ವರದಿ : ವಿಜಯ ವಾಜಂತ್ರಿ
ತೇರದಾಳದ ಶ್ರೀಗುರು ಬ್ರಹ್ಮಾನಂದ ದೇವಸ್ಥಾನದಲ್ಲಿ ಕೊರೊನಾ ವಾರಿಯರ್ಸ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಆಹಾರದ ಕಿಟ್ ವಿತರಿಸಿದರು.
ತೇರದಾಳ : ಜನರನ್ನು ಒಂದೆಡೆ ಸೇರಿಸಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವೆ ಹಾಗೂ ಶಾಸಕಿ ಹಾಲು ಕೊಡುತ್ತಿದ್ದಾರೆ. ಇದು ತಪ್ಪು ಜನರ ಮನೆ ಮನೆಗೆ ಹೋಗಿ ಹಾಲು ಕೊಡಲಿ ಜನರನ್ನು ಸೇರಿಸಿ ಹಾಲು ಆಹಾರದ ಕಿಟ್ ಕೊಡುವುದರಿಂದ ಕೊರೊನಾ ಹರಡಲು ಪ್ರಚೋದನೆ ನೀಡಿದಂತಾಗುತ್ತದೆ. ಜನರನ್ನು ಕೂಡಿಸಿದರೆ ಜಿಲ್ಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.
ಪಟ್ಟಣದ ಶ್ರೀಗುರು ಬ್ರಹ್ಮಾನಂದ ದೇವಸ್ಥಾನದಲ್ಲಿ ಸಿದ್ದು ಸವದಿ ಅಭಿಮಾನ ಬಳಗದಿಂದ ಕೊರೊನಾ ವಾರಿಯರ್ಸ್ ಗೆ ಆಹಾರದ ಕಿಟ್ ವಿತರಿಸಿ ಮಾತನಾಡಿದರು. ನಾನು ಬಾಗಲಕೋಟ ಜಿಲ್ಲೆಯ ಅಧಿಕಾರಿಗಳೊಂದಿಗೆ ಸೇರಿ ಎಲ್ಲ ತಾಲೂಕುಗಳಲ್ಲಿ ಸುಮಾರು ಏಳು ಬಾರಿ ಸಭೆ ಮಾಡಿದ್ದೇನೆ. ಪಾಜಿಟಿವಿಟಿ 3.9 ಬಂದಿದೆ. ಸೋಮವಾರದೊಳಗೆ 2ರಷ್ಟು ಬಂದರೆ ಲಾಕ್‍ಡೌನ್ ತಗೆಯಲಾಗುವುದು ಆದರೆ ಬೇಕಾ ಬಿಟ್ಟಿ ತಿರುಗಾಡದೇ ಕೊರೊನಾ ನಿಯಮಗಳನ್ನು ಪಾಲಿಸಬೇಕು. ಕೊವಿಡ್ ಸಂದರ್ಭದಲ್ಲಿ ರಾಜಕೀಯ ಮಾಡುವುದು ಬೇಡ. ಎಲ್ಲರೂ ಸೇರಿ ಕೊರೊನಾ ಹರಡದಂತೆ ಪ್ರಯತ್ನ ಮಾಡೋಣ. ತಾಲೂಕಿಗೆ ಹಳ್ಳಿಗಳ ವಿಂಗಡಣೆ ಕುರಿತು ಮಾತನಾಡಿ ಕೊವಿಡ್ ಕಡಿಮೆಯಾದ ನಂತರ ಜಿಲ್ಲಾಧಿಕಾರಿಗಳು ತೇರದಾಳ ನೂತನ ತಾಲೂಕಿಗೆ ಹಳ್ಳಿಗಳನ್ನು ವಿಂಗಡಣೆ ಮಾಡುವರು ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ ಪ್ರಥಮ ಬಾರಿಗೆ ಕೊರೊನಾ ಬಂದಾಗ ಎಲ್ಲರಿಗೂ ಭಯವುಂಟಾಗಿತ್ತು. ಈಗ ಅದರ ಭಯ ಮುರಿದು ಹೋಗಿದೆ. ಸರಕಾರ ಸಾಕಷ್ಟು ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರೂ ಜನರಲ್ಲಿ ಭಯವಿಲ್ಲ. ಸಾಮಾಜಿಕ ಅಂತರವನ್ನು ಜನರು ಮರೆತಿದ್ದಾರೆ. ನಮ್ಮ ನಿರ್ಲಕ್ಷದಿಂದ ಕೊರೊನಾ ವೈರಸ್ ಹಬ್ಬಿದೆ. ನಾವು ಮೈಮರೆತರೆ ಕೊರೊನಾ ವೈರಾಣು ಹೆಚ್ಚಾಗುವ ಸಂಭವವಿದೆ. ಸಾಧ್ಯವಾದಷ್ಟು ನಮ್ಮನ್ನು ನಾವು ರಕ್ಷಣೆ ಮಾಡಬೇಕಾಗಿದೆ. ನಮ್ಮ ಪ್ರಾಣ ನಮ್ಮ ಕೈಯಲ್ಲಿದೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು. ನಾವು ಬೇಜವಾಬ್ದಾರಿಯಿಂದ ವರ್ತಿಸಿ ನಮಗೆ ಕೊರೊನಾ ಬಂದರೆ ಸರಕಾರ ಏನು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ತಹಶೀಲ್ದಾರ ಸಂಜಯ ಇಂಗಳೆ, ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಪ್ರಭಾರಿ ಅಧ್ಯಕ್ಷ ರಾಮಣ್ಣ ಹಿಡಕಲ್, ಧರೆಪ್ಪ ಉಳ್ಳಾಗಡ್ಡಿ, ಶಿವಾನಂದ ಮಂಟೂರ, ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಸಿಪಿಐ ಜೆ.ಕರುಣೇಶಗೌಡ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಪುರಸಭೆ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು. ವಿರಾಜ ಬಂಕಾಪೂರ ಸ್ವಾಗತಿಸಿ ನಿರೂಪಿಸಿದರು.

Social Plugin