ತೇರದಾಳದ ಪುರಸಭೆ ಬಯಲು ರಂಗ ಮಂದಿರದಲ್ಲಿ ಪುರಸಭೆ ಪೌರ ಕಾರ್ಮಿಕರು ವೇತನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪೌರಕಾರ್ಮಿಕರು ವೇತನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ
ತೇರದಾಳ : ಕಳೆದ ಮೂರು ತಿಂಗಳಿಂದ ಅಧಿಕಾರಿಗಳು ವೇತನ ಕೊಟ್ಟಿಲ್ಲವೆಂದು ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ಪುರಸಭೆ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ನೇರ ಪಾವತಿಯ 28ಜನ ಪೌರ ಕಾರ್ಮಿಕರಿಗೆ 3ತಿಂಗಳಿಂದ ವೇತನ ಕೊಟ್ಟಿಲ್ಲಿ. ಈ ತಿಂಗಳಾದರೆ 4 ತಿಂಗಳಾಗುತ್ತದೆ. ಹಾಗೂ ಕಳೆದ 21 ತಿಂಗಳಿಂದ ಎಎಸ್‍ಐ ಹಾಗೂ ಪಿಎಫ್‍ನ್ನು ಕಟ್ಟಿರುವುದಿಲ್ಲ. ಅದನ್ನು ಕೇಳಿದರೆ ಸರಿಯಾಗಿ ಮೊದಲು ಕೆಲಸ ಮಾಡಿ ಆ ನಂತರ ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೊಣವೆಂದು ಅಧಿಕಾರಿಗಳು ಹೇಳುತ್ತಾರೆ. ಪುರಸಭೆಯ ಕಸ ತುಂಬುವ ವಾಹನಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬಜಾರದಲ್ಲಿ ಬಂದ್ ಆದರೆ ಅವುಗಳನ್ನು ಒತ್ತಿ ಒತ್ತಿ ಚಾಲೂ ಮಾಡಬೇಕು. ಆ ವಾಹನಗಳ ದುರಸ್ತಿ ಕಾರ್ಯ ಆಗಬೇಕು. ಮತ್ತು ಹ್ಯಾಂಡ್ ಗ್ಲೌಸ್ ಮತ್ತು ಗನ್ ಬೂಟ್‍ಗಳನ್ನು ಕೊಟ್ಟಿರುವುದಿಲ್ಲ. ಕೆಸರಿನಲ್ಲಿ ಹಾಗೆಯೇ ಕೈ ಹಾಕಬೇಕು ಅಧಿಕಾರಿಗಳು ಎನ್ನುತ್ತಾರೆ. ನಾವು ಮನುಷ್ಯರಲ್ಲವೆ. ಕಳೆದ ತಿಂಗಳು ವೇತನ ಕೊಡುವಂತೆ ಮುಖ್ಯಾಧಿಕಾರಿಗಳನ್ನು ಕೇಳಿದಾಗ ಬಕ್ರೀದ ಹಬ್ಬಕ್ಕೆ ಕೊಡಲಾಗುವುದು ಎಂದು ಹೇಳಿದ ಅಧಿಕಾರಿಗಳು ವೇತನ ಕೊಡುವಲ್ಲಿ ವಿಳಂಭ ಮಾಡುತ್ತಿದ್ದಾರೆ ಎಂದು ಅವರು ಪತ್ರಿಕೆಗೆ ತಿಳಿಸಿದರು.
ಈಗಾಗಲೇ ಒಬ್ಬ ಪೌರ ಕಾರ್ಮಿಕನ ಪತ್ನಿಯನ್ನು ಆಸ್ಪತ್ರಗೆ ಸೇರಿಸಲಾಗಿದೆ. ಅವರಿಗೆ ಸುಮಾರು ಒಂದು ಲಕ್ಷ ರೂ.ಗಳಷ್ಟು ಖರ್ಚಾಗಿದ್ದು, ಇಂತಹ ಸಂದರ್ಭದಲ್ಲಿಯೂ ಅಧಿಕಾರಿಗಳು ವೇತನ ಕೊಡುವಲ್ಲಿ ವಿಳಂಭ ಮಾಡುತ್ತಿದ್ದಾರೆ. ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಎಡ್ಮಿಷನ್ ಮಾಡಿಸಬೇಕು. ಅಲ್ಲಿ ಫೀ ತುಂಬಲು ಹಾಗೂ ಬುಕ್‍ಗಳನ್ನು ಕೊಳ್ಳಲು ಸಹ ನಮ್ಮ ಹತ್ತಿರ ಹಣವಿಲ್ಲ. ಪ್ರತಿ ಸಲ ನಾವು ದುಡಿದಿರುವ ವೇತನವನ್ನು ಪ್ರತಿಭಟನೆ ಮಾಡಿಯೇ ಪಡೆಯಬೇಕು. ಇದಕ್ಕೆ ಶಾಸ್ವತ ಪರಿಹಾರವಿಲ್ಲವೋ ಎಂದು ಅವರು ಪ್ರಶ್ನಿಸಿದರು.
ಪ್ರತಿ ತಿಂಗಳು ವೇತನ ಕೊಡುವಂತೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರಘುನಾಥ ಗೋಟಡಕಿ, ಸಂಜು ಹಟ್ಟಿ, ಶಂಭು ಮಾಸ್ತಿ, ದಯಾನಂದ ಮಾಂಗ, ಶೋಭಾ ಮಾಸ್ತಿ, ಗೌರವ್ವ ಮಾಸ್ತಿ, ಶೋಭಾ ಮಾಂಗ, ಕಾಂತವ್ವ ಬಿದರಿ, ಸಪ್ನಾ ಮಾಸ್ತಿ, ರೇಣುಕಾ ಸಿಂಗೆ, ವಸಂತ ಹಟ್ಟಿ, ರಾಮಪ್ಪ ಚಿನಗುಂಡಿ, ಶಿವಾನಂದ ಗೋಟಡಕಿ, ಪಾಪಣ್ಣ ಬೋದೆನ್ನವರ, ಮುತ್ತಪ್ಪ ಇಮಡೆನ್ನವರ ಸೇರಿದಂತೆ ಪೌರ ಕಾರ್ಮಿಕರು ಎಲ್ಲರೂ ಇದ್ದರು.
Social Plugin