ತೇರದಾಳದ ದೇವರಾಜ ನಗರದಲ್ಲಿ ತುಂಬಿ ನಿಂತಿರುವ ಚರಂಡಿಯನ್ನು ಪೌರ ಕಾರ್ಮಿಕರೊಡನೆ ಮುಖ್ಯಾಧಿಕಾರಿ ಅಶೋಕ ಗುಡಿಮನಿಯವರು ಸ್ವಚ್ಚಗೊಳಿಸುತ್ತಿರುವುದು.
ಪಟ್ಟಣಗಳು ಸ್ವಚ್ಚತೆ ಇದ್ದರೆ ಅಭಿವೃದ್ಧಿ ಹೊಂದುವಲ್ಲಿ ಸಂಶಯವಿಲ್ಲ
ತೇರದಾಳ : ಪಟ್ಟಣದ ಪುರಸಭೆಗೆ ನೂತನ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅಶೋಕ ಗುಡಿಮನಿಯವರು ಪಟ್ಟಣದಲ್ಲಿ ತುಂಬಿನಿಂತಿರುವ ಚರಂಡಿಗಳನ್ನು ಸ್ವಚ್ಚ ಗೊಳಿಸುವುದೇ ನನ್ನ ಗುರಿ ಎನ್ನುವುದರೊಂದಿಗೆ ಪಟ್ಟಣದ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಪಟ್ಟಣಕ್ಕೆ ನೂತನ ಮುಖ್ಯಾಧಿಕಾರಿಯಾಗಿ ಬಂದಾಗ ಇಲ್ಲಿ ಹಲವಾರು ಜಟೀಲ ಸಮಸ್ಯೆಗಳಿದ್ದವು. ಅವುಗಳನ್ನು ಮೊದಲು ಅರಿತುಕೊಂಡು ಆ ಸಮಸ್ಯೆಗಳ ಬಗೆಹರಿಸಲು ಪ್ರಯತ್ನಿಸತೊಡಗಿದರು. ಬೀದಿ ದೀಪಗಳು, ಕುಡಿಯುವ ನೀರು ಜೊತೆಗೆ ಚರಂಡಿ ಇವೆಲ್ಲವುಗಳ ಸಮಸ್ಯೆಗೆ ಪರಿಹಾರ ಹುಡುಕುತ್ತ ಪಟ್ಟಣವನ್ನು ಸ್ವಚ್ಚ ಸುಂದರ ಮಾಡುವತ್ತ ಹೆಜ್ಜೆ ಹಾಕುತ್ತಿದ್ದಾರೆ. ದೇವರಾಜ ನಗರದಲ್ಲಿ ಇಲ್ಲಿಯವರೆಗೆ ಯಾರೂ ಚರಂಡಿ ಸ್ವಚ್ಚಗೊಳಿಸಿರಲಿಲ್ಲ. ಈಗ ಇವರು ಅಧಿಕಾರ ವಹಿಸಿಕೊಂಡಾಗ ಚರಂಡಿಗಳು ಸ್ವಚ್ಚತೆಯನ್ನು ಕಾಣುತ್ತಿವೆ. ಬೆಳಿಗ್ಗೆ 5ಗಂಟೆಗೆ ಪುರಸಭೆಗೆ ಬಂದು ಎಲ್ಲ ಪೌರ ಕಾರ್ಮಿಕರೊಡನೆ ತಾವು ಸ್ವಚ್ಚಗೊಳಿಸುವ ವಾರ್ಡಿಗೆ ಹೋಗಿ ಅಲ್ಲಿಯ ವಾಸ್ತವ ಪರಿಸ್ಥಿತಿಯನ್ನು ನೋಡಿ ಕೆಲಸ ಪ್ರಾರಂಭಿಸಿ ಅದಕ್ಕೆ ಬೇಕಾಗುವ ಸಲಕರಣೆಗಳು ಅಂದರೆ ಟ್ರಾಕ್ಟರ್ ಮತ್ತು ಜೆಸಿಬಿಯ ಜೊತೆಗೆ ಕೆಲಸ ಪ್ರಾರಂಭಿಸುತ್ತಿರುವ ಅಧಿಕಾರಿ ಸ್ವತಃ ತಾವೇ ಸನಿಕೆಯನ್ನು ಹಿಡಿದು ಚರಂಡಿ ಸ್ವಚ್ಚ ಮಾಡಲು ಚರಂಡಿಗೆ ಇಳಿಯುತ್ತಾರೆ. ಇಂತಹ ಅಧಿಕಾರಿ ತೇರದಾಳ ಪಟ್ಟಣಕ್ಕೆ ಬಂದಿರುವುದು ಭಾಗ್ಯ ಎನ್ನಬಹುದು.
ಇಂತಹ ಕರ್ತವ್ಯ ನಿರತ ಅಧಿಕಾರಿಗೆ ಪುರಸಭೆ ಚುನಾಯಿತ ಪ್ರತಿನಿಧಿಗಳು ಹಾಗೂ ಪಟ್ಟಣ ವಾರ್ಡಗಳಲ್ಲಿ ಜನರು ಸಹಕಾರ ನೀಡಿದರೆ ನಮ್ಮ ಪಟ್ಟಣ ಸ್ವಚ್ಚ ಸುಂದರ, ಸ್ವಸ್ಥವಾಗುವಲ್ಲಿ ಸಂಶಯವಿಲ್ಲ.

Social Plugin