧ ಮರೆತು ಸಂವಾದದಲ್ಲಿ ದೊಡ್ಡ ಧ್ವನಿಯೊಂದಿಗೆ ಪಾಲ್ಗೊಳ್ಳಬೇಕು. 

ನೇಕಾರರಲ್ಲಿ ಮುಗ್ಧತೆ ಬಿಟ್ಟು ಹೋರಾಟದ ಮನೋಭಾವದೊಂದಿಗೆ ಮುನ್ನಡೆದಲ್ಲಿ ಯಶಸ್ಸು ಸಾಧ್ಯ ಅಲ್ಲದೆ ರಾಜ್ಯದಲ್ಲಾಗುತ್ತಿರುವ ಸರಣಿ ಆತ್ಮಹತ್ಯೆಗಳ ತಡೆಗೆ ಪರಿಹಾರ ದೊರಕುವದೆಂದು ಉಮಾಶ್ರೀ ಹೇಳಿದರು.

ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು 
ಬಾಗಲಕೋಟೆ