- - - - - - - - - - -
ರಾಷ್ಟ್ರಪತಿಗಳೊಬ್ಬರು ಹುದ್ದೆಯಿಂದ ಕೆಳಗಿಳಿಯುತ್ತಲೇ ತನ್ನ ಆ ಹುದ್ದೆಯ ದಿನಗಳ ಬಗ್ಗೆ ಬರೆದಿದ್ದಾರೆ ಎಂಬ ಕುತೂಹಲಕ್ಕಾಗಿ ನಾನು ತರಿಸಿಕೊಂಡ ಪುಸ್ತಕ ಇದು. ಆದರೆ ತೀರಾ ನಿರಾಸೆ ಮಾಡಿತು.
ಶುದ್ಧ ವಕೀಲರ ನೋಟೀಸಿನಂತಹ ಬಿಗಿಯಾದ ಮತ್ತು ತೀರಾ ಅಧಿಕೃತ ವರದಿ ಅನ್ನಿಸುವ ತರಹದ ಬರವಣಿಗೆ. ಅದೂ ವ್ಯಕ್ತಿಯೊಬ್ಬರು ತಾನು ಸ್ವತಃ ತನ್ನ ಚಟುವಟಿಕೆಗಳ ವರದಿ ಮಾಡಿದರೆ ಹೇಗಿರುತ್ತದೆಯೋ ಹಾಗಿದೆ; ಹಾಗಂತ ಉಬ್ಬಾಳ್ತನ ಇಲ್ಲ.
ಇಡಿಯ ಪುಸ್ತಕದ ಹೈಲೈಟ್ ಎಂದರೆ ಎಲ್ಲೋ ಒಂದೆರಡು ಕಡೆ ಸೋನಿಯಾ ಗಾಂಧಿಯವರ ಬಗ್ಗೆ ಪಾಸಿಂಗ್ ಹೇಳಿಕೆ ಬಿಟ್ಟರೆ ಇಡಿಯ ಪುಸ್ತಕದಲ್ಲಿ ಅವರ ಬಗ್ಗೆ ಚಕಾರ ಇಲ್ಲ. ಜಗತ್ತಿನ ಎಲ್ಲರೊಂದಿಗೆ ಇರುವ ಚಿತ್ರಗಳಿವೆ ಆದರೆ ಸೋನಿಯಾ ಅವರೊಂದಿಗಿನ ಒಂದೂ ಚಿತ್ರ ಇಲ್ಲ. ಇದು ಕಣ್ತಪ್ಪು ಅಲ್ಲ ಅನ್ನಿಸಿದ್ದು, ನನ್ನ ಬಿಟ್ವೀನ್ ದ ಲೈನ್ ಓದು.
ಸಮಕಾಲೀನ ರಾಜಕೀಯದ ಪುಸ್ತಕ ಇದಾಗಿರುವುದರಿಂದ ಹಲವು ಹಸಿ ನೆನಪುಗಳು ಓದುಗರಾಗಿ ನಮಗೂ ಇರುವುದರಿಂದ, ಅವರ ಅಧ್ಯಕ್ಷೀಯ ಅವಧಿಯ ಘಟನೆಗಳಿಗೆ ಅವರ ದೃಷ್ಟಿಕೋನವನ್ನು ತಿಳಿಯುವುದಕ್ಕಾಗಿ ಈ ಪುಸ್ತಕದ ಬಗ್ಗೆ ಬಹಳ ನಿರೀಕ್ಷೆ ಇತ್ತು. ಪ್ರಣಬ್ ದಾ ಯಾವುದನ್ನೂ ಬಿಟ್ಟುಕೊಟ್ಟಿಲ್ಲ. ಜೊತೆಗೆ, ಅಧ್ಯಕ್ಷೀಯ ಚಟುವಟಿಕೆಗಳ ಬಗ್ಗೆ ಕ್ಯಾಶುವಲ್ ಆದ – ಜನಸಾಮಾನ್ಯರಿಗೆ ರಸವತ್ತೆನ್ನಿಸುವ-ವಿವರಣೆಗಳೂ ಇಲ್ಲ.
ಪುಸ್ತಕ ಓದಿದ ಅಂತ್ಯದಲ್ಲಿ ನನಗನ್ನಿಸಿದ್ದು, ಪ್ರಣಬ್ ದಾ ಅವರಿಗೆ ಸಕ್ರಿಯ ರಾಜಕಾರಣದಲ್ಲಿ ಅತ್ಯುನ್ನತ ಹುದ್ದೆಗೆ (ಪ್ರಧಾನಿ ಎಂದು ಓದಿಕೊಳ್ಳಿ) ಏರಲು ಸಾಧ್ಯವಾಗದ ಕಹಿ ಸಾಕಷ್ಟಿತ್ತು ಎಂದು. ತಾನು ಹಣಕಾಸು ಸಚಿವರಾಗಿದ್ದಾಗ ತನ್ನ ಹಣಕಾಸು ಸಲಹೆಗಾರರಾಗಿದ್ದ ಡಾ|ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ತಾನು ಸಚಿವನಾಗಬೇಕಾಗಿ ಬಂದದ್ದು ಮತ್ತು ಸಕ್ರಿಯ ರಾಜಕಾರಣದಲ್ಲಿ ಮುಂದುವರಿದರೆ ಉನ್ನತ ಹುದ್ದೆಗೇರಬಹುದೇನೋ ಎಂಬ ನಿರೀಕ್ಷೆಯಲ್ಲಿರುವಾಗಲೇ ರಾಷ್ಟ್ರಪತಿ ಹುದ್ದೆಗೆ ತಲುಪಿದ್ದು ಅವರಿಗೆ ರಾಜಕೀಯವಾಗಿ ಬಹಳ ಕಹಿ ಉಣ್ಣಿಸಿತ್ತನ್ನಿಸುತ್ತದೆ. ಆದರೆ ಅವರು ಜಂಟಲ್‌ಮನ್.
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಶೈಲಿಯ ಬಗ್ಗೆ ಎರಡು ಮೂರು ಕಡೆ ತನ್ನ ಅಸಹನೆಯನ್ನು ಪ್ರಣಬ್ ವ್ಯಕ್ತಪಡಿಸುತ್ತಾರೆ. ಜಪಾನ್ ಪ್ರಧಾನಿ ಭೇಟಿ ಸಂದರ್ಭ, ನೋಟು ರದ್ಧತಿಯ ನಿರ್ವಹಣೆ, ವಿದೇಶಾಂಗ ನೀತಿಗಳ ಬಗ್ಗೆ ಅರಿವಿನ ವಿವರಗಳನ್ನು ಓದಿದಾಗ ಈ ಅಸಹನೆ ಗಮನಕ್ಕೆ ಬರುತ್ತದೆ. ಆದರೆ “ತಮ್ಮ ನಡುವಿನ ಹೊಂದಾಣಿಕೆ ಇಲ್ಲದಿರುವಿಕೆಯನ್ನು ನಿಭಾಯಿಸುವಲ್ಲಿ ತಾವಿಬ್ಬರೂ ಪರಿಣತರಿದ್ದೆವು” ಎಂದು ಅದಕ್ಕೆ ಅಂಕದ ಪರದೆ ಎಳೆಯುತ್ತಾರೆ.
ಒಟ್ಟೂ ಪುಸ್ತಕ 2012-17ರ ರಾಷ್ತ್ರಪತಿ ಭವನದ ಹಿಸ್ಟರಿ ಪುಸ್ತಕ ಆಗಿ ಉಳಿಯುತ್ತದೆಯೇ ಹೊರತು ಒಳ್ಳೆಯ ಒಳನೋಟಗಳನ್ನು ಕೊಡುವ, ಪ್ರಸ್ತುತವೆನ್ನಿಸುವ ಪುಸ್ತಕವಾಗಿ ಉಳಿಯುವುದಿಲ್ಲ. ಪ್ರಣಬ್ ದಾ ಅದನ್ನು ಕೊಡುವ ಸಾಮರ್ಥ್ಯ ಇಲ್ಲದವರಾಗಿರಲಿಲ್ಲ; ಆದರೂ ಕೊಡಲಿಲ್ಲ. ಹಾಗಾಗಿ ಈ ಪುಸ್ತಕದ ಸಿಗ್ನಿಫಿಕೆನ್ಸ್ ಅಷ್ಟಕ್ಕೇ ಮುಗಿಯುತ್ತದೆ.
ಅಧ್ಯಕ್ಷ ಒಬಾಮಾ ಬಂದಾಗ ಗಣರಾಜ್ಯದಿನದ ಪ್ರೊಟೊಕಾಲ್ ಬದಲಾವಣೆ ಮತ್ತು ಮಳೆಯಲ್ಲಿ ತಾನು ತೋಯಬೇಕಾದದ್ದು, ಬಾಂಗ್ಲಾದೇಶದ ಶೇಕ್ ಹಸೀನಾ ಅವರ ಕುಟುಂಬದ ಮತ್ತು ಬುತಾನ್ ರಾಜಕುಟುಂಬದ ಜೊತೆಗಿನ ಆಪ್ತ ಬಾಂಧವ್ಯಗಳ ಕಾರಣದಿಂದಾಗಿ ಆ ದೇಶಗಳ ಜೊತೆ ಸಂಬಂಧದಲ್ಲಿ ವೈಯಕ್ತಿಕ ಸ್ನೇಹದ ಎಳೆಗಳಿದ್ದದ್ದು ಬಿಟ್ಟರೆ ಪುಸ್ತಕದಲ್ಲಿ ರಾಷ್ಟ್ರಪತಿ ಭವನದ ಖಾಸಗಿ ಸಂಗತಿಗಳೇನೂ ವ್ಯಕ್ತವಾಗಿಲ್ಲ.
ಐದು ವರ್ಷ ಆ ಅರಮನೆಯಲ್ಲಿ ವಾಸ ಇದ್ದವರಿಂದ ಅಲ್ಲಿನ ಒಳಗನ್ನು ತಿಳಿಯಬಯಸುವುದು, ಓದುಗನಾಗಿ ನನ್ನದು ಅತಿಯಾದ ನಿರೀಕ್ಷೆಯಾದೀತೆಂದು ನಾನು ಅಂದುಕೊಂಡಿಲ್ಲ. ಹಾಗಾಗಿ ನಿರಾಸೆಯಾಯಿತು. ಇನ್ನು ಬರೆಯಬಲ್ಲ ಅಧ್ಯಕ್ಷರು ರಾಷ್ಟ್ರಪತಿ ಭವನಕ್ಕೆ ಯಾವಾಗ ವಾಸಕ್ಕೆ ಬರುತ್ತಾರೋ…..!!
Rupa Publishers (2021)

Social Plugin