ಜಾಗತಿಕವಾಗಿ ಮುಂದುವರೆದು ಇದೀಗ ರಬಕವಿ-ಬನಹಟ್ಟಿ ಪಟ್ಟಣವು ತಾಲೂಕಾ ಕೇಂದ್ರವಾಗಿ ೫ ವರ್ಷಗಳೇ ಗತಿಸಿದರೂ ರಬಕವಿ ಪಟ್ಟಣದ ಜನತೆಗೆ ಪೊಲೀಸ್ ಠಾಣೆ ಎಂಬುದು ಇನ್ನೂ ಗಗನಕುಸುಮವಾಗಿದೆ.
ಬನಹಟ್ಟಿ ಪೊಲೀಸ್ ಠಾಣೆಗೆ ಕೂಗಳತೆಯಲ್ಲಿರುವ ರಬಕವಿ ಪಟ್ಟಣದ ಜನತೆಗೆ ಯಾವದೇ ರೀತಿ ಸಂಬಂಧವಿಲ್ಲ. ಕನಿಷ್ಠ ಸಮಸ್ಯೆಗಳಿಗೂ ೧೦ ಕಿ.ಮೀ. ದೂರದ ತೇರದಾಳ ಪೊಲೀಸ್ ಠಾಣೆಗೆ ತೆರಳಬೇಕಾದ ಅನಿವಾರ್ಯತೆ ನಾಗರಿಕರದ್ದಾಗಿದೆ.
ಜನಸಾಮಾನ್ಯರ ಸಮಸ್ಯೆಗಳಿಗೆ ಮನೆ-ಮನೆಗೆ ತೆರಳಿ ಸ್ಪಂದಿಸುತ್ತಿರುವ ಈ ದಿನಗಳಲ್ಲಿ ನ್ಯಾಯ ಒದಗಿಸಬೇಕಾದ ಪೊಲೀಸ್ ಇಲಾಖೆಯಿಂದ ಕಳೆದ ಮರ‍್ನಾಲ್ಕು ದಶಕಗಳಿಂದ ರಬಕವಿ ಪಟ್ಟಣ ವಂಚಿತಗೊಂಡಿರುವದು ಸೋಜಿಗದ ಸಂಗತಿಯಾಗಿದೆ.
ರಬಕವಿ ನಾಗರಿಕರಿಂದ ಹಲವಾರು ಹೋರಾಟ, ಒತ್ತಾಯಗಳಾದರೂ ಯಾವದೇ ಪ್ರಯೋಜನವಾಗಿಲ್ಲ. ಸದ್ಯದ ದಿನಗಳಲ್ಲಿ ಪೊಲೀಸ್ ಠಾಣೆಗೆ ತೆರಳಬೇಕೆಂದರೆ ದೂರದ ತೇರದಾಳಕ್ಕೆ ಕನಿಷ್ಠ ನೂರು ರೂಪಾಯಿಗಳನ್ನಾದರೂ ಖರ್ಚು ಮಾಡಿಕೊಂಡೇ ಠಾಣೆಗೆ ತೆರಳಬೇಕು.
ಅಲ್ಲದೆ ಇಡೀ ದಿನ ಉದ್ಯೋಗ ಬಿಟ್ಟು ಅರ್ಜಿ ಅಥವಾ ಮನವಿ ನೀಡುವದು ಕಷ್ಟಕರ. ನೇಕಾರ ಪ್ರಧಾನ ಪಟ್ಟಣವಾಗಿರುವ ರಬಕವಿಯಲ್ಲಿ ದಿನದ ಉದ್ಯೋಗ ಮಾಡದಿದ್ದಲ್ಲಿ ಹೊಟ್ಟೆಗೆ ತನ್ನೀರು ಬಟ್ಟೆಯೇ ಗತಿ.
ಹೀಗಾಗಿ ಕೆಲವರಿಗೆ ಅನ್ಯಾಯ, ಶೋಷಣೆಯಾದರೂ ಸಹಿತ ಪೊಲೀಸ್ ಮೆಟ್ಟಿಲೇರಲು ಹಿಂದೇಟು ಹಾಕುತ್ತಿದ್ದರೆ, ಇನ್ನೂ ಕಲೆ ಜನ ಪೊಲೀಸ್ ಠಾಣೆಯನ್ನೇ ನೋಡಿಲ್ಲ.
*ಸಚಿವರು ಇತ್ತ ಕಣ್ತೆರೆಯಲಿ*
ರಾಜ್ಯಾದ್ಯಂತ ನೂತನ ತಾಲೂಕಾ ಕೇಂದ್ರವಾಗಿರುವ ೫೦ ತಾಲೂಕುಗಳಲ್ಲಿ ಪ್ರದೇಶವಾರು ಪಟ್ಟಣ ಹಾಗು ಗ್ರಾಮಗಳ ವರ್ಗಾವಣೆ ಪೊಲೀಸ್ ಠಾಣೆ ವ್ಯಾಪ್ತಿಗೆ ನಡೆಯುತ್ತಿವೆ. ಅದರಂತೆ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಆದಷ್ಟು ಬೇಗ ಅತಿ ಅವಶ್ಯವಾಗಿರುವ ರಬಕವಿ-ಬನಹಟ್ಟಿ ನಗರಸಭೆ ಅಲ್ಲದೆ, ತಾಲೂಕಾ ಕೇಂದ್ರವಾಗಿಯೂ ಹೊಂದಿರುವ ರಬಕವಿ ಪಟ್ಟಣವನ್ನು ಬನಹಟ್ಟಿ ಠಾಣೆಗೆ ವರ್ಗಾಯಿಸಬೇಕೆಂಬ ಒಕ್ಕೊರಲಿನ ಕೂಗಾಗಿದೆ.
`೧೦ ವರ್ಷಗಳಿಂದ ರಬಕವಿಯನ್ನು ಬನಹಟ್ಟಿ ಪೊಲೀಸ್ ಠಾಣೆಗೆ ಸೇರ್ಪಡೆಗೊಳಿಸಬೇಕೆಂಬ ಕೂಗಾಗಿದೆ. ಗೃಹ ಮಂತ್ರಿಗಳು ತಕ್ಷಣವೇ ಕಾರ್ಯ ಕೈಗೆತ್ತಿಕೊಂಡು ಜನರ ಮಹತ್ವದ ಸಮಸ್ಯೆಗೆ ಸ್ಪಂದಿಸಲಿ ಎಂದು ನಗರಸಭಾ ಸದಸ್ಯ ಸಂಜಯ ತೆಗ್ಗಿ ಒತ್ತಾಯಿಸಿದ್ರು
ಈ ಕುರಿತು ಯಾವದೇ ಮನವಿ ಬಂದಿಲ್ಲ. ರಬಕವಿ ಪಟ್ಟಣ ಬನಹಟ್ಟಿಗೆ ಸೇರಿಸುವ ವಿಚಾರವನ್ನು ಜನತೆ ತಿಳಿಸಿದ್ದಲ್ಲಿ ಗೃಹ ಮಂತ್ರಿಗಳೊಂದಿಗೆ ಚರ್ಚಿಸಿ ಸೇರ್ಪಡೆಗೊಳಿಸುವ ಭರವಸೆಯನ್ನು ತೇರದಾಳ ಶಾಸಕ ಸಿದ್ದು ಸವದಿ ತಿಳಿಸಿದ್ರು
`ಬಡಜನತೆಗೆ ಪೊಲೀಸ್ ಠಾಣೆಯಿಂದ ನ್ಯಾಯ ದೊರಕುವದು ಗಗನಕುಸುಮವಾಗಿದೆ. ನೂರಾರು ರೂ. ಖರ್ಚು ಮಾಡಿಕೊಂಡು ದಿನಗಟ್ಟಲೆ ಉದ್ಯೋಗ ಬಿಟ್ಟು ತೆರಳಬೇಕಾದ ಅನಿವಾರ್ಯತೆಯಿಂದ ಜನ ಠಾಣೆಯಿಂದ ದೂರ ಉಳಿಯುತ್ತಿದ್ದಾರಂದು ಹಿರಿಯರಾದ ಪ್ರಭು ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ

Social Plugin