'ಕರಗಿದ ಕೆಂಪು ಸೂರ್ಯ'

..ಮಂಡ್ಯ ಬಾಲಕರ ಸರಕಾರಿ ಕಾಲೇಜಿನಲ್ಲಿ ಎರಡನೇ ಪಿಯುಸಿ ಓದುತ್ತಿದ್ದೆ.
ಅವತ್ತಿಗೆ ಕನ್ನಡದ ಮೊಟ್ಟ ಮೊದಲ ಕ್ಯಾಸೆಟ್ ನಿತ್ಯೋತ್ಸವ, ಭಾವಸಂಗಮಗಳೆ ಲ್ಲಾಕ್ಯಾಸೆಟ್ ಬಿಡುಗಡೆಗೊಂಡು ಕನ್ನಡನಾಡಿನಲ್ಲಿ ಅತ್ಯಂತ ಸರ್ವವ್ಯಾಪಿಯಾಗಿ ನಮಗೆಲ್ಲಾ ಕನ್ನಡವನ್ನು- ಭಾವಗೀತಾತ್ಮಕತೆ ಯನ್ನು ಚಂದವಾಗಿ ಹೇಳಿ ಕೊಟ್ಟಿದ್ದಂತಹ ಹಾಡುಗಳು ಅವು. 
 ಸಿ ಅಶ್ವತ್ಥರ 'ಶಿಶುನಾಳ ಶರೀಫ'
ರ ಮನೆ ಮಾತಾಗಿ ಬಿಟ್ಟಿದ್ದ ಕಾಲವದು! 
ಒಂದಷ್ಟು ದಿನಗಳ ನಂತರ ಕವಿ ಸಿದ್ದಲಿಂಗಯ್ಯನವರ, 'ಜನ್ನಿ' ಹಾಡಿರುವ 'ಕೆಂಪು ಸೂರ್ಯ'
 ಕ್ಯಾಸೆಟ್ ಬಿಡುಗಡೆ ಆಯಿತು!

ನಮ್ಮೊಳಗೆ ಇನ್ನೊಬ್ಬ ಸೂರ್ಯ ಹುಟ್ಟಿದ !
  
ಸದಾ ವ್ಯವಸ್ಥೆಯ ಬಗ್ಗೆ ಮಾಡಿದ್ದಕ್ಕೆಲ್ಲ ಗೋಣು ಹಾಕದೆ ನಮ್ಮ ನೋವನ್ನು, ಉಂಟಾಗುತ್ತಿದ್ದ ದೌರ್ಜನ್ಯಗಳನ್ನು, ಅಸಹಾಯಕತೆಯನ್ನು.. ಸ್ಪಷ್ಟವಾಗಿ ದಿಟ್ಟವಾಗಿ ಅಭಿವ್ಯಕ್ತಿಗೊಳಿಸುವ ಒಂದು ಮಾಧ್ಯಮದ ದನಿಯಾಗಿ ಹೊಸ ಬೆಳಕಾಗಿ 
ತಕ್ಷಣವೇ ಬೀದಿನಾಟಕಗಳನ್ನು ಆಡಿ ಕನಿಷ್ಠ ಪ್ರಜಾಪ್ರತಿನಿಧಿಗಳಿಗಾದರೂ ಎಚ್ಚರಿಸಬೇಕು ಎಂಬ ಪ್ರಜ್ಞೆ ಶುರುವಾಯಿತು! ..
ಅವರ ,ಪುಸ್ತಕವನ್ನು ,ಹಾಡುಗಳನ್ನು- ಅಂಕಣಗಳ ಮೂಲಕ ಅವರು ಹೇಳುತ್ತಿದ್ದ ಅನೇಕ ಸಾಮಾಜಿಕ ವಿಷಯಗಳನ್ನು ಅವರು ಬೇರೆ-ಬೇರೆ ಕಾಲಕ್ಕೆ ಬಳಸುತ್ತಿದ್ದ ಮತ್ತು ಬದಲಾಗುತ್ತಿದ್ದ ದನಿಯ ಪರಿಯನ್ನು ನಾನು ತುಂಬಾ ಗೌರವಿಸಿದೆ. 'ಊರು ಕೇರಿ'
ಯಲ್ಲ೦ತೂ ಚಾಪ್ಲಿನ್ ನ 'ಡಾರ್ಕ್ ಕಾಮಿಡಿ' ಯ ಉತ್ತುಂಗ ಶೈಲಿಯನ್ನು ಕಂಡೆ !
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮೇಲೆ 'ಚಂದನ'ದಲ್ಲಿ ಪ್ರಸಾರವಾದ ಅವರ ಒಂದು ಸಂದರ್ಶನ ನಾನು ಜೀವನದಲ್ಲಿ ನೋಡಿದ ಅತ್ಯುತ್ತಮ ಸಂದರ್ಶನಗಳಲ್ಲಿ ಒಂದಾಗಿತ್ತು .
ಮತ್ತಷ್ಟು ಮತ್ತಷ್ಟು ಮಾಗಿದ ವಿಚಾರ, ದನಿಯ ಆಪ್ತತೆ ಎಲ್ಲವೂ ಇಷ್ಟವಾಗುತ್ತಿದ್ದವು .
14 -15 ವರ್ಷಗಳ ಹಿಂದೆ,
ನನ್ನ ಮೊದಲ ಪುಸ್ತಕ 'ರಂಗವಲ್ಲಿ' ಪುಸ್ತಕ ಪ್ರಕಟವಾಯಿತು 
ವೈದೇಹಿ ಅವರು ಮುನ್ನುಡಿ ಬರೆದಿದ್ದರು
ನಾನು ಹಸ್ತಪ್ರತಿಯನ್ನು ಇಟ್ಟುಕೊಂಡು 
ಕನ್ನಡ ಭವನದಲ್ಲಿ ಅವರ ಕಚೇರಿಯ ಮುಂದೆ ಕಾಯುತ್ತಾ ಕುಳಿತಿದೆ.
ಅವರಿಗೆ ಸುದ್ದಿ ಹೋಗಿ ತಕ್ಷಣವೇ ಒಳಗೆ ಕರೆಸಿಕೊಂಡರು .
ನಾನು ಸಂಕೋಚದಿಂದ ಮುದುರಿಕೊಂಡು ಸಣ್ಣದನಿಯಲ್ಲಿ "ಸರ್ ನನ್ನದೊಂದು ಸರಳವಾದ ಪುಸ್ತಕ ಲೋಕಾರ್ಪಣೆ ಮಾಡಬೇಕಾಗಿದೆ, ತಾವು ಬಂದರೆ ಚಂದ, ಬರಬಹುದೇ ಸಾರ್? "ಅಂತ ಕೇಳಿದೆ 
ಎಷ್ಟು ಸಂತೋಷದಿಂದ ಬೆನ್ನುತಟ್ಟಿ ಮಾತನಾಡಿದರು ಅಂದರೆ 
"ನಾವೆಲ್ಲ ವೃತ್ತಿಪರ ಬರಹಗಾರರು ಬರೆಯುವುದು ಬೇರೆ ರಮೇಶ್, 
ಬೇರೆ ಬೇರೆ ವೃತ್ತಿಯವರು 
ಒಬ್ಬ ಚಮ್ಮಾರ, ರೈತ ,ಹಮಾಲಿ ಹಾಗೆಯೇ ಒಬ್ಬ ಕಲಾವಿದ ಕೂಡ ತನ್ನ ಅನುಭವಗಳನ್ನು, ಸರಳವಾದ ತನ್ನದೇ ಭಾಷೆಯಲ್ಲಿ ಬರೆಯುವುದು ತುಂಬಾ ಮುಖ್ಯ, ಆ ಸೊಗಡನ್ನು ಮತ್ತೊಂದು ವೃತ್ತಿಯವರು ತಂದುಕೊಡುವುದು ತುಂಬಾ ಕಷ್ಟ ,ನೀವು ಬರೆದದ್ದು ತುಂಬಾ ಸಂತೋಷ, ನಾನು ಬಂದು ಬಿಡುಗಡೆ ಮಾಡಿಕೊಡುತ್ತೇನೆ" ಅಂತಂದು ಅರಳಿದ ಮುಖದೊಡನೆ ನನ್ನನ್ನು ಕಳಿಸಿಕೊಟ್ಟರು . 
ಹೇಳಿದ ದಿನಾಂಕದಲ್ಲಿ ಸಮಯಕ್ಕೆ ಸರಿಯಾಗಿ ನಟನ (ಆಗಿನ್ನೂ ಕುಟೀರ ಆಗಿತ್ತು)ಕ್ಕೆ ಬಂದು ಪುಸ್ತಕ ಬಿಡುಗಡೆ ಮಾಡಿ ,ನನ್ನ ರಂಗಭೂಮಿ ಹುಚ್ಚಿನ ಬಗ್ಗೆ ಮಾತಾಡಿದ್ದಲ್ಲದೆ ಪುಸ್ತಕದಲ್ಲಿರುವ ನನಗೆ ತಿಳಿಯದ ಅನೇಕ ಒಳ್ಳೆಯ ವಿಷಯಗಳನ್ನು ಹೇಳಿ ಒಳಿತು ಹಾರೈಸಿ ತೆರಳಿದರು. 
ನಾನು ನೆನಪಿಟ್ಟುಕೊಳ್ಳುವ ಅನೇಕ ಅಪರೂಪದ ಹಿತವಾದ ಸಂದರ್ಭಗಳಲ್ಲಿ ಅದುೂ ಒಂದು.
ಅವರ ಗೆಳೆಯರೇ ಅವರ ಮೇಲೆ ಆಕ್ರಮಣ ಮಾಡಿದಾಗಲೂ ಕೂಡ ಅವರು ಸಂಯಮದಿಂದ ಎದುರಿಸುತ್ತಿದ್ದುದು ನಮಗೆಲ್ಲಾ ಒಂದು ಮಾದರಿ ಅಂದುಕೊಳ್ಳುತ್ತೇನೆ..

ಅವರ ನಿಲುವು ಎಷ್ಟು ಚಂದವಾಗಿತ್ತು ನೋಡಿ :
"ಎಲ್ಲ ಜಾತಿಯ ಬಡವರು ಬಂದರು 
ಎಲ್ಲ ಮತಗಳ ಶೋಷಿತರು! "

ಚಿತ್ರಗಳನ್ನು ಕಾವ್ಯವಾಗಿ ಕೆತ್ತುತ್ತಿದ್ದ ಪರಿ ,
ಕಾವ್ಯಗಳಲ್ಲಿ ಕಣ್ಣಿಗೆ ಕಟ್ಟುವಂತ ಚಿತ್ರವನ್ನು ಮೂಡಿಸುತ್ತಿದ್ದ ರೀತಿಗೆ ಮತ್ತು 
ನನ್ನಂಥವನಿಗೆ ಸರಿಯಾದ ವಯಸ್ಸಿನಲ್ಲಿ 
.....ನನ್ನದಲ್ಲದ ಮತ್ತೊಂದು ನೋವಿನ ಬದುಕನ್ನು ಅನುಭವವನ್ನು ಎಳೆಎಳೆಯಾಗಿ ಪರಿಚಯಿಸಿದ ಸಮೃದ್ಧ ಸಾಹಿತ್ಯದ ಗುರುವಿಗೆ ನನ್ನ ಅಕ್ಷರ ನಮನ 🙏

- ಮಂಡ್ಯ ರಮೇಶ್ ನಟನ