ಭಾರತದ ರಾಜಕೀಯ NUMBNESS ಹೊರಟಿರುವ ಹಾದಿ - - - - - - - - - - ಇದು ಇಂದಿನ ದಿ ಹಿಂದೂ ಪತ್ರಿಕೆಯ ಸುದ್ದಿ. ಹೆಚ್ಚಿನ ಪತ್ರಿಕೆಗಳಲ್ಲಿ ಇದು ದೊಡ್ಡ ಸುದ್ದಿಯೂ ಆಗಿಲ್ಲ. ಆದರೆ, ಇದು ಮುಂಬರುವ ದಿನಗಳ ರಾಜಕೀಯ ವೈಖರಿಗಳಿಗೆ ದಿಕ್ಸೂಚಿ ಆಗಬಲ್ಲ ಸುದ್ದಿ ಎಂದುಕೊಂಡಿದ್ದೇನೆ. ಕೊರೊನಾ ನಿಜಕ್ಕೂ ಹಲವು ಸಂಗತಿಗಳನ್ನು ಜಗತ್ತಿಗೆ ಬಿಚ್ಚಿತೋರಿಸುತ್ತಿದೆ. ನಾನು ಆರಂಭದಿಂದಲೂ ದೇಶದ ರಾಷ್ಟ್ರಪತಿಗಳೇ ಅಧ್ಯಕ್ಷರಾಗಿರುವ “ರೆಡ್‌ಕ್ರಾಸ್” ಸಂಸ್ಥೆ ದೇಶದ ನೈಸರ್ಗಿಕ/ಆರೋಗ್ಯ ವಿಕೋಪಗಳ ಕಾಲದಲ್ಲಿ ಎಲ್ಲ ಪರಿಹಾರ ಕಾರ್ಯಗಳ ಏಕಮಾತ್ರ ಸ್ವಯಂಸೇವಾ ಸಂಸ್ಥೆಯ ಆಗಿರಬೇಕು ಮತ್ತು ಅಂತಹ ಎಲ್ಲ ಚಟುವಟಿಕೆಗಳು ಅದರ ಅಡಿಯಲ್ಲೇ ನಡೆಯಬೇಕು ಎಂದು ಹೇಳುತ್ತಾ ಬಂದಿರುವುದು ಈ ರೀತಿಯ ಕಾರಣಗಳಿಗಾಗಿಯೇ. ಆಪತ್ತಿನ ಕಾಲದಲ್ಲಿ ಲಸಿಕೆ, ಆರೋಗ್ಯ ಸೇವೆ, ಆರ್ಥಿಕವಾಗಿ ತೊಂದರೆಗೀಡಾಗಿರುವವರ ಸಹಾಯದಂತಹ ಸನ್ನಿವೇಶಗಳಲ್ಲಿ ರಾಜಕೀಯ ಪಕ್ಷಗಳು ತಮ್ಮತಮ್ಮ ಬ್ಯಾನರಿನಡಿ ಹಸ್ತಕ್ಷೇಪ ಮಾಡುವುದು ತೀರಾ ಕೆಟ್ಟ ಪೂರ್ವೋದಾಹರಣೆ ಆಗಲಿದೆ. ಇಂತಹ ಸಂದರ್ಭಗಳಲ್ಲಿ ಯಾವುದೇ “ಟೈಟಲ್-ಬ್ಯಾನರ್” ರಹಿತ ಮಾನವೀಯ ಸ್ವಯಂಸೇವೆ ಮಾತ್ರ ಅಪೇಕ್ಷಿತ. ಈ ಕಾರಣಕ್ಕಾಗಿಯೇ ಜಗತ್ತಿನಾದ್ಯಂತ ಎಲ್ಲ ಅಡೆತಡೆಗಳನ್ನು ಮೀರಿದ ರೆಡ್‌ಕ್ರಾಸ್ ಸಂಘಟನೆ ಇರುವುದು. ಈಗ ಬೇರೆ ರಾಜಕೀಯ ಪಕ್ಷಗಳೂ ಇಂತಹ “ಸ್ವಯಂಸೇವೆಯ” ಮೇಲಾಟಕ್ಕಿಳಿದರೆ ನಾಳೆ “ಯಾವ ಪಕ್ಷದ ಆರೋಗ್ಯ” ಪಡೆಯುವುದೆಂದು ಕಂಗಾಲಾಗುವ ಸ್ಥಿತಿ ಬಡ ಮತದಾರನಿಗೆ ಬರಬಹುದು. ರಾಜಕೀಯ ಪಕ್ಷಗಳು ಈ ಸೂಕ್ಷ್ಮಸಂವೇದನೆ ಬೆಳೆಸಿಕೊಳ್ಳದಿದ್ದರೆ, ದೇಶ ತಪ್ಪುಹಾದಿಯಲ್ಲಿ ಹೊರಟಿದೆ ಎಂದೇ ಅರ್ಥ.
Social Plugin