ವರದಿ : ವಿಜಯ ವಾಜಂತ್ರಿ
ತೇರದಾಳದ ನಾಡಗೌಡರ ತೋಟದಲ್ಲಿ ಕಡು ಬಡವರಿಗೆ ಆಹಾರದ ಕಿಟ್‍ಗಳನ್ನು ಮಾಜಿ ಸಚಿವೆ ಉಮಾಶ್ರೀ ತಮ್ಮ ಸ್ವಂತ ಖರ್ಚಿನಿಂದ ವಿತರಿಸಿದರು.

ಮೂರನೇ ಅಲೆಯ ಬಗ್ಗೆ ಸರಕಾರ ಮುಂಜಾಗ್ರತೆಯಾಗಿ ಯಾವುದನ್ನು ತಯಾರಿ ಮಾಡಿಕೊಂಡಿಲ್ಲ.

ತೇರದಾಳ : ಭಯಾನಕ ವಾತಾವರಣದ ಮಧ್ಯ ಸರಕಾರ ಜನರ ಆರೋಗ್ಯ, ಆಹಾರ, ಉದ್ಯೋಗ ರಕ್ಷಣೆ, ಆರ್ಥಿಕ ಪರಿಸ್ಥಿತಿ ಸುಧಾರಿಸಲು ರಾಜ್ಯ ಹಾಗೂ ಕೇಂದ್ರ ಸರಕಾರದವರು ಯಾವುದೇ ರೀತಿಯಾದ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲವೆಂದು ಮಾಜಿ ಸಚಿವೆ ಉಮಾಶ್ರೀ ಆರೋಪಿಸಿದರು.
  ಪಟ್ಟಣದ ನಾಡಗೌಡರ ತೋಟದಲ್ಲಿ ಕಡು ಬಡವರಿಗೆ ಉಮಾಶ್ರೀ ತಮ್ಮ ಸ್ವಂತ ಖರ್ಚಿನಿಂದ ಆಹಾರದ ಕಿಟ್‍ಗಳನ್ನು ವಿತರಿಸಿ ಮಾತನಾಡಿ ಲಾಕ್‍ಡೌನ ಸಂದರ್ಭದಲ್ಲಿ ಜನರು ಒಂದೂವರೆ ವರ್ಷದಿಂದ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಲಾಕ್‍ಡೌನ್ ಸಂದರ್ಭದ ಎರಡು ತಿಂಗಳಲ್ಲಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಬಿಜೆಪಿ ಸರಕಾರದವರು ಹೇಳುತ್ತಾರೆ. ಕೆಲವು ಸಮುದಾಯಗಳಿಗೆ ಪ್ಯಾಕೇಜ್ ಘೋಷಣೆ ಮಾಡಿದ ಸರಕಾರ ಈ ವರೆಗೆ ಫಲಾನುಭವಿಗಳಿಗೆ ಹಣ ಬಂದು ಮುಟ್ಟಿರುವುದಿಲ್ಲ. ನೂರಾರು ಜನ ಅಟೋ ಚಾಲಕರಲ್ಲಿ ನಾಲ್ಕು ಜನರಿಗೆ ಮಾತ್ರ ಹಣ ಬಂದಿದೆ. ಪ್ರತಿಯೊಬ್ಬ ಕಾಯಕ ಜೀವಿಗೆ ಸಂಕಷ್ಟ ತಪ್ಪಿಲ್ಲ. ಮೂರನೆಯ ಅಲೆ ಬರುತ್ತದೆ ಎಂದು ಹೇಳುತ್ತಿರುವ ಸರಕಾರ ಮುಂಜಾಗ್ರತೆಯಾಗಿ ಯಾವುದನ್ನು ತಯಾರಿ ಮಾಡಿಕೊಂಡಿಲ್ಲ. ಕೋವಿಡ್‍ದಿಂದಾಗಿ ಸಾಕಷ್ಟು ಸಾವು ನೋವುಗಳು ಸಂಭವಿಸಿದವು. ಸರಕಾರಿ ಅಧಿಕಾರಿಗಳು ಮರಣ ಹೊಂದಿದರು. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಮಾತೃ ಹೃದಯದ ಕಾರ್ಯಕ್ರಮಗಳು ಜಾರಿಗೆ ಬರುತ್ತಿದ್ದವು. ನಮ್ಮ ಸರಕಾರವಿದ್ದಾಗ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಊಟ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಸರಕಾರದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ರೈತರಿಗೆ ಬೀಜ ಹಾಗೂ ರಸಗೊಬ್ಬರಗಳ ಬೆಲೆಯನ್ನು ಹೆಚ್ಚಿಸಿ ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳ ಗಗನಕ್ಕೆ ಹೋಗಿವೆ. ಸರಕಾರ ಮುಂದೆ ಬದಲಾವಣೆ ಬರಬೇಕು ಬರದೇ ಹೋದರೆ ದೇಶವನ್ನು ಸತ್ಯಾನಾಶ ಮಾಡುವುದರಲ್ಲಿ ಸಂಶಯವಿಲ್ಲ. ಮುಂಬರುವ ದಿನಗಳಲ್ಲಿ ಸರಿಯಾದ ನಿರ್ಧಾರವನ್ನು ತಗೆದುಕೊಳ್ಳಬೇಕು ಎಂದರು. 
   ಈ ಸಂದರ್ಭದಲ್ಲಿ ಪ್ರವೀಣ ನಾಡಗೌಡ ಮಾತನಾಡಿದರು. ಬ್ಲಾಕ್ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ಸುರೇಶ ಕಬಾಡಗಿ, ಶೆಟ್ಟೆಪ್ಪ ಸುಣಗಾರ, ಮಾಶೂಂ ಇನಾಮದಾರ, ಪಿ.ಎಸ್.ಮಾಸ್ತಿ, ಫಜಲ್ ಅತಾರಾವುತ್, ಪ್ರಭು ಗಸ್ತಿ, ಫೈಜುಲ್ಲಾ ಇನಾಮದಾರ, ಫಿರೋಜ ಸಂಗತ್ರಾಸ್ ಅಶೋಕ ಹಾಡಕರ, ಅಲ್ಲಾಭಕ್ಷ ನಾಯಕವಾಡಿ, ಮುನ್ನಾ ತಾಂಬೋಳಿ, ಜಿನ್ನಪ್ಪ ಹೊಸೂರ, ಶಿವಾನಂದ ಕಾಂಬಳೆ ಸೇರಿದಂತೆ ಮಹಿಳೆಯರು ಇನ್ನಿತರರು ಇದ್ದರು.